ಚಿನ್ನಾಭರಣ ಕಳವು : ಟಿ.ಶೆಟ್ಟಿಗೇರಿಯಲ್ಲಿ ಆರೋಪಿ ಬಂಧನ

November 1, 2020

ಮಡಿಕೇರಿ ನ.1 : ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ ಆರೋಪದಡಿ ಮಡಿಕೇರಿ ಗ್ರಾಮಾಂತರ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ಶ್ರೀಮಂಗಲ ಟಿ.ಶೆಟ್ಟಿಗೇರಿಯ ತೆರಾಲು ಗ್ರಾಮದಲ್ಲಿ ವಾಸವಾಗಿದ್ದ ನಂಜಪ್ಪ ಅಲಿಯಾಸ್ ಸೂಚನ್(27) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಮನೆಯಲ್ಲಿ ಯಾರು ಇಲ್ಲದ ಸಮಯ ಸಾಧಿಸಿ ಸ್ನಾನದ ಗೃಹದ ಮೇಲ್ಚಾವಣಿಯ ಶೀಟ್ ಒಡೆದು ಒಳ ನುಗ್ಗಿ ಮನೆಯಲಿದ್ದ 86 ಸಾವಿರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವ ಕುರಿತು ದೂರು ದಾಖಲಾಗಿತ್ತು.
ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಬಾಡಗದಲ್ಲಿ ವಾಸವಾಗಿದ್ದ ರೇಖಾ ಎಂಬವರು ಅ.28 ರಂದು ಕಾರ್ಯ ನಿಮಿತ್ತ ಹಮ್ಮಿಯಾಲ ಗ್ರಾಮಕ್ಕೆ ತೆರಳಿದ್ದರು. ಅ.29ರಂದು ಸಂಜೆ 4.30ರ ಸಮಯದಲ್ಲಿ ಮತ್ತೆ ಮನೆಗೆ ಬಂದು ನೋಡಿದ ಸಂದರ್ಭ ಯಾರೋ ಮನೆಯ ಹಿಂಭಾಗದ ಸ್ನಾನ ಗೃಹದ ಮೇಲ್ಚಾವಣಿಯ ಶೀಟ್ ಒಡೆದು ಮನೆಗೆ ನುಗ್ಗಿ ಎರಡು ಎಳೆಯ ಚಿನ್ನದ ಕರಿ ಮಣಿ ಸರ, ಮತ್ತೊಂದು ಚಿನ್ನದ ಚೈನ್, 3 ಚಿಕ್ಕ ಚಿನ್ನದ ಸರ ಹಾಗೂ ಒಂದು ಉಂಗುರವನ್ನು ಕಳವು ಮಾಡಿರುವುದು ಕಂಡು ಬಂದಿತ್ತು.
ಈ ಬಗ್ಗೆ ರೇಖಾ ಅವರು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರು ಟಿ.ಶೆಟ್ಟಿಗೇರಿಯ ತೆರಾಲು ನಿವಾಸಿ ನಂಜಪ್ಪ ಎಂಬಾತನನ್ನು ವಶಕ್ಕೆ ಪಡೆದಾಗ ಕಳವು ಮಾಡಿರುವುದನ್ನು ಆತ ಒಪ್ಪಿಕೊಂಡಿದ್ದಾನೆ. ಆರೋಪಿಯಿಂದ 86 ಸಾವಿರ ಮೌಲ್ಯದ ಚಿನ್ನದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಡಿವೈಎಸ್‍ಪಿ ದಿನೇಶ್ ಕುಮಾರ್, ಗ್ರಾಮಾಂತರ ವೃತ್ತ ನಿರೀಕ್ಷಕ ದಿವಾಕರ್ ಅವರುಗಳ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್, ಅಪರಾಧ ವಿಭಾಗದ ಪಿಎಸ್‍ಐ ಶಿವನ ಗೌಡ ಜಿ.ಪಾಟೀಲ್, ಸಿಬ್ಬಂದಿಗಳಾದ ರವಿಕುಮಾರ್, ಸೋಮಶೇಖರ್ ಸಜ್ಜನ್, ಮಂಜುನಾಥ್, ಚಾಲಕ ಪ್ರವೀಣ್ ಕುಮಾರ್ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!