ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ 183ನೇಯ ಸಂಸ್ಮರಣಾ ದಿನಾಚರಣೆ

31/10/2020

ಮಡಿಕೇರಿ ಅ. 31 : ಹದಿನೆಳನೇಯ ಶತಮಾನದಲ್ಲಿ ವ್ಯಾಪಾರದ ನಿಮಿತ್ತವಾಗಿ ಸಮುದ್ರ ಮಾರ್ಗದ ಮೂಲಕ ಭಾರತವನ್ನು ಪ್ರವೇಶಿಸಿದ ದುರುಳ ಬ್ರಿಟಿಷರು, ಪ್ರಾರಂಭದಲ್ಲಿ ವ್ಯಾಪಾರ ವ್ಯವಹಾರವನ್ನು ಭದ್ರಪಡಿಸಿಕೊಂಡು, ನಂತರ ಹರಿದು ಹಂಚಿ ಹೋಗಿದ್ದ ಅಖಂಡ ಭಾರತದ ಆಳ್ವಿಕೆಯ ಕಡೆಗೆ ತಮ್ಮ ಗಮನವನ್ನು ಹರಿಸಿ ವಿವಿಧ ಪ್ರಾಂತ್ಯಗಳನ್ನು ಆಕ್ರಮಿಸಿಕೊಂಡರು. ನಂತರ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯನ್ನು ನಿರ್ಮಿಸಿ ಅದರ ಮೂಲಕ ಆಳ್ವಿಕೆಯನ್ನು ಪ್ರಾರಂಭ ಮಾಡಿದರು. ಹೀಗೆ ವ್ಯಾಪಾರ ವ್ಯವಹಾರಕ್ಕೆಂದು ಆಗಮಿಸಿದ ಬ್ರಿಟಿಷರು ಭಾರತದಲ್ಲಿ ಸಾಮ್ರಾಜ್ಯ ಸ್ಥಾಪನೆಯ ಕನಸು ಕಂಡರು. ನಿಧಾನವಾಗಿ ಭಾರತೀಯ ರಾಜರ ಮೇಲೆ ಒಡೆದು ಆಳುವ ನೀತಿಯನ್ನು ಪ್ರಯೋಗಿಸಿ, ಭಾರತೀಯ ರಾಜರುಗಳು ತಮ್ಮ ತಮ್ಮಲ್ಲಿಯೇ ಕಚ್ಚಾಡುವಂತೆ ಮಾಡಿದರು. ಇಂತಹ ಸಂದರ್ಭದಲ್ಲಿ ನಮ್ಮ ದೇಶದ ಹಲವಾರು ಅರಸರು ಬ್ರಿಟಿಷರ ವಸಾಹತುಶಾಹಿ ಧೋರಣೆಯನ್ನು ವಿರೋಧಿಸಿ ಹೋರಾಟ ನಡೆಸಿದರು. ಆದರೆ ಕೆಲವು ಭಾರತೀಯ ರಾಜರು ಬ್ರಿಟಿಷರ ಪರವಾಗಿ ಕೆಲಸ ಮಾಡಿದ್ದರಿಂದಾಗಿ ಬಹಳ ಸುಲಭವಾಗಿ ಬ್ರಿಟಿಷರು ಭಾರತೀಯ ರಾಜರುಗಳ ಪ್ರತಿರೋಧವನ್ನು ದಮನ ಮಾಡಿ ಸಾಮ್ರಾಜ್ಯವನ್ನು ವಿಸ್ತರಿಸಿದರು.
ಪರಕೀಯರಾದ ಬ್ರಿಟಿಷರು ಭಾರತದಲ್ಲಿ ಉovಣ oಜಿ Iಟಿಜiಚಿ ಂಛಿಣ 1858ರ ಪ್ರಕಾರ ಬ್ರಿಟನ್ನಿನ ರಾಣಿಯ ಆಜ್ಞೆಯಂತೆ ಈಸ್ಟ್ ಇಂಡಿಯಾ ಕಂಪೆನಿಯ ಮೂಲಕ ಆಳ್ವಿಕೆಯನ್ನು ಮಾಡತೊಡಗಿದರು. ಅಲ್ಲದೆ ಭಾರತೀಯರಿಗೆ ಅನಾನುಕೂಲವಾದ ಹಲವಾರು ಕಾನೂನುಗಳನ್ನು ಜಾರಿಗೆ ತರುವುದರ ಮೂಲಕ ಭಾರತೀಯರನ್ನು ಶೋಷಣೆ ಮಾಡತೊಡಗಿದರು. ಬ್ರಿಟಿಷರು ತಮ್ಮ ಸಾಮ್ರಾಜ್ಯಶಾಹಿ ನೀತಿಯ ಮೂಲಕ ಭಾರತದ ಅಮೂಲ್ಯವಾದ ಸಂಪತ್ತನ್ನು ಕೊಳ್ಳೆಹೊಡೆದು, ಭಾರತೀಯರನ್ನು ತುಂಬಾ ಕೀಳು ಭಾವನೆಯಿಂದ ನೋಡುತ್ತಿದ್ದರು. ಇಂತಹ ಸಂದರ್ಭದಲ್ಲಿ ನಮ್ಮ ದೇಶದ ಧಿಮಂತ ನಾಯಕರು ತಮ್ಮ ಪ್ರಾಣವನ್ನು ಪಣತೊಟ್ಟು, ಹಲವಾರು ವರ್ಷಗಳ ಕಾಲ ಸೆರೆಮನೆ ವಾಸ ಅನುಭವಿಸಿ, ತ್ಯಾಗ, ಬಲಿದಾನ. ಸತ್ಯ, ಅಹಿಂಸೆ, ನ್ಯಾಯ, ನೀತಿ ಮೊದಲಾದ ಮಾರ್ಗದ ಮೂಲಕ ಪರಕೀಯರ ವಿರುದ್ದ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟರು.
