ಮಡಿಕೇರಿಯಲ್ಲಿ ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ : ನಾಡು ನುಡಿಯ ರಕ್ಷಣೆಗೆ ಕಟಿಬದ್ಧರಾಗಿ : ಸಚಿವ ಸೋಮಣ್ಣ ಕರೆ

01/11/2020

ಮಡಿಕೇರಿ ನ.1 : ಕನ್ನಡದ ಹಿರಿಮೆ ಗರಿಮೆಗಳನ್ನು ನೆನಪಿಸಿಕೊಳ್ಳುವ ಕನ್ನಡ ರಾಜ್ಯೋತ್ಸವವು ನಮ್ಮೆಲ್ಲರ ‘ನಿತ್ಯೋತ್ಸವ’ವಾಗಬೇಕೆಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಸತಿ ಸಚಿವರಾದ ವಿ. ಸೋಮಣ್ಣ ಆಶಯ ವ್ಯಕ್ತಪಡಿಸಿದ್ದಾರೆ.
ಕೊಡಗು ಜಿಲ್ಲಾಡಳಿತದಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿತ 65 ನೇ ಕನ್ನಡ ರಾಜ್ಯೋತ್ಸವದಲ್ಲಿ ತ್ರಿವರ್ಣ ಧ್ವಜಾರೋಹಣ ಗೈದು, ಆಕರ್ಷಕ ಪಥ ಸಂಚಲನಗದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಕೇವಲ ನವೆಂಬರ್ ತಿಂಗಳ ಕನ್ನಡಿಗರು ನಾವಾಗಬೇಕಾಗಿಲ್ಲವೆಂದು ನುಡಿದರು.
ನಾಡು ನುಡಿಯ ಹಿತರಕ್ಷಣೆಗೆ ಸರ್ಕಾರ ಕಟಿಬದ್ಧವಾಗಿದ್ದು, ಅಂತರ್ ಜಾಲದಲ್ಲಿ ಕನ್ನಡ ಭಾಷೆಯ ಬಳಕೆ ಯಥೇಚ್ಛವಾಗಿದ್ದು, ವಾಣಿಜ್ಯ ಕ್ಷೇತ್ರದಲ್ಲಿಯೂ ಮುಂಚೂಣಿ ಭಾಷೆಯಾಗಿ ಬೆಳೆಯತೊಡಗಿರುವುದು ಸಂತಸದ ವಿಚಾರ. ಕರ್ನಾಟಕದ ಇತಿಹಾಸ ಮತ್ತು ಪರಂಪರೆ ಅತ್ಯಂತ ಶ್ರೀಮಂತವಾಗಿದ್ದು, ಅಖಂಡ ಕರ್ನಾಟಕದ ಸರ್ವಾಂಗೀಣ ಪ್ರಗತಿಯಲ್ಲಿ ಯುವ ಪೀಳಿಗೆ ಪಾಲುದಾರರಾಗಬೇಕೆಂದು ಕರೆ ನೀಡಿದರು.
::: ಸಮಸ್ಯೆ ಸವಾಲುಗಳ ವರ್ಷ :::
ರಾಜ್ಯದಲ್ಲಿ ಪ್ರಸ್ತುತ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಕಳೆದಿದ್ದು, ಇದೀಗ ನಾವಿರುವ ಅವಧಿ ಸಮಸ್ಯೆ ಮತ್ತು ಸವಾಲುಗಳ ವರ್ಷವೇ ಆಗಿದೆ. ವಿಶ್ವವನ್ನು ಆವರಿಸಿರುವ ಮಹಾಮಾರಿ ಕೊರೊನಾ ಒಂದೆಡೆಯಾದರೆ, ಪ್ರಾಕೃತಿಕ ವಿಕೋಪ ಮತ್ತೊಂದೆಡೆ. ಇಂತಹ ಸಮಸ್ಯೆ ಹಾಗೂ ಸವಾಲುಗಳಿಗೆ ಪರಿಹಾರದ ಸ್ಪರ್ಶ ನೀಡಿದ ಸರ್ಕಾರ, ಕರ್ನಾಟಕದ ಅಭಿವೃದ್ಧಿಗೆ ಹೊಸ ಆಯಾಮ ನೀಡಲು ದೃಢ ಸಂಕಲ್ಪ ಮಾಡಿದೆಯೆಂದು ಹೇಳಿದರು.
::: ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ :::
ಸಮಾರಂಭದಲ್ಲಿ ಕಳೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಾದ ಐಗೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಹರ್ಷಿತಾ ಕೆ.ಆರ್.(ಶೇ.96.48 ಅಂಕ), ಹಾಕತ್ತೂರು ಸರ್ಕಾರಿ ಪ್ರೌಢ ಶಾಲೆಯ ಕವನ ಪಿ.ಎಸ್.(ಶೇ.94.40) ಮತ್ತು ಶಿರಂಗಾಲ ಸರ್ಕಾರಿ ಪ್ರೌಢ ಶಾಲೆಯ ಲಾವಣ್ಯ ಎಂ.ಆರ್.(ಶೇ.93.28) ಅವರಿಗೆ ಉಸ್ತುವಾರಿ ಸಚಿವರು ಮತ್ತು ಗಣ್ಯರು ಲ್ಯಾಪ್ ಟಾಪ್‍ಗಳನ್ನು ವಿತರಿಸಿ ಪ್ರೋತ್ಸಾಹಿಸಿದರು.
::: ಆಕರ್ಷಕ ಪಥ ಸಂಚಲನ :::
ಕೊರೊನಾ ಹಿನ್ನೆಲೆ ಅತ್ಯಂತ ಸರಳವಾಗಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಸಶಸ್ತ್ರ ಪೊಲೀಸ್ ದಳ, ಸಿವಿಲ್ ಪೊಲೀಸ್, ಗೃಹ ರಕ್ಷಕ ದಳ ಮತ್ತು ಅರಣ್ಯ ಇಲಾಖಾ ತಂಡಗಳು ಪೆರೇಡ್ ಕಮಾಂಡರ್ ರಾಚಯ್ಯ ಅವರ ಮುಂದಾಳತ್ವದಲ್ಲಿ ಆಕರ್ಷಕ ಪಥ ಸಂಚಲನ ನಡೆಸಿ ಗಮನ ಸೆಳೆದವು.
::: ಮಕ್ಕಳ ಕಲರವ ಇಲ್ಲ :::
ಕೊರೊನಾ ಸಾಂಕ್ರಾಮಿಕ ಹಿನ್ನೆಲೆ ವರ್ಷಂಪ್ರತಿಯಂತೆ ಶಾಲಾ ವಿದ್ಯಾರ್ಥಿಗಳ ಯಾವುದೇ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಅವಕಾಶವಿರಲಿಲ್ಲ. ಇದರಿಂದ ಮೈದಾನದಲ್ಲಿ ಮಕ್ಕಳ ಕಲರವ ಮಾಯವಾಗಿ ನಿರಾಸೆ ಮೂಡಿಸಿತು.
ಸಮಾರಂಭದ ವೇದಿಕೆಯಲ್ಲಿ ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯರುಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಪಂ ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಎಸ್‍ಪಿ ಕ್ಷಮಾ ಮಿಶ್ರಾ, ಎಡಿಸಿ ಸ್ನೇಹ ಸೇರಿದಂತೆ ಹಲ ಗಣ್ಯರು ಉಪಸ್ಥಿತರಿದ್ದರು.