ಪ್ರವಾಸಿಗರು ಎಸೆದ ಕಸವನ್ನು ಪ್ರವಾಸಿಗರಿಂದಲೇ ತೆಗೆಸಿದರು : ಸ್ವಚ್ಛ ಕೊಡಗಿಗಾಗಿ ಮಾದೇಟಿರ ತಿಮ್ಮಯ್ಯ ಪ್ರಯತ್ನ

30/10/2020

ಮಡಿಕೇರಿ ಅ.30 : ಕೊಡಗಿನ ಸುಂದರ ಪರಿಸರದಲ್ಲಿ ಕಸ ಹಾಕಿ ಪರಾರಿಯಾದ ಪ್ರವಾಸಿಗರ ಜಾಡು ಹಿಡಿದು ಅವರಿಂದಲೇ ಕಸವನ್ನು ಹೆಕ್ಕಿಸಿ ಕಳುಹಿಸಿದ ಸ್ವಾರಸ್ಯಕರ ಘಟನೆಯೊಂದು ಮಡಿಕೇರಿಯಲ್ಲಿ ನಡೆದಿದೆ. ಮಡಿಕೇರಿಯಿಂದ ಚೆಟ್ಟಳ್ಳಿ ಮಾರ್ಗವಾಗಿ ತೆರಳುವ ಮಾರ್ಗ ಮಧ್ಯದಲ್ಲಿ ಬರುವ ಕೊಡಗು ವಿದ್ಯಾಲಯದ ಬಳಿ ಪ್ರವಾಸಿಗರು ತಾವು ಖರೀದಿಸಿ ತಂದಿದ್ದ ಫಿಜ್ಜಾವನ್ನು ತಮ್ಮ ವಾಹನದಲ್ಲೆ ಕುಳಿತು ತಿಂದು ನಂತರ ಅದರ ಬಾಕ್ಸ್ ಮತ್ತು ಕಸವನ್ನು ರಸ್ತೆಯಲ್ಲೆ ಸುರಿದು, ಗಲೀಜು ಮಾಡಿ ಅಲ್ಲಿಂದ ಮೈಸೂರು ಮಾರ್ಗವಾಗಿ ತೆರಳಿದ್ದಾರೆ.
ಈ ಮಾರ್ಗವಾಗಿ ತೆರಳುತ್ತಿದ್ದ ಮಾದೇಟಿರ ತಿಮ್ಮಯ್ಯ ಅವರು ಇದನ್ನು ಗಮನಿಸಿ ತಕ್ಷಣವೇ ಆ ಬಾಕ್ಸ್‍ಗಳನ್ನು ಪರಿಶೀಲಿಸಿದಾಗ ಅದರಲ್ಲಿ ಫಿಜ್ಜಾ ಖರೀದಿದಾರನ ಹೆಸರು, ವಿಳಾಸ ಮತ್ತು ಫೋನ್ ನಂಬರ್ ಪತ್ತೆಯಾಗಿದೆ. ಕೂಡಲೇ ಕಾರ್ಯಪ್ರವೃತ್ತನಾದ ಸಾಮಾಜಿಕ ಕಾರ್ಯಕರ್ತ ಮಾದೇಟ್ಟಿರ ತಿಮ್ಮಯ್ಯ, ಅ ನಂಬರ್‍ಗಳಿಗೆ ಕರೆಮಾಡಿ ಕಸ ತೆಗೆದು ಹೋಗುವಂತೆ ತಾಕೀತು ಮಾಡಿದ್ದಾರೆ. ಈ ಸಂದರ್ಬದಲ್ಲಿ ಪಿರಿಯಾಪಟ್ಟಣ ತಲುಪಿದ್ದ ಪ್ರವಾಸಿಗರು ತಿಮ್ಮಯ್ಯನವರ ಕರೆಗೆ ಸ್ಪಂದಿಸಿ ಮರಳಿ ತಾವು ಕಸ ಎಸೆದಿದ್ದ ಚೆಟ್ಟಳ್ಳಿ ರಸ್ತೆಗೆ ವಾಪಾಸು ಬಂದಿದ್ದಾರೆ. ನಂತರ ತಾವು ಕಸ ಹಾಕಿದ್ದ ಪ್ರದೇಶದಲ್ಲಿದ್ದ ಕಸವನ್ನೆಲ್ಲ ತೆಗೆದು, ಶುಚಿಗೊಳಿಸಿದ್ದಾರೆ. ತಿಮ್ಮಯ್ಯನವರು ಇಷ್ಟಕ್ಕೆ ಸುಮ್ಮನಾಗದೇ ಅವರು ಎಸೆದಿದ್ದ ಫಿಜ್ಜಾ ಬಾಕ್ಸ್‍ಗಳ ಮೇಲೆ ಅವರೆಲ್ಲರ ಫೋನ್ ನಂಬರ್ ಬರೆಸಿದ್ದಾರೆ.
ಇದರಿಂದ ಪ್ರವಾಸಿಗರು ಬೇರೆ ಎಲ್ಲೂ ಕಸ ಹಾಕದೇ ತಮ್ಮೊಂದಿಗೆ ತಾವು ತಂದಿದ್ದ ಕಸ ತೆಗೆದುಕೊಂಡು ಹೋಗುವಂತೆ ಮಡುವುದು ತಿಮ್ಮಯ್ಯನವರ ಉದ್ದೇಶವಾಗಿತ್ತು. ಪ್ರವಾಸಿಗರು ಇದಕ್ಕೆ ಒಪ್ಪಿ ತಮ್ಮ ಕಸವನ್ನು ತಾವೇ ಕೊಂಡೊಯ್ದರು.