ಸಾಮ್ರಾಜ್ಯಶಾಹಿ ಬ್ರಿಟಿಷರ ಕ್ರೂರ ದೃಷ್ಠಿ ನಮ್ಮ ಕೊಡಗು ರಾಜ್ಯದ ಮೇಲೆ ಬಿತ್ತು. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಮ 1857ರಲ್ಲಿ ಪ್ರಾರಂಭವಾಯಿತ್ತು. ಆದರೆ ನಮ್ಮ ಅವಿಭಾಜಿತ ಕೊಡಗು ರಾಜ್ಯದಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಮಕ್ಕಿಂತಲೂ ಇಪ್ಪತ್ತು ವರ್ಷ ಮೊದಲು, ಸ್ವಾತಂತ್ರ್ಯ ಸಂಗ್ರಮದ ಕಿಚ್ಚನ್ನು ಕೊಡಗಿನ ಕೆಲವೇ ಕೆಲವು ಸ್ವಾಭಿಮಾನಿಗಳು ಹಚ್ಚಿ, ಕೆಚ್ಚೆದೆಯಿಂದ ನೇಣುಗಂಬವನ್ನು ಏರಿ ಪ್ರಾಣಾರ್ಪಣೆಯನ್ನು ಮಾಡಿರುವರು. ಅಂತಹ ವೀರಾಗ್ರಣಿಗಳಲ್ಲಿ ಮೊದಲಿಗರು ನಮ್ಮ ವೀರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರು. ಆ ಮೂಲಕ ಕೊಡಗಿನ ವೀರ ಪರಂಪರೆಯಲ್ಲಿ ಹುತಾತ್ಮ ಗುಡ್ಡೆಮನೆ ಅಪ್ಪಯ್ಯ ಗೌಡರವರು ಅಜರಾಮರರಾಗಿರುವರು.
ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರವರು ಕೊಡಗಿನ ಬಲಮರಿ ಗ್ರಾಮದ ಗುಡ್ಡೆಮನೆ ಸುಬ್ಬಪ್ಪನವರ ಪ್ರಥಮ ಪುತ್ರನಾಗಿ ಕ್ರಿ.ಶ 1792ರಲ್ಲಿ ಜನಿಸಿದರು. ಬಾಲ್ಯದಲ್ಲಿ ತುಂಬಾ ಸ್ವಾಭಿಮಾನಿ ತರುಣರಾಗಿದ್ದರು. ಅವರ ಮಡದಿ ಅಕ್ಕಮ್ಮ. ಕೊಡಗಿನ ಅರಸ ಲಿಂಗರಾಜರ ಆಳ್ವಿಕೆಯ ಕಾಲದಲ್ಲಿ ಜಮೇದಾರರಾಗಿ ಸೇವೆ ಸಲ್ಲಿಸುತ್ತಿದ್ದು, ಚಿಕವೀರರಾಜರ ಆಳ್ವಿಕೆಯ ಕಾಲ ಘಟ್ಟದಲ್ಲಿ ಇವರ ಸ್ವಾಭಿಮಾನ, ಸ್ವಾಮಿ ನಿಷ್ಠೆಯನ್ನು ಪರಿಗಣಿಸಿ ಸುಬೇದಾರ್ ರಾಗಿ ಮುಂಬಡ್ತಿಯನ್ನು ಪಡೆದಿದ್ದರು. ಅವರಲ್ಲಿದ್ದ ಶೂರತನವನ್ನು ಕಂಡು ಕೊಡಗಿನ ಅಂದಿನ ರಾಜ ಲಿಂಗರಾಜರು ಅಪ್ಪಯ್ಯಗೌಡರಿಗೆ ಓಡಾಡಲು ಕುದುರೆಯನ್ನು ನೀಡಿದರು. ಅಪ್ಪಯ್ಯಗೌಡರು ಕೊಡಗಿನಾದ್ಯಂತ ಕುದುರೆಯ ಮೂಲಕ ಓಡಾಡುತ್ತಿದ್ದರು.
ಬ್ರಿಟಿಷ್ ಸಾಮ್ರಾಜ್ಯಶಾಹಿಗಳು 1831ರಲ್ಲಿ ಅಂದಿನ ಮೈಸೂರು ಮಹಾರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರನ್ನು ಪದಚ್ಯುತಗೊಳಿಸಿ ಆಡಳಿತ ಚುಕ್ಕಾಣಿಯನ್ನು ಹಿಡಿದರು. ನಂತರ ಅವಿಭಜಿತ ಕೊಡಗು ರಾಜ್ಯವನ್ನು ಆಕ್ರಮಿಸಲು ದುರುಳ ಬ್ರಿಟಿಷ್‍ರು ಮುಂದಾದರು. ಕೊಡಗಿನ ಹಾಲೇರಿ ವಂಶದ ದೊಡ್ಡವೀರರಾಜೇಂದ್ರ ಮತ್ತು ಲಿಂಗರಾಜೇಂದ್ರ ಒಡೆಯರು ಬ್ರಿಟಿಷರೊಂದಿಗೆ ಸ್ನೇಹದಿಂದ ವರ್ತಿಸುತ್ತಿದ್ದರು. ಕೊಡಗು ರಾಜ್ಯದ ಕೊನೆಯ ರಾಜ ಚಿಕವೀರರಾಜೇಂದ್ರ ಒಡೆಯರು ಬ್ರಿಟಿಷರೊಂದಿಗೆ ಸ್ನೇಹದಿಂದ ಇದ್ದರೂ, ಆಡಳಿತ ವ್ಯವಸ್ಥೆಯಲ್ಲಿ ಬ್ರಿಟಿಷರ ಹಸ್ತಕ್ಷೇಪವನ್ನು ಸಹಿಸುತ್ತಿರಲಿಲ್ಲ.
ಅವಿಭಜಿತ ಕೊಡಗು ರಾಜ್ಯದ ಪ್ರಜೆಗಳಿಗೆ ಚಿಕವೀರರಾಜೇಂದ್ರರ ಮೇಲೆ ಇರುವ ಅಪಾರವಾದ ರಾಜಭಕ್ತಿ ಮತ್ತು ಗೌರವವನ್ನು ಗಮನಿಸಿದ, ಚಿಕವೀರರಾಜೇಂದ್ರರ ತಂಗಿ ದೇವಮ್ಮಾಜಿ ಹಾಗೂ ಪತಿ ಚೆನ್ನಬಸಪ್ಪರಿಗೆ ಅತೀವವಾದ ಅಸೂಯೆಯಾಗಿ, ಹೇಗಾದರೂ ಮಾಡಿ ಚಿಕವೀರರಾಜನನ್ನು ಸದೆಬಡಿದು ಕೊಡಗು ರಾಜ್ಯವನ್ನು ತಮ್ಮ ಅದಿಪತ್ಯಕ್ಕೆ ಪಡೆಯಲು ಬ್ರಿಟಿಷರ ಜೊತೆ ಸೇರಿ ಪಿತೂರಿ ಮಾಡಲು ಪ್ರಾರಂಭಿಸಿದರು. ಇದರ ಜೊತೆಗೆ ಅಧಿಕಾರದ ದುರಾಸೆಯಿಂದ ಬ್ರಿಟಿಷರಿಗೆ ನಿಷ್ಠರಾಗಿದ್ದ ಬೋಪು ದಿವಾನ, ಬೋಪಣ್ಣ, ಸುಬೇದಾರ್ ಬಿದ್ದಯ್ಯ, ಅಪ್ಪಚ್ಚು, ದೊಡ್ಡಯ್ಯ ಮೊದಲಾದ ದ್ರೊಹಿಗಳು ಚಿಕವೀರರಾಜೇಂದ್ರರ ವಿರುದ್ಧ ಸಂಚು ನಡೆಸತೊಡಗಿದರು.
