ಪೆರಾಜೆಯಲ್ಲಿ ಮತದಾನ ಬಹಿಷ್ಕಾರಕ್ಕೆ ನಿರ್ಧಾರ : ಕುಂಡಾಡು, ಚಾಮಕಜೆಯಲ್ಲಿ ಅಳವಡಿಸಿದ್ದ ಬಹಿಷ್ಕಾರದ ಬ್ಯಾನರ್ ತೆರವು

02/11/2020

ಮಡಿಕೇರಿ ನ.2 : ಗ್ರಾ.ಪಂ ಚುನಾವಣೆಯ ದಿನ ಘೋಷಣೆಗೆ ಕಾಲ ಸಮೀಪಿಸುತ್ತಿರುವಂತೆಯೇ ಸುಳ್ಯ ಮತ್ತು ಮಡಿಕೇರಿ ಗಡಿಭಾಗದ ಗ್ರಾಮಗಳಲ್ಲಿ ಚುನಾವಣಾ ಬಹಿಷ್ಕಾರದ ಕೂಗು ಕೇಳಿ ಬರತೊಡಗಿದೆ. ರಸ್ತೆ, ತ್ಯಾಜ್ಯ ವಿಲೇವಾರಿ ಸಮಸ್ಯೆ ಸೇರಿದಂತೆ ಮೂಲಭೂತ ಸೌಲಭ್ಯಗಳಿಗಾಗಿ ಆಗ್ರಹಿಸಿ ಗಡಿ ಭಾಗವಾದ ಪೆರಾಜೆಯಲ್ಲಿ ಚುನಾವಣೆ ಬಹಿಷ್ಕಾರದ ಬ್ಯಾನರ್ ಅಳವಡಿಸಲಾಗಿದೆ. ಇಲ್ಲಿನ ಕುಂಡಾಡು ಮತ್ತು ಚಾಮಕಜೆ ಗಿರಿಜನ ಕಾಲೋನಿಯ ನಿವಾಸಿಗಳು ಬ್ಯಾನರ್ ಹಾಕಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಬ್ಯಾನರನ್ನು ಗ್ರಾ.ಪಂ. ಸಿಬ್ಬಂದಿಗಳು ತೆರವುಗೊಳಿಸಿದ್ದು, ಈ ಕ್ರಮಕ್ಕೆ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಸ್ತೆ, ಮೋರಿ, ಸೇತುವೆ, ಮನೆಗಳ ಮಂಜೂರಾತಿ, ರಸ್ತೆ ಕಾಂಕ್ರಿಟೀಕರಣವಾಗಿಲ್ಲವೆಂದು ಆರೋಪಿಸಿ ಸ್ಥಳೀಯರ ಸಹಕಾರದೊಂದಿಗೆ ಪೆರಾಜೆ ಗ್ರಾಮದ 4 ನೇ ವಾರ್ಡ್‍ನ ನಿವಾಸಿಗಳು ಕುಂಬಳಚೇರಿ ಶಾಲೆಯ ಬಳಿ ರಸ್ತೆ ಬದಿಯಲ್ಲಿ ಬ್ಯಾನರ್ ಅಳವಡಿಸಿದ್ದರು.
ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪಂಚಾಯತ್ ಸಿಬ್ಬಂದಿಗಳು ಬ್ಯಾನರ್ ತೆಗೆದು ಪಂಚಾಯತ್ ಗೆ ಕೊಂಡೊಯ್ದಿದ್ದಾರೆ. ಇದರಿಂದ ಅಸಮಾಧಾನಗೊಂಡ ಕುಂಡಾಡು, ಚಾಮಕಜೆ ನಿವಾಸಿಗಳು ಪಂಚಾಯತ್‍ಗೆ ತೆರಳಿ ವಿಚಾರಿಸಿದಾಗ ಬ್ಯಾನರ್ ಅಳವಡಿಸಲು ಅಭಿವೃದ್ಧಿ ಅಧಿಕಾರಿಯ ಅನುಮತಿ ಬೇಕು ಎಂದು ತಿಳಿಸಿದ್ದಾರೆ.

ಬಳಿಕ ಬ್ಯಾನರ್ ಹಾಕಿದವರು ಅನುಮತಿ ನೀಡುವಂತೆ ಕೇಳಿಕೊಂಡರಾದರೂ ಪಿ.ಡಿ.ಒ, ಇದಕ್ಕೆ ಅನುಮತಿ ನಿರಕಾರಿಸಿದರೆನ್ನಲಾಗಿದೆ.

ಕಳೆದ 25 ವರ್ಷಗಳಿಂದ ಸೂಕ್ತ ರಸ್ತೆಗಾಗಿ ಬೇಡಿಕೆ ಇಟ್ಟಿದ್ದೇವೆ, ಆದರೆ ಸ್ವಲ್ಪ ಮಾತ್ರ ರಸ್ತೆ ಮಾಡಿದ್ದಾರೆ. ಇನ್ನು ಆಗಬೇಕಾದದ್ದು ತುಂಬಾ ಇದೆ. ನಮ್ಮ ಬೇಡಿಕೆಯನ್ನು ನಿರ್ಲಕ್ಷ್ಯ ಮಾಡುತ್ತಿದ್ದು, ಬೇರೆ ದಾರಿ ಇಲ್ಲದೆ ಚುನಾವಣೆ ಬಹಿಷ್ಕಾರದ ನಿರ್ಧಾರಕ್ಕೆ ಬರಲಾಗಿದೆ. ಅಲ್ಲದೆ ