ನೂರರ ಸಂಭ್ರಮದಲ್ಲಿ ದೇಶದ ಪ್ರಪ್ರಥಮ ಕೇಂದ್ರ ಕಾರ್ಮಿಕ ಸಂಘಟನೆ ಎಐಟಿಯುಸಿ

October 31, 2020

ಮಡಿಕೇರಿ ಅ.31 : ಯಾವ ರೀತಿಯಲ್ಲಿ ಮಹಾತ್ವಾ ಗಾಂಧೀಜಿಯವರನ್ನು ಬಿಟ್ಟು ದೇಶದ ಸ್ವಾತಂತ್ರ ಹೋರಾಟವನ್ನು ಹೇಳಲಿಕ್ಕಾ ಗದೋ, ಅದೇ ರೀತಿಯಲ್ಲಿ ದೇಶದ ಕಾರ್ಮಿಕ ಹೋರಾಟದ ಇತಿಹಾಸವನ್ನು ಎಐಟಿಯುಸಿ(ಐಟಕ್)ನ್ನು ಬಿಟ್ಟು ಹೇಳಲಿಕ್ಕಾಗದು. ದೇಶಕ್ಕೆ ಸ್ವಾತಂತ್ರ್ಯ ಬಂದು ಈಗ 73 ವರ್ಷಗಳಾದವು, ಎಐಟಿಯುಸಿ (ಐಟಕ್)ಗೆ ಈಗ “ನೂರರ ಸಂಭ್ರಮ’.
(ಎಐಟಿಯುಸಿ ಅಸ್ತಿತ್ವಕ್ಕೆ ಬರಲು ಕಾರಣಗಳು ಅನೇಕ ರಾಷ್ಟ್ರೀಯ ಹಾಗೂ ಅಂತರ್ ರಾಷ್ಟ್ರೀಯ ವಿದ್ಯಮಾನಗಳು ಭಾರತದಲ್ಲಿ ಎಐಟಿಯುಸಿ ಎಂಬ ಕೇಂದ್ರ ಕಾರ್ಮಿಕ ಸಂಘಟನೆ ಅಸ್ತಿತ್ವಕ್ಕೆ ಬರಲು ಕಾರಣವೆನಿಸಿದ್ದವು. ಮೊಟ್ಟ ಮೊದಲನೆಯದಾಗಿ, ವಿಸ್ತ ಸಂಸ್ಥೆಯ ಭಾಗವಾಗಿರುವ I.ಐ.ಔ.( Iಟಿಣeಡಿಟಿಚಿ ಣioಟಿಚಿಟ ಐಚಿbouಡಿ oಡಿgಚಿಟಿisಚಿಣioಟಿ)ಗೆ ಭಾರತದ ಪ್ರತಿನಿಧಿಯನ್ನು ಕಳುಹಿಸಿಕೊಡಬೇಕಾದ ಒತ್ತಡ ಬ್ರಿಟಿಷ್ ಸರಕಾರದ ಮೇಲಿತ್ತು.
ಎರಡನೆಯದಾಗಿ 1862ರಿಂದಲೇ ಭಾರತದಲ್ಲಿ ಕಾರ್ಮಿಕ ಸಂಘಟನೆಗಳು ನಿಧಾನವಾಗಿ ತಲೆಯತ್ತಲು ಆರಂಭವಾಗಿದ್ದು, ಅವುಗಳಿಗೆ ಒಂದು ಕೇಂದ್ರೀಯ ಸಂಘಟನೆಯ ಅಗತ್ಯ ಬಹಳವಾಗಿತ್ತು. ಮೂರನೆಯದಾಗಿ, ಮೊದಲನೇ ಮಹಾಯುದ್ಧದ ಪರಿಣಾಮವಾಗಿ ವಿಶ್ವದ ಆರ್ಥಿಕತೆಯು ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿತ್ತು, ಭಾರತವೂ ಕೂಡ ಈ ಸುಳಿಯಲ್ಲಿ ಸಿಲುಕಿದುದರ ಪರಿಣಾಮವಾಗಿ ದೇಶೀಯ ಆರ್ಥಿಕತೆ ಹಾಗೂ ದುಡಿವ ವರ್ಗದ ಸ್ಥಿತಿ ಶೋಚನೀಯ ಮಟ್ಟಕ್ಕೆ ಇಳಿದಿದ್ದು, ಒಂದು ಪ್ರಬಲ ಕೇಂದ್ರೀಯ ಟ್ರೇಡ್ ಯೂನಿಯನ್ನಿನ ಅಗತ್ಯತೆ ಎಲ್ಲರನ್ನೂ ಬಾಧಿಸಲಾರಂಭಿಸಿತ್ತು.

1920ರಲ್ಲಿ ಗುರಿಯಿಟ್ಟು ಬಿಟ್ಟ ಬಾಣ: ಲಾಲಾ ಲಜಪತ ರಾಯ್, ಜೊಸೆಫ್ ಬಾಪ್ಟಿಸ್ಟ್, ಎನ್.ಎಂ. ಜೋಶಿ ಹಾಗೂ ದಿವಾನ್ ಚಮನ್ ಲಾಲ್ ಅವರ ಶ್ರಮದ ಫಲವಾಗಿ ದೇಶದ ಪ್ರಪ್ರಥಮ ಕೇಂದ್ರ ಕಾರ್ಮಿಕ ಸಂಘಟನೆ ಅಸ್ತಿತ್ವಕ್ಕೆ ಬರಲು ಸಾಧ್ಯವಾಯಿತು.
ಅ.31, 1920ರಲ್ಲಿ ಎಐಟಿಯುಸಿ(ಐಟಸ್) ಅಸ್ತಿತ್ವಕ್ಕೆ. ಪಂಜಾಬಿನ ಸಿಂಹ'ವೆಂದೇ ಪ್ರಖ್ಯಾತರಾದ, ಸ್ವಾತಂತ್ರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ, ಲಾಲಾ ಲಜಪತ್ ರಾಯ್ ಇವರು ಮೊದಲ ಅಧ್ಯಕ್ಷರು (ಪ್ರಸ್ತುತದಲ್ಲಿ ಎಐಟಿಯುಸಿಯ ರಾಷ್ಟ್ರೀಯ ಕಾರ್ಯದರ್ಶಿ "ಪಂಜಾಬಿನ ಸಿಂಹಿಣಿ" ಕಾಮ್ರೇಡ್ ಅಮರಜೀತ್ ಕೌರ್) ಅಂಚೆ ಮತ್ತು ತಂತಿ ಇಲಾಖೆಯ ಕಾರ್ಮಿಕರನ್ನು ಸಂಘಟಿಸಿದ ದಿವಾನ್ ಚಮನ್ ಲಾಲ್ ಮೊದಲ ರಾಷ್ಟ್ರೀಯ ಕಾರ್ಯದರ್ಶಿ. 1927ರಲ್ಲಿ ದಿವಾನ್ ಚಮನ್ ಲಾಲ್ ಎಐಟಿಯುಸಿಯ ರಾಷ್ಟ್ರೀಯ ಅಧ್ಯಕ್ಷರಾಗುತ್ತಾರೆ. ಬಂಡವಾಳಶಾಹಿ ವ್ಯವಸ್ಥೆಯು ಸಾಮ್ರಾಜ್ಯ ಶಾಹಿತ್ವಕ್ಕೆ ರಹದಾರಿಯೆಂದು ಮೊಟ್ಟಮೊದಲು ಹೇಳಿದವರು ಲಾಲಾ ಲಜಪತ್ರಾಯರು. ‘ಸಾಮ್ರಾಜ್ಯಶಾಹಿತ್ವ ಹಾಗೂ ಮಿಲಿಟರೀಕರಣದ ವ್ಯಾಮೋಹ-ಇವೆರಡೂ ಬಂಡವಾಳಶಾಹಿಯ ಅವಳಿಮಕ್ಕಳು’ ಎಂದು ಲಾಲಾ ಲಜಪತ್ ರಾಯರು ಸ್ಪಷ್ಟವಾಗಿ ಗುರುತಿಸಿದ್ದರು, ಕಾರ್ಮಿಕರನ್ನು ಸಂಘಟಿಸಬೇಕು, ಅವರನ್ನು ಹೋರಾಟಕ್ಕೆ ಇಳಿಸಬೇಕು ಹಾಗೂ ಅವರಲ್ಲಿ ವರ್ಗ ಪ್ರಜ್ಞೆಯನ್ನು ಮೂಡಿಸಬೇಕು ಎನ್ನುವ ಕರೆಯನ್ನು ನೀಡಿದವರು ಲಾಲಾ ಲಜಪತ್ ರಾಯರು.