ಚಿಕವೀರರಾಜೇಂದ್ರ ಒಡೆಯರು ಕಕ್ಕಬೆ ಸಮೀಪದ ನಾಲ್ಕುನಾಡು ಅರಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಮಯದಲ್ಲಿ ಬ್ರಿಟಿಷರ ಸೇನಾನಿ ಕರ್ನಲ್ ಫ್ರೇಜರ್ ಎಂಬುವವನು ದೇಶದ್ರೋಹಿಗಳ ಸಹಕಾರದೊಂದಿಗೆ ನಾಲ್ಕು ದಿಕ್ಕಿನಿಂದ ಕೊಡಗಿನ ಮೇಲೆ ಮುತ್ತಿಗೆ ಹಾಕುತ್ತಾನೆ. ಪಶ್ಚಿಮ, ಉತ್ತರ ಮತ್ತು ದಕ್ಷಿಣ ದಿಕ್ಕುಗಳಿಂದ ಮುತ್ತಿಗೆ ಹಾಕಿದ ಬ್ರಿಟಿಷರನ್ನು ಕೊಡಗಿನ ವೀರ ಸೈನಿಕರು ಹಿಮ್ಮೆಟ್ಟಿಸದರು. ಆದರೆ ಪೂರ್ವ ದಕ್ಕಿನಿಂದ ಮುತ್ತಿಗೆ ಹಾಕುತ್ತಿದ್ದ ಬ್ರಿಟಿಷರನ್ನು ಎದುರಿಸಲು ಬೋಪು ದಿವಾನನ ನೇತೃತ್ವದಲ್ಲಿ ಕೊಡಗಿನ ಸೇನೆಯನ್ನು ನಿಯೋಜಿಸಲಾಗಿತ್ತು. ಆದರೆ ಚಿಕವೀರರಾಜೇಂದ್ರರ ವಿರುದ್ಧ ಕಿಡಿ ಕಾರುತ್ತಿದ್ದ ಬೋಪು ದಿವಾನ ಬ್ರಿಟಿಷರ ವಿರುದ್ಧ ಯುದ್ಧ ಮಾಡುವ ಬದಲು ಬ್ರಿಟಿಷರಿಗೆ ಕುಶಾಲನಗರದ ಬಳಿ ಶರಣಾಗುತ್ತಾನೆ. ಬೋಪು ದಿವಾನನ ಕುತಂತ್ರದಿಂದಾಗಿ ಚಿಕವೀರ ರಾಜೇಂದ್ರ ಒಡೆಯರು ಬಹಳ ಸುಲಭವಾಗಿ ಬ್ರಿಟಿಷರ ಬಂಧನಕ್ಕೆ ಒಳಗಾಗಿ, 1834ರಲ್ಲಿ ಬ್ರಿಟಿಷರು ಕೊಡಗನ್ನು ಆಕ್ರಮಿಸಿಕೊಂಡು, ಚಿಕ ವೀರರಾಜರನ್ನು ಅಧಿಕಾರದಿಂದ ಇಳಿಸಿ ಮಡಿಕೇರಿಯ ಕೋಟೆಯಲ್ಲಿ ಗೃಹ ಬಂದನದಲ್ಲಿರಿಸಿ, ಮಡಿಕೇರಿ ಕೋಟೆಯ ಮೇಲೆ ಬ್ರಿಟಿಷರು ಧ್ವಜವನ್ನು ಹಾರಿಸಿದರು. ಚಿಕ ವೀರರಾಜರಿಗೆ ಅಪಾರ ಸಂಖ್ಯೆಯ ಬೆಂಬಲಿಗರಿರುವುದನ್ನು ಅರಿತ ಬ್ರಿಟಿಷರು, ಮಡಿಕೇರಿಯ ಕೋಟೆಯಲ್ಲಿ ಗೃಹ ಬಂಧನದಲ್ಲಿರಿಸಿದರೆ, ಚಿಕವೀರರಾಜರ ಬೆಂಬಲಿಗರು ಬ್ರಿಟಿಷರ ವಿರುದ್ಧ ತಿರುಗಿ ಬಿಳುವುದನ್ನು ಮನಗಂಡ ಬ್ರಿಟಿಷರು, ಬೋಪು ದಿವಾನನ ಸಲಹೆಯಂತೆ ಚಿಕವೀರರಾಜನನ್ನು ಕಾಶಿ ಯಾತ್ರೆಯ ನೆಪದಲ್ಲಿ ಗಡಿಪಾರು ಮಾಡಿದರು. ಬ್ರಿಟಿಷರು ಎಷ್ಟೇ ಎಚ್ಚರ ವಹಿಸಿದರೂ, ರಾಜರಿಗೆ ಆಪ್ತರಾದ ಗುಡ್ಡೆಮನೆ ಅಪ್ಪಯ್ಯಗೌಡ, ಹುಲಿಕೊಂದ ನಂಜಯ್ಯ, ಚೆಟ್ಟಿ ಕುಡಿಯ, ಕುರ್ತು ಕುಡಿಯ, ಪುಟ್ಟ ಬಸವರಾಜು, ಸೋಮಯ್ಯ, ಮಾಚಯ್ಯ ಮೊದಲಾದ ದೇಶ ಪ್ರೇಮಿಗಳಿಗೆ ಬ್ರಿಟಿಷರ ಸಂಚು ತಿಳಿದು ಈ ಶೂರರು ಬ್ರಿಟಿಷರ ವಿರುದ್ಧ ದಂಗೆ ಮಾಡುವ ನಿರ್ಧಾರವನ್ನು ಕೈಗೊಂಡರು.
