ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಸಭೆ : ಮೊಗೇರ ಸಮಾಜದ ಬೆಳವಣಿಗೆಗೆ ಕೈಜೋಡಿಸಿ : ಪಿ.ಎಂ.ರವಿ ಕರೆ

01/11/2020

ಮಡಿಕೇರಿ ನ.1 : ಜಿಲ್ಲೆಯಲ್ಲಿ 2003 ರಲ್ಲಿ ಅಸ್ತಿತ್ವಕ್ಕೆ ಬಂದ ಮೊಗೇರ ಸೇವಾ ಸಮಾಜ ನಿರೀಕ್ಷೆಗೂ ಮೀರಿ ಬೆಳವಣಿಗೆಯನ್ನು ಸಾಧಿಸಿದ್ದು, ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಜನಾಂಗ ಬಾಂಧವರು ಕೈಜೋಡಿಸಬೇಕೆಂದು ಮೊಗೇರ ಸಮಾಜದ ಗೌರವಾಧ್ಯಕ್ಷ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಪಿ.ಎಂ.ರವಿ ಕರೆ ನೀಡಿದ್ದಾರೆ.
ನಗರದ ಬಾಲಭವನದಲ್ಲಿ ನಡೆದ ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸುಮಾರು 16 ವರ್ಷಗಳ ಹಿಂದೆ ಆರಂಭಗೊಂಡ ಸೇವಾ ಸಮಾಜ ಎಲ್ಲರ ಸಹಕಾರ, ಸಲಹೆ, ಸೂಚನೆಗಳು ಮತ್ತು ಹಿರಿಯರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಜನಾಂಗದ ಪ್ರತಿಯೊಬ್ಬರು ಎಲ್ಲಾ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುವಂತ್ತಾಗಬೇಕು ಎಂದು ರವಿ ಕಿವಿಮಾತು ಹೇಳಿದರು.
ಜಿಲ್ಲೆಯಲ್ಲಿ ಸುಮಾರು 38 ಸಾವಿರ ಜನಸಂಖ್ಯೆಯನ್ನು ಹೊಂದಿರುವ ಮೊಗೇರ ಸಮಾಜ ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಗ್ರಾಮೀಣ ಭಾಗದಲ್ಲಿ ಸಮಾಜ ಮತ್ತಷ್ಟು ಸಂಘಟಿತವಾಗಬೇಕಾಗಿದ್ದು, ಎಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಬೇಕೆಂದು ಕರೆ ನೀಡಿದರು.
ಸಮಾಜದ ಸ್ಥಾಪಕ ಅಧ್ಯಕ್ಷ ಟಿ.ಸದಾನಂದ ಮಾಸ್ತರ್ ಮಾತನಾಡಿ ಸಂಘಟನೆಯನ್ನು ಆರಂಭಿಸುವಾಗ ಎಲ್ಲರೂ ಅಗತ್ಯ ಸಹಕಾರವನ್ನು ನೀಡಿದ್ದಾರೆ, ಇನ್ನು ಮುಂದೆಯೂ ಸಮಾಜದ ಒಳಿತಿಗಾಗಿ ಕೈಜೋಡಿಸಿ ಮುನ್ನಡೆಯಬೇಕು ಎಂದರು. ಕ್ರೀಡಾಕೂಟ ಮತ್ತು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜನಾಂಗ ಬಾಂಧವರನ್ನು ಒಗ್ಗೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬರಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಶಿಷ್ಟ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವ ಅಗತ್ಯವಿದೆ ಎಂದರು.
ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಬಿ.ಎಂ.ದಾಮೋದರ ಮಾತನಾಡಿ ಜಿಲ್ಲೆಯಲ್ಲಿರುವ ಎಲ್ಲಾ ಜನಾಂಗ ಬಾಂಧವರು ಸಮಾಜದ ಸದಸ್ಯತ್ವವನ್ನು ಕಡ್ಡಾಯವಾಗಿ ಪಡೆಯಬೇಕೆಂದು ಮನವಿ ಮಾಡಿದರು. ಆರ್ಥಿಕವಾಗಿ ಹಿಂದುಳಿದಿರುವ ಮೊಗೇರ ಸಮಾಜದ ಏಳಿಗೆ ಸಂಘಟನೆಯ ಬಲವರ್ಧನೆಯಿಂದ ಮಾತ್ರ ಸಾಧ್ಯವೆಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಾಜದ ಅಧ್ಯಕ್ಷ ಬಿ.ಶಿವಪ್ಪ ಅವರು ಪ್ರಾಕೃತಿಕ ವಿಕೋಪ ಮತ್ತು ಕೊರೋನಾ ಸಂಕಷ್ಟದಿಂದಾಗಿ ಸಂಘಟನೆಯ ಚಟುವಟಿಕೆಗಳಲ್ಲಿ ಕೊಂಚ ಹಿನ್ನಡೆಯಾಗಿದೆ. ಆದರೆ ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ನಿರಂತರ ಕಾರ್ಯಕ್ರಮಗಳು ನಡೆಯಲಿದೆ ಮತ್ತು ಜನಾಂಗದ ಏಳಿಗೆಗಾಗಿ ಸಮಾಜ ಶ್ರಮಿಸಲಿದೆ ಎಂದು ಭರವಸೆ ನೀಡಿದರು.
ಜಿಲ್ಲಾ ಸಮಿತಿ ಸದಸ್ಯರುಗಳಾದ ಎಂ.ಪಿ.ದೇವಪ್ಪ, ಮಂಜು ಸುಂಟಿಕೊಪ್ಪ ಹಾಗೂ ಸೋಮನಾಥ್ ಮಾತನಾಡಿದರು.
ಜಿಲ್ಲಾ ಸಮಿತಿ ಸದಸ್ಯರುಗಳಾದ ಸುಂದರಿ ಬೋಯಿಕೇರಿ, ಸೋಮಯ್ಯ ಹೆಬ್ಬೆಟ್ಟಗೇರಿ, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಪಿ.ಬಿ.ಸುರೇಶ್, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಮೋಹನ್ ಜಿ. ಉಪಸ್ಥಿತರಿದ್ದರು. ಸದಸ್ಯ ಜನಾರ್ಧನ ಪಿ.ಬಿ ನಿರೂಪಿಸಿ, ವಂದಿಸಿದರು.