ಮುಂಬಯಿಯ ಎಂಪೈರ್ ಥಿಯೇಟರಿನಲ್ಲಿ ದಿನಾಂಕ ಅ.31, 1920 ರಂದು ಎಐಟಿಯುಸಿಯ ಸ್ಥಾಪನಾ ಸಮ್ಮೇಳನ ನಡೆಯುತ್ತದೆ. ದೇಶದ 64 ಕಾರ್ಮಿಕ ಸಂಘಟನೆಗಳನ್ನು ಪ್ರತಿನಿಧಿಸಿ 101 ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಸಮ್ಮೇಳನದಲ್ಲಿ ಭಾಗವಹಿಸಲು ಸಾಧ್ಯವಾಗದ ಇನ್ನೂ 43 ಕಾರ್ಮಿಕ ಸಂಘಟನೆಗಳು ತಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತವೆ. ಭಾರತದ ಸ್ವಾತಂತ್ರ ಹೋರಾಟದ ಮುಂಚೂಣಿ ನಾಯಕರೆಲ್ಲ ಈ ಸಮ್ಮೇಳನದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಭಾಗವಹಿಸಿ ಎಐಟಿಯುಸಿಗೆ ಶುಭವನ್ನು ಕೋರಿದ್ದರು. ಬ್ರಿಟನ್ನಿನ ಕೇಂದ್ರ ಕಾರ್ಮಿಕ ಸಂಘಟನೆಯೂ ಸಹ ಇದರಲ್ಲಿ ಪಾಲ್ಗೊಂಡು ತನ್ನ ಬೆಂಬಲವನ್ನು ವ್ಯಕ್ತಪಡಿಸುತ್ತದೆ.
ಮುಂಬಯಿ ನಗರದ ಬೀದಿಗಳಲ್ಲಿ 10,000ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಈ ಸಂಭ್ರಮಾಚರಣೆಯ ನಿಮಿತ್ತ ಮೆರವಣಿಗೆಯನ್ನು ಕೈಗೊಳ್ಳುತ್ತಾರೆ. ರಾಷ್ಟ್ರಮಟ್ಟದಲ್ಲಿ ನಿರುದ್ಯೋಗಿಗಳ ಪಟ್ಟಿಯನ್ನು ಸರಕಾರವು ತಯಾರಿಸಬೇಕ, ಎಲ್ಲ ಬೇಡಿಕೆಗಳನ್ನೂ ಸಹ ಈ ಸಮ್ಮೇಳನವು ಮುಂದಿಡುತ್ತದೆ.
1921ರಲ್ಲಿ ಸಂಪೂರ್ಣ ಸ್ವರಾಜ್ ಗೆ ಒತ್ತಾಯ : ದೇಶದ ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಯುತ ಇತಿಹಾಸವು ಅನೇಕ ವಿಶೇಷ ತಿರುವುಗಳಿಂದ ಕೂಡಿರುವ ಅಂಶ ಎಲ್ಲರಿಗೂ ಗೊತ್ತಿದೆ. ಬ್ರಿಟಿಶರಿಂದ ‘ಸಂಪೂರ್ಣ ಸ್ವಾತಂತ್ರ್ಯ(ಸ್ವರಾಜ್) ನಮಗೆ ಬೇಕು ಎಂಬ ಬೇಡಿಕೆಯನ್ನು ಮೊಟ್ಟ ಮೊದಲು ಈ ದೇಶದ ಕಾರ್ಮಿಕರು ಎಐಟಿಯಿಸಿಯ ನೇತೃತ್ವದಲ್ಲಿ ಮುಂದಿಡುವಷ್ಟು ಚೈತನ್ಯವನ್ನು ಹೊಂದಿರದ ಕಾಲ ಅದಾಗಿತ್ತು.
ಎಐಟಿಯುಸಿಯ ಎರಡನೇ ರಾಷ್ಟ್ರೀಯ ಸಮ್ಮೇಳನ 1921 ಝರಿಯಾದಲ್ಲಿ ನಡೆಯಿತು. ಈ ಸಮ್ಮೇಳನವು ನಡೆಯಕೂಡದೆಂದು ಅನೇಕ ಮಾಲೀಕರು ಬ್ರಟಿಶರು ಸರಕಾರವನ್ನು ಒತ್ತಾಯಿಸಿದ್ದಾರೆ.