ಬ್ರಿಟಿಷರು ಕೊಡಗು ರಾಜ್ಯವನ್ನು ಆಕ್ರಮಿಸಿಕೊಂಡು ಜನ ವಿರೋಧಿ ಕ್ರಮಗಳನ್ನು ಜಾರಿಗೆ ತಂದರು. ಕೊಡಗಿನ ಪ್ರಜೆಗಳು ಧಾನ್ಯದ ರೂಪದಲ್ಲಿ ತೆರಿಗೆಯನ್ನು ಕೊಡುವುದರ ಬದಲು, ಹಣದ ರೂಪದಲ್ಲಿ ತೆರಿಗೆಯನ್ನು ನೀಡುವಂತೆ ಆಜ್ಞೆಯನ್ನು ಮಾಡಿದರು. ಅಲ್ಲದೆ ರೈತರು ಹೊಗೆಸೊಪ್ಪ ಬೆಳೆಯಲು ಬ್ರಿಟಿಷರ ಅನುಮತಿ ಪಡೆಯುವಂತೆ ಆದೇಶಿಸಿದರು.
ಕೊಡಗಿನ ರಾಜ ಚಿಕವೀರರಾಜೇಂದ್ರರನ್ನು ಗಡಿಪಾರು ಮಾಡಿ, ಹಣದ ರೂಪದಲ್ಲಿ ತೆರಿಗೆ ವಸೂಲಾತಿ ಮಾಡುವ ಆದೇಶ ಹಾಗೂ ಹೊಗೆಸೊಪ್ಪು ಬೆಳೆಯನ್ನು ಬೆಳೆಸಲು ಬ್ರಿಟಿಷರ ಅನುಮತಿ ಪಡೆಯುವಂತೆ ನೀಡಿದ ಆದೇಶದ ಬಗ್ಗೆ ಸುಬೇರಾದ ಗುಡ್ಡೆಮನೆ ಅಪ್ಪಯ್ಯಗೌಡರು ಮತ್ತು ಅವರ ಬೆಂಬಲಿಗರು ಬ್ರಿಟಿಷ್ ಸಾಮ್ರಾಜ್ಯ ಶಾಹಿಗಳ ಕ್ರೂರ ಕ್ರಮಗಳ ವಿರುದ್ದ ದಂಗೆಗೆ ಬೇಕಾದ ಸಕಲ ಸಿದ್ದತೆಗಳನ್ನು ಮಾಡಿಕೊಂಡು ಅಧಿಕಾರವನ್ನು ದಿಕ್ಕರಿಸಿ ಸ್ವತಃ ಸೇನೆ ಕಟ್ಟಿ ಬ್ರಿಟಿಷರ ಸಾಮ್ರಾಜ್ಯಶಾಹಿ ಧೋರಣೆಯ ವಿರುದ್ದ ಯುದ್ದಕ್ಕೆ ಸಿದ್ಧತೆಯನ್ನು ಮಾಡಿಕೊಂಡರು. ಕೆದಂಪಾಡಿ ರಾಮಗೌಡ, ಅಡಕ್ಕಾರು ಅಣ್ಣಿಗೌಡ, ಪುಟ್ಟಬಸವರಾಜು, ಅಪ್ಪಯ್ಯ ಗೌಡರು ಸೇರಿಕೊಂಡು ಬ್ರಿಟಿಷರನ್ನು ಬಗ್ಗು ಬಡಿಯಲು ಉಪಾಯ ಮಾಡತೊಡಗಿದರು. ಪುಟ್ಟಬಸವರಾಜುರವರ ಹೆಸರನ್ನು ಕಲ್ಯಾಣ ಸ್ವಾಮಿ ಎಂದು ಬದಲಾಯಿಸಿ, ಕಾಶಿಯಾತ್ರೆಗೆ ತೆರಳಿರುವ ಚಿಕವೀರರಾಜೇಂದ್ರ ಒಡೆಯರು ಹಿಂತಿರುಗಿ ಬರುವ ತನಕ ಕಲ್ಯಾಣ ಸ್ವಾಮಿಯವರನ್ನು ರಾಜ್ಯಪಾಲರಾಗಿ ನೇಮಿಸಿದ್ದಾರೆ ಎಂಬ ಸುದ್ದಿ ಹರಡಿಸಿದರು. ಬ್ರಿಟಿಷರ ವಿರುದ್ಧ 1837ರ ಏಪ್ರಿಲ್ 6ರಂದು ಅಮರ ಸುಳ್ಯ ಯುದ್ದ ಪ್ರಾರಂಭ ಮಾಡಬೇಕೆಂದು ತೀರ್ಮಾನಿಸಿದರು.
ಕೆದಂಪಾಡಿ ರಾಮಗೌಡ, ಅಡಕ್ಕಾರು ಅಣ್ಣಿಗೌಡ ಹಾಗು ಮಾಚಯ್ಯಯವರು ಸುಳ್ಯದಲ್ಲಿ ಯುದ್ಧ ಸಿದ್ಧತೆಯನ್ನು ಮಾಡತೊಡಗಿದರು. ಗುಡ್ಡೆಮನೆ ಅಪ್ಪಯ್ಯಗೌಡ, ಕಲ್ಯಾಣ ಸ್ವಾಮಿ, ಹುಲಿಕೊಂದ ನಂಜಯ್ಯ, ಶಾಂತಳ್ಳಿ ಮಲ್ಲಯ್ಯ, ಚೆಟ್ಟಿ ಕುಡಿಯ, ಕುರ್ತು ಕುಡಿಯ ಮುಂತಾದವರು ಕೊಡಗಿನ ಎಲ್ಲಾ ಗ್ರಾಮಗಳಲ್ಲಿ ಸುತ್ತಾಡಿ ಬ್ರಿಟಿಷರ ವಿರುದ್ಧ ಯುದ್ದಕ್ಕೆ ಸಿದ್ಧತೆ ಮತ್ತು ಯುದ್ದ ಸಾಮಾಗ್ರಿಗಳ ಸಂಗ್ರಹಣೆಯಲ್ಲಿ ನಿರತರಾದರು. ಸುಳ್ಯದಲ್ಲಿ ಜಮಾವಣೆಗೊಂಡ ಸ್ವಾತಂತ್ರ್ಯ ಸಮರ ಸೇನೆ ಕೊಡಗಿನ ಕಡೆಗೆ ಪ್ರಯಾಣ ಬೆಳೆಸಿ, ಬ್ರಿಟಿಷರ ಅಧೀನದಲ್ಲಿ ದಿವಾನನಾಗಿದ್ದ ಲಕ್ಷ್ಮೀನಾರಯಣನ ಸಹೋದರ ರಾಮಪ್ಪಯ್ಯ ಸುಳ್ಯದಲ್ಲಿ ಸುಬೇದಾರ್ ನಾಗಿದ್ದುಕೊಂಡು, ಆ ಭಾಗದ ಜನರಿಗೆ ತೊಂದರೆ ನೀಡುತ್ತಿದ್ದ. ಹಾಗಾಗಿ ಸ್ವಾತಂತ್ರ್ಯ ಸಮರ ಸೇನೆ ರಾಮಪ್ಪಯ್ಯನ್ನು ಸೆರೆ ಹಿಡಿದು ಕೊಂದುಹಾಕಿದರು. ಆ ಸ್ಥಾನಕ್ಕೆ ತಿಮ್ಮಪ್ಪಯ್ಯನನ್ನು ಸುಬೇದಾರ್ ರಾಗಿ ಕಲ್ಯಾಣ ಸ್ವಾಮಿ ನೇಮಕ ಮಾಡಿದರು.
