ವಿರಾಜಪೇಟೆಯಲ್ಲಿ ಕಾಂಗ್ರೆಸ್ ಸಭೆ : ಸರ್ವರಿಗೂ ಸಮಾನ ಸ್ಥಾನಮಾನ ಕಾಂಗ್ರೆಸ್ ಕಲ್ಪಿಸಿದೆ : ಎಂಎಲ್‍ಸಿ ವೀಣಾಅಚ್ಚಯ್ಯ

30/10/2020

ಮಡಿಕೇರಿ ಅ.30 : ದೇಶದಲ್ಲಿ ಸುದೀರ್ಘ ಇತಿಹಾಸವನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರು ಸೇರಿದಂತೆ ಸರ್ವರಿಗೂ ಸಮಾನ ಸ್ಥಾನಮಾನಗಳನ್ನು ನೀಡಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ ತಿಳಿಸಿದ್ದಾರೆ.
ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ವತಿಯಿಂದ ಪಟ್ಟಣದ ದೊಡ್ಟಟ್ಟಿ ಚೌಕಿಯಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ನಗರ ಅಲ್ಪಸಂಖ್ಯಾತರ ಘಟಕದ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರು ಎನ್ನುವ ತಾರತಮ್ಯ ತೋರದೆ ಎಲ್ಲರಿಗೂ ಸಮಾನ ಸ್ಥಾನಮಾನವನ್ನು ಕಲ್ಪಿಸಿಕೊಟ್ಟಿದೆ. ಕಾರ್ಯಕರ್ತರ ಕಾರ್ಯಕ್ಷಮತೆ, ಪಕ್ಷ ನಿಷ್ಠೆಯನ್ನು ಗುರುತಿಸಿ ಪದವಿಯನ್ನು ನೀಡುತ್ತಾ ಬಂದಿದೆ. ಆದ್ದರಿಂದ ಕಾರ್ಯಕರ್ತರು ಸಮಸ್ಯೆಗಳನ್ನು ಬದಿಗೊತ್ತಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ರಾಜ್ಯ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಎ.ಕೆ.ಹ್ಯಾರಿಸ್ ಮಾತನಾಡಿ ಗ್ರಾಮ ಮಟ್ಟದಿಂದ ರಾಷ್ಟø ಮಟ್ಟದ ವೆರೆಗೆ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷ ಉನ್ನತ ಸ್ಥಾನಮಾನಗಳನ್ನು ನೀಡಿದೆ. ಪಕ್ಷ ಅಧಿಕಾರದಲ್ಲಿದ್ದಾಗ ವಿಶೇಷ ಅನುದಾನವನ್ನು ಅಲ್ಪಸಂಖ್ಯಾತರಿಗಾಗಿ ಬಿಡುಗಡೆ ಮಾಡಿದೆ. ಇದನ್ನು ಅಲ್ಪಸಂಖ್ಯಾತರು ಸ್ಮರಿಸಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿರಾಜಪೇಟೆ ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಎಸ್.ರಫೀಕ್ ಪಕ್ಷ ಸಂಘಟನೆಗಾಗಿ ಕರೆ ನೀಡಿದರು.
ವಿರಾಜಪೇಟೆ ನಗರ ಅಲ್ಪಸಂಖ್ಯಾತರ ಘಟಕದ ನೂತನ ಅಧ್ಯಕ್ಷರಾಗಿ ಅಯ್ಕೆಗೊಂಡ ಯೂನುಸ್ ರುಮಾನ್ ಅವರಿಗೆ ನೇಮಕಾತಿ ಅದೇಶದ ಪ್ರತಿಯನ್ನು ಜಿಲ್ಲಾ ಮುಖಂಡರು ನೀಡಿದರು.
ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್ ಹಾಗೂ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಮಾತನಾಡಿದರು.
ವಿರಾಜಪೇಟೆ ನಗರ ಕಾಂಗ್ರೆಸ್ ಅಧ್ಯಕ್ಷ ಜಿ.ಜಿ.ಮೊಹನ್ ಕುಮಾರ್, ಸೊನೀಯ ಬ್ರಿಗೇಡ್ ನ ಜಿಲ್ಲಾಧ್ಯಕ್ಷ ಪಿ.ವಿ.ಜಾನ್ಸನ್, ಪ್ರಧಾನ ಕಾರ್ಯದರ್ಶಿ ಅಗಸ್ಟಿನ್ ಬೆನ್ನಿ, ಮೊಹಮದ್ ರಾಫಿ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರೀಫ್, ಜಿಲ್ಲಾ ಉಪಧ್ಯಕ್ಷ ಎಂ.ಇ.ಇಸ್ಮಾಯಿಲ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಬಾಷ, ಹ್ಯಾರಿಸ್ ಹಾಜರಿದ್ದರು.