ಗೂಂಡಾಗಳನ್ನು ಛೂ ಬಿಟ್ಟು ಸಮ್ಮೇಳನವನ್ನು ತಡೆಯಲು ಪ್ರಯತ್ನಿಸಿ ಸೋಲುತ್ತಾರೆ. ಸುಮಾರು 50,000 ಮಂದಿ ಕಾರ್ಮಿಕರು ಈ ಸಮೇಳನದಲ್ಲಿ ಭಾಗವಹಿಸುತ್ತಾರೆ. ಸಂಪೂರ್ಣ ಸ್ವರಾಜ್‍ನ ಬೇಡಿಕೆಯನ್ನು ಸಮ್ಮೇಳನವು ಅಂಗೀಕರಿಸಿತ್ತು. ಕಾಂಗ್ರೆಸ್ ಪಕ್ಷವು ಇದೇ ಬೇಡಿಕೆಯನ್ನು 8 ವರ್ಷಗಳ ನಂತರ, ಅಂದರೆ 1929ರಲ್ಲಿ ಬ್ರಿಟಿಷರ ಮುಂದಿಟ್ಟಿತ್ತು.
ನಾಯಕತ್ವದ ಕುರಿತು: ಸ್ವಾತಂತ್ರ ಹೋರಾಟದಲ್ಲಿ ದಿಗ್ಗಜರೆನಿಸಿಕೊಂಡವರು ಎಐಟಿಯುಸಿಗೆ ನಾಯಕತ್ವವನ್ನು ನೀಡಿರುವುದು ಒಂದು ಹೆಮ್ಮೆಯ ವಿಷಯವೇ ಹೌದು. ಭಾರತದ ಮಹಾನ್ ನಾಯಕರಾದ ಜವಾಹರ್ ಲಾಲ್ ನೆಹರೂ (1929-31), ಸುಭಾಶ್ ಚಂದ್ರ ಭೋಸ್(1930-32), ಎಸ್.ಎ. ಡಾಂಗೆ, ಇಂದ್ರಜೀತ್ ಗುಪ್ತ(1980-90), ಗುರುದಾಸ್ ದಾಸ ಗುಪ್ತ (2001-2017) ಮುಂತಾದವರು ಎಐಟಿಯುಸಿಯ ರಾಷ್ಟ್ರೀಯ ಅಧ್ಯಕ್ಷರಾಗಿ, ಕಾರ್ಮಿಕ ವರ್ಗದ ಹೋರಾಟಕ್ಕೆ ಹೊಸ ದಿಕ್ಸೂಚಿಯನ್ನು ನೀಡಿರುವುದು ಬೇರೆ ಯಾವುದೇ ಟ್ರೇಡ್ ಯೂನಿಯನ್ ಸಂಘಟನೆಗೆ ದೊರಕದ ಸೌಭಾಗ್ಯವಾಗಿರುತ್ತದೆ.
ಭಾರತ ಕಮ್ಯುನಿಸ್ಟ್ ಪಕ್ಷದ ಮಹಾ ನಾಯಕರಾದ ಕಾಮ್ರೇಡ್ ಎಸ್.ಎ. ಡಾಂಗೆಯವರು ಬಹಳ ಕಾಲ ಎಐಟಿಯುಸಿ ಅಧ್ಯಕ್ಷರಾಗಿ, ರಾಷ್ಟ್ರೀಯ ಕಾರ್ಯದರ್ಶಿಯಾಗಿ (1943-45, 1947-83) ಎಐಟಿಯುಸಿಗೆ ಹೊಸ ದಿಕ್ಕನ್ನು ತಂದರು.
ಎಐಟಿಯುಸಿಯು ಎಸ್.ಎ. ಡಾಂಗೆಯವರನ್ನು ಸದಾ ನೆನಪಿನಲ್ಲಿಟ್ಟುಕೊಂಡಿರುತ್ತದೆ. ಪ್ರಸ್ತುತ ಎಐಟಿಯುಸಿಯ ಅಧ್ಯಕ್ಷರಾಗಿ ಕಾಮ್ರೇಡ್ ರಾಮೇಂದ್ರ ಕುಮಾರ್ (ಮಾಜಿ ಲೋಕಸಭಾ ಸದಸ್ಯರು) ಹಾಗೂ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಪಂಜಾಬಿನ ಕಾಮ್ರೇಡ್ ಅಮರಜೀತ್ ಕೌರ್ ಅವರು ಕಾರ್ಯನಿರ್ವಹಿಸಿರುತ್ತಾರೆ.

(((ಹೆಚ್.ಎಂ.ಸೋಮಪ್ಪ, ಜಿಲ್ಲಾಧ್ಯಕ್ಷರು, ಎಐಟಿಯುಸಿ)))

error: Content is protected !!