ಸ್ವಾತಂತ್ರ್ಯ ಸಮರ ಸೇನೆ ನಂತರ ಬೆಳ್ಳಾರೆಯ ಕೋಟೆಯನ್ನು ವಶಪಡಿಸಿಕೊಂಡು, ಬೀರಣ್ಣ ಬಂಟರನ್ನು ಬೆಳ್ಳಾರೆಯ ಸುಬೇದಾರ್ ರಾಗಿ ಕಲ್ಯಾಣ ಸ್ವಾಮಿ ನೇಮಿಸಿದರು. ಅಷ್ಟರಲ್ಲಿ ಚೆಂಬು, ಪೆರಾಜೆ ಪ್ರದೇಶದ ರೈತರು, ಯುವಕರು ಸ್ವಯಂಪ್ರೇರಿತರಾಗಿ ಕಲ್ಯಾಣ ಸ್ವಾಮಿಯವರ ಸೇನೆಯನ್ನು ಸೇರಿಕೊಂಡರು. ನಂತರ ಕಲ್ಯಾಣ ಸ್ವಾಮಿಯ ನೇತೃತ್ವದ ಸೇನೆ ಪುತ್ತೂರಿನ ಕಡೆ ದಾಳಿ ಮಾಡಿ, ನಂದಾವರದ ಬಂಗರಾಜರರು ಕಲ್ಯಾಣ ಸ್ವಾಮಿಯವರಿಗೆ ಬೆಂಬಲವನ್ನು ಸೂಚಿಸಿ, ಸೈನ್ಯದೊಂದಿಗೆ ಕಲ್ಯಾಣ ಸ್ವಾಮಿಯವರ ಕಡೆ ಸೇರಿಕೊಂಡರು. ಕಲ್ಯಾಣ ಸ್ವಾಮಿ ನಂತರ ಮಂಗಳೂರಿನ ಕಡೆ ದಾಳಿ ಪ್ರಾರಂಭಿಸಿ, ಸೆರೆಮನೆಯಲ್ಲಿದ್ದ ಯುದ್ಧ ಖೈದಿಗಳನ್ನು ಬಿಡುಗಡೆ ಮಾಡಿ, ಖೈದಿಗಳನ್ನು ತಮ್ಮ ಕಡೆಗೆ ಸೇರಿಸಿಕೊಂಡರು. ಕಲ್ಯಾಣ ಸ್ವಾಮಿ ಮಂಗಳೂರಿನಲ್ಲಿ ಹದಿಮೂರು ದಿನಗಳ ಕಾಲ ಕಲ್ಯಾಣಸ್ವಾಮಿ ಧ್ವಜವನ್ನು ಹಾರಿಸಿ ರಾಜ್ಯಭಾರ ಮಾಡಿದರು. ಈ ವಿಚಾರ ತಿಳಿದ ಬೇಂಗುನಾಡು ಮತ್ತು ತಾವುನಾಡಿನ ಜನ ಕಲ್ಯಾಣಸ್ವಾಮಿಯವರ ಬಣ ಸೇರಲು ಮುಂದಾದರು. ಆಗ ಬ್ರಿಟಿಷರ ಅಧೀನದಲ್ಲಿ ಸುಬೇದಾರ್ ರಾಗಿದ್ದ ಮಾದಯ್ಯ ಇವರಿಗೆ ಉಪಟಳ ನೀಡಿ ವಿರೋಧ ವ್ಯಕ್ತ ಪಡಿಸಿದರು. ಈ ವಿಚಾರ ತಿಳಿದ ಅಪ್ಪಯ್ಯಗೌಡರು ಸೇನೆ ಸಮೇತ ಅಲ್ಲಿಗೆ ಜಮಾಯಿಸಿ, ಮಾದಯ್ಯ ನೇತೃತ್ವದ ಬ್ರಟಿಷ್ ಸೇನೆಯನ್ನು ಬಗ್ಗುಬಡೆದು, ಮಾದಯ್ಯನನ್ನು ಸೆರೆಮನೆಗೆ ತಳ್ಳಿದರು. ಈ ವಿಚಾರ ಅರಿತ ಬೋಪು ದಿವಾನನ ಅಪಾರ ಸಂಖ್ಯೆಯ ಜೊತೆಗಾರರು ಕಲ್ಯಾಣ ಸ್ವಾಮಿಯ ಬಣ ಸೇರಿಕೊಂಡರು.
ಕಲ್ಯಾಣ ಸ್ವಾಮಿ, ಅಪ್ಪಯ್ಯ ಗೌಡ, ಹುಲಿಕೊಂದ ನಂಜಯ್ಯ, ಚೆಟ್ಟಿ ಕುಡಿಯ ಮೊದಲಾದವರು ಚರ್ಚಿಸಿ 1837ರ ಮಾರ್ಚ 5ರಂದು ಕೊಡಗಿನ ಕೋಟೆಗೆ ಮುತ್ತಿಗೆ ಹಾಕಿ, ಬ್ರಿಟಿಷರನ್ನು ಬಗ್ಗು ಬಡಿದು, ಕೊಡಗನ್ನು ಸ್ವಾಧೀನಪಡಿಸಿಕೊಳ್ಳುವುದೆಂದು ನಿರ್ಧರಿಸಿದರು. ಈ ವಿಷಯ ಬ್ರಿಟಿಷರಿಗೆ ಕೊಡಗಿನ ದೇಶ ದ್ರೋಹಿಗಳ ಮೂಲಕ ತಿಳಿದು ಈ ದಾಳಿಯನ್ನು ಬಗ್ಗು ಬಡಿಯಬೇಕು ಎಂದು ಬ್ರಿಟಿಷರು ನಿರ್ಧರಿಸಿದರು. ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಸಂಗ್ರಾಮಿಗಳು ಘಟ್ಟದ ಕೆಳಗಿನ ತಳನೀರು ಕಣಿವೆಯಲ್ಲಿ ಬೀಡುಬಿಟ್ಟಿರುವ ವಿಚಾರ ಬ್ರಿಟಿಷ್ ಅಧಿಕಾರಿ ಲೀಹಾರ್ಡಿಗೆ ತಿಳಿದು ಅವರನ್ನು ದಮನ ಮಾಡಲು ಸೇನೆಯನ್ನು ಕಳುಹಿಸಿದನು.
ಮಂಗಳೂರಿನಲ್ಲಿದ ಕಲ್ಯಾಣ ಸ್ವಾಮಿಗೆ ಈ ವಿಷಯ ತಿಳಿದು ತಕ್ಷಣ ಹುಲಿಕೊಂದ ನಂಜಯ್ಯ, ಸೋಮಯ್ಯ, ಚೆಟ್ಟಿ ಕುಡಿಯ, ಕುರ್ತು ಕುಡಿಯರ ನೇತೃತ್ವದಲ್ಲಿ ಸಾಕಷ್ಟು ಸಂಖ್ಯೆಯ ಯೋಧರನ್ನು ತಳನೀರು ಕಣಿವೆಯಲ್ಲಿ ಬೀಡುಬಿಟ್ಟಿದ ಸ್ವಾತಂತ್ರ್ಯ ಯೋಧರ ಸಹಾಯಕ್ಕೆ ಕಳುಹಿಸಿಕೊಟ್ಟರು. ಕಲ್ಯಾಣ ಸ್ವಾಮಿಯ ಸೇನೆಗೂ, ಆಂಗ್ಲರ ಸೇನೆಗೂ ಭೀಕರ ಯುದ್ಧ ನಡೆಯುತ್ತದೆ. ಕೊನೆಗೆ ಕಲ್ಯಾಣಸ್ವಾಮಿಯ ದಳಪತಿಗಳಾದ ಹುಲಿಕೊಂದ ನಂಜಯ್ಯ, ಸೋಮಯ್ಯ, ಚೆಟ್ಟಿಕಿಡಿಯ, ಕುರ್ತು ಕುಡಿಯ ಮುಂತಾದವರು ಸೆರೆಯಾಗಿ, ಮಡಿಕೇರಿ ಸೇರೆಮನೆ ಸೆರಿದರು. ಈ ವಿಷಯವನ್ನು ಅರಿತು ಅಪ್ಪಯ್ಯಗೌಡರಿಗೆ ಅಘಾತವಾಗಿ, ಆಪ್ತರೊಂದಿಗೆ ಸಮಲೋಚಿಸಿ ಬ್ರಟಿಷರ ಸ್ವಾಧೀನದಲ್ಲಿದ್ದ ಮಡಿಕೇರಿ ಕೋಟೆಗೆ ಮುತ್ತಿಗೆ ಹಾಕುವುದೆಂದು ತೀರ್ಮಾನ ಮಾಡಿದರು.
ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರು ತಮ್ಮ ಕುದುರೆಯ ಮೂಲಕ ಸ್ವಾತಂತ್ರ್ಯ ಸಂಗ್ರಾಮದ ಬಿಡಾರದತ್ತ ತೆರಳಿದರು. ತಾವುನಾಡು ಮತ್ತು ನಾಲ್ಕುನಾಡಿನ ಸ್ವಾತಂತ್ರ್ಯ ಸಂಗ್ರಾಮದ ಅಪಾರ ಸಂಖ್ಯೆಯ ಯೋಧರೊಂದಿಗೆ, ಮಡಿಕೇರಿಯ ಉತ್ತರ ಭಾಗದಲ್ಲಿ ನಾಲ್ಕು ಮೈಲು ದೂರದಲ್ಲಿ ಬಿಡಾರ ಹೂಡಿದರು. ಶಾಂತಳ್ಳಿಯ ಮಲ್ಲಯ್ಯನ ನೇತೃತ್ವದ ಸೇನೆ ಅಪ್ಪಯ್ಯಗೌಡರ ಸೇನೆಯನ್ನು ಸೇರಿಕೊಂಡಿತು. ಈ ವಿಷಯವನ್ನು ಸ್ಥಳೀಯ ರಾಜದ್ರೋಹಿಗಳು ಲೀಹಾರ್ಡಿಗೆ ತಿಳಿಸಿದ ಪರಿಣಾಮ ಲೀಹಾರ್ಡಿಯು ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿಯಾಗಿ ಅಪ್ಪಯ್ಯಗೌಡರ ಸೇನೆಯ ಮೇಲೆ ದಾಳಿಮಾಡಿದರು.
ಮಂಗಳೂರಿನಲ್ಲಿ ರಾಜ್ಯಭಾರ ಮಾಡುತ್ತಿದ್ದ ಕಲ್ಯಾಣಸ್ವಾಮಿ ಹಾಗೂ ಅವರ ಅಪ್ತರಾದ ರಾಮಗೌಡ, ಅಣ್ಣಿಗೌಡ, ಬಂಗರಾಜ ಮುಂತಾದವರು ಸಮಲೋಚನೆಯಲ್ಲಿ ತೊಡಗಿದ್ದ ಸಮಯದಲ್ಲಿ, ಬ್ರಿಟಿಷ್ ಸೇನೆ ಅವರ ಮೇಲೆ ಅನಿರೀಕ್ಷಿತ ದಾಳಿ ಮಾಡಿ ಕಲ್ಯಾಣ ಸ್ವಾಮಿ, ರಾಮಗೌಡ, ಬಂಗರಾಜರನ್ನು ಸೆರೆ ಹಿಡಿದು, ಮಂಗಳೂರಿನ ಬಿಕ್ರಾನಕಟ್ಟೆಯಲ್ಲಿ ಅಮಾನುಷವಾಗಿ ಗಲ್ಲಗೇರಿಸಿದರು.
ಗುಡ್ಡೆಮನೆ ಅಪ್ಪಯ್ಯಗೌಡರೊಂದಿಗೆ ಸೆರೆಯಾಳುಗಳಾದ ನಾಲ್ಕುನಾಡಿನ ಉತ್ತು, ಪೆರಾಜೆಯ ಪಾರುಪತ್ತೆಗಾರ ಕೃಷ್ಣಯ್ಯ, ಶಾಂತಳ್ಳಿಯ ಮಲ್ಲಯ್ಯ, ಚೆಟ್ಟಿಕುಡಿಯ ಇವರುಗಳ ವಿರುದ್ಧ ಆಂಗ್ಲರು ವಿಚಾರಣೆಯ ನಾಟಕ ಮಾಡಿ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಸಿಂಗಾಪುರ ಮತ್ತು ಕಲ್ಲಿಕೊಟೆಯ ಸೆರೆಮನೆಗೆ ತಳ್ಳಿದರು. ಅಪ್ಪಯ್ಯಗೌಡರ ಸಹೋದರ ಪಾರುಪತ್ತೆಗಾರ ತಮ್ಮಯ್ಯಗೌಡರನ್ನು ಸೆರೆಹಿಡಿದು ಸಿಂಗಾಪುರ ಸೆರೆಮನೆಗೆ ತಳ್ಳಿದರು.
ಬ್ರಟಿಷರ ವಿರುದ್ಧದ ದಂಗೆಗೆ ಸೂತ್ರಧಾರಿ ಗುಡ್ಡೆಮನೆ ಅಪ್ಪಯ್ಯಗೌಡ ಎಂಬುವುದನ್ನು ತಿಳಿದ ಬ್ರಟಿಷರು, ಅಪ್ಪಯ್ಯಗೌಡರ ವಿರುದ್ಧ ವಿಶೇಷ ವಿಚಾರಣೆ ನಡೆಸಿ, ಇವರನ್ನು ಜೀವಂತವಾಗಿ ಬಿಟ್ಟರೆ ಮತ್ತೆ ಬ್ರಿಟಿಷರ ಮೇಲೆ ದಾಳಿಯನ್ನು ನಡೆಸುತ್ತಾರೆ ಎಂದು ಅರಿತು, ಬ್ರಿಟಿಷರ ನ್ಯಾಯಾಲಯ ಸಾರ್ವಜನಿಕರ ಎದುರು ಬಹಿರಂಗವಾಗಿ ಗಲ್ಲಿಗೇರಿಸಬೇಕೆಂದು ತೀರ್ಪು ನೀಡುತ್ತದೆ. ಬ್ರಿಟಿಷರು ಗುಡ್ಡೆಮನೆ ಅಪ್ಪಯ್ಯ ಗೌಡರನ್ನು 1837ರ ಅಕ್ಟೋಬರ್ 31ರಂದು ಬೆಳ್ಳಿಗೆ 10ಗಂಟೆಗೆ ಮಡಿಕೇರಿ ಕೋಟೆಯ ಮುಂಭಾಗದಲ್ಲಿ ಬಹಿರಂಗವಾಗಿ ಗಲ್ಲಿಗೇರಿಸುವುದೆಂದು ನಿರ್ಧರಿಸಿದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸೆರೆಯಾದ ಗುಡ್ಡೆಮನೆ ಅಪ್ಪಯ್ಯಗೌಡರನ್ನು ನೇಣುಹಾಕುವ ಸಂದರ್ಭದಲ್ಲಿ ಅವರ ಪತ್ನಿ ಮದುಮಗಳ ಉಡುಪಿನಲ್ಲಿ ಹಾಜರಿರಬೇಕು, ಅಲ್ಲದೆ ಜಿಲ್ಲೆಯ ಸಾರ್ವಜನಿಕರು, ರೈತರು, ಅಧಿಕಾರಿಗಳು, ಪಟೇಲರುಗಳು ಹಾಜರಿರಬೇಕೆಂದು ಬ್ರಿಟಿಷ್ ಅಧಿಕಾರಿ ಲೀಹಾರ್ಡಿ ಆದೇಶ ಮಾಡದರು. ಅದರಂತೆ ಬ್ರಿಟಿಷರು ಗುಡ್ಡೆಮನೆ ಅಪ್ಪಯ್ಯಗೌಡರನ್ನು ನೇಣುಗಂಬಕ್ಕೆ ಏರಿಸಿದರು. ಕೊಡಗಿನ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಜ್ವಲಿಸುತ್ತಿದ್ದ ಜ್ಯೋತಿ ನಂದಿಹೋಯಿತ್ತು. ದೇಶದ ಸ್ವಾಂತತ್ರ್ಯಕ್ಕಾಗಿ ನೇಣುಗಂಬವನ್ನು ಏರಿದ ಮೊದಲ ವೀರ ಸೇನಾನಿ ಎಂಬ ಹಗ್ಗಳಿಕೆಗೆ ಪಾತ್ರರಾಗಿ, ಸ್ವಾತಂತ್ರ್ಯ ಹೋರಾಟದ ಸ್ಮøತಿಫಟಲದಲ್ಲಿ ಸುವರ್ಣ ಅಕ್ಷರಗಳಿಂದ ಬರೆಯಲ್ಪಟ್ಟರು. ಆ ಮೂಲಕ ಕೊಡಗಿನ ವೀರ ಪರಂಪರೆಯಲ್ಲಿ ಹುತಾತ್ಮ ಗುಡ್ಡೆಮನೆ ಅಪ್ಪಯ್ಯ ಗೌಡರವರ ಹೆಸರು ಅಜರಾಮರವಾಗಿದೆ. ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರು ಹುತಾತ್ಮರಾಗಿ ಇಂದಿಗೆ 183 ವರ್ಷಗಳು ಕಳೆದಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ಬಲಿದಾನ ಮಾಡಿರುವ ವೀರಾಗ್ರಣಿ ಸುಭೇದಾರ ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಸಂಸ್ಮರಣೆ ಮಾಡುವುದು ಭಾರತೀಯರಾದ ನಮ್ಮ ಆದ್ಯ ಕರ್ತವ್ಯ.
ಸ್ವಾತಂತ್ರ್ಯ ಹೋರಾಟಗರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡ ಒಬ್ಬ ಜಾತ್ಯತೀತ ನಿಲುವನ್ನು ಹೊಂದಿರುವ ನಾಯಕ. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನೇತಾಜಿ ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ್ ಅಜಾದ್, ಭಗತ್‍ಸಿಂಗ್, ವೀರಾಸಾವರ್ಕರ್‍ರಂತಹ ಧೀಮಂತ ನಾಯಕರ ಸಾಲಿನಲ್ಲಿ ನಿಲ್ಲುವ ವ್ಯಕ್ತಿ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡ. ಇವರನ್ನು ಕೇವಲ ಒಂದು ಸಮುದಾಯದ ನಾಯಕ ಎಂದು ಭಾವಿಸಿದರೆ ಖಂಡಿತ ತಪ್ಪಾಗುತ್ತದೆ. ಇವರ ಕಟ್ಟಕಡೆಯ ಗುರಿ ಬ್ರಿಟಿಷರನ್ನು ಹಿಮ್ಮೆಟ್ಟಿಸುವುದಾಗಿತ್ತು. ಒಂದು ವೇಳೆ ಇವರಲ್ಲಿ ಅಧಿಕಾರದ ವ್ಯಾಮೋಹವಿದಿದ್ದರೆ ಖಂಡಿತ ಬ್ರಟಿಷರ ಜೊತೆ ಸೇರಿಕೊಂಡು ಉನ್ನತ ಹುದ್ದೆಯನ್ನು ಅಲಂಕರಿಸಬಹುದಿತ್ತು. ಅವರ ರಕ್ತದ ಕಣಕಣದಲ್ಲಿ ವೀರತ್ವ, ಶೂರತ್ವವಿತ್ತೆ ವಿನಹಃ ಅಧಿಕಾರದ ದುರಾಸೆ ಇರಲಿಲ್ಲ. ಇವರ ಜೊತೆಯಲ್ಲಿ ಕೊಡಗಿನ ಹಲವಾರು ಕೊಡವ, ಗೌಡ, ಕುಡಿಯ, ಬಿಲ್ಲವ, ಬಂಟ ಮೊದಲಾದ ಸಮುದಾಯಕ್ಕೆ ಸೇರಿದ ನಾಯಕರುಗಳು ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಪ್ರಾಣಾರ್ಪಣೆ ಮಾಡಿರುವುದನ್ನು ನಾವು ಕಾಣಬಹುದು.
ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರು ಕೊಡಗಿನ ಸ್ವಾತಂತ್ರ್ಯಕ್ಕಾಗಿ ನೇಣುಕುಣಿಕೆಯನ್ನು ಏರಲು ನಮ್ಮೊಳಗೇ ಇದ್ದ ನಮ್ಮ ದೇಶದ್ರೋಹಿಗಳೇ ಕಾರಣ ಎಂದರೆ ತಪ್ಪಾಗಲಾರದು. ಅಧಿಕಾರದ ದುರಾಸೆಯಿಂದ ಹಲವಾರು ದೇಶಿಯ ನಾಯಕರುಗಳು ಬ್ರಿಟಿಷರ ಸೇವಕರಂತಿದ್ದ ನಿದರ್ಶನಗಳನ್ನು ಕಾಣಬಹುದು. ಅವರು ನೇಣುಗಂಬವನ್ನು ಏರುವಾಗ ನಗುನಗುತ್ತಲೆ ನೇಣು ಕಂಬವನ್ನು ಏರಿದರು ಎಂದು ಇತಿಹಾಸದ ಪುಟಗಳಲ್ಲಿ ಕಾಣಬಹುದು. ಆದರೆ ಅವರು ಕೂಡ ನಮ್ಮ ಹಾಗೇ ಒಬ್ಬ ಮನುಷ್ಯ ನೋವನ್ನು ಅನುಭವಿಸಿರುತ್ತಾರೆ, ಆದರೆ ನನ್ನ ಮುಂದಿನ ಪೀಳಿಗೆಯವರು ಇಂತಹ ದಾಸ್ಯದ ಸಂಕೋಲೆಯಿಂದ ಮುಕ್ತರಾಗಲಿ ಎಂದು ಆ ನೋವನ್ನು ಸಹಿಸಿಕೊಂಡು ನೇಣುಗಂಬಕ್ಕೆ ಏರಿದರು. ಇಂತಾಹ ಧೀಮಂತ ಉದಾತ್ತ ನಾಯಕರನ್ನು ಕೇವಲ ಅವರ ಪುತ್ಥಳಿಗೆ ಹೂವನ್ನು ಅರ್ಪಿಸಿ, ಅವರ ಸ್ಮಾರಕ ಎದುರು ಪೋಟವನ್ನು ಕ್ಲಿಕಿಸಿ, ವ್ಯಾಟ್ಸಪ್, ಫೇಸಬುಕ್‍ಗಳಲ್ಲಿ ಹಾಕಿ ಸಂಭ್ರಮಿಸಿದರೆ ಸಾಲದು. ಅವರ ಪುತ್ಥಳಿಗೆ ನಮನವನ್ನು ನಮ್ಮ ಅಂತರಾತ್ಮದ ಮೂಲಕ ಅರ್ಪಿಸಿ ಸದಾ ಸ್ಮರಿಸುವಂತಾಗಬೇಕು. ಆಗ ಮಾತ್ರ ನಾವು ಅರ್ಪಿಸುವ ನಮನಕ್ಕೆ ಅರ್ಥಬರುತ್ತದೆ. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀಮಂತ ನಾಯಕರನ್ನು ಸದಾ ಸ್ಮರಿಸೋಣ. ಇತಿಹಾಸವನ್ನು ಅರಿಯದವರು ಇತಿಹಾಸವನ್ನು ಸೃಷ್ಠಿಸಲಾರ ಎಂಬ ಮಾತಿನಂತೆ, ನಮ್ಮ ಪೂರ್ವಜರ ಇತಿಹಾಸವನ್ನು ಅರಿತು ಮುಂದೆ ನಡೆಯೋಣ ಎಂದು ಆಶಿಸುತ್ತಾ ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರ ಆತ್ಮಕ್ಕೆ ಚಿರಶಾಂತಿಯನ್ನು ಕೋರುವ.

ವರದಿ : ಡಾ.ದಯಾನಂದ.ಕೆ.ಸಿ
ಪ್ರಾಧ್ಯಾಪಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಮಡಿಕೇರಿ ಮತ್ತು ಸದಸ್ಯರು,
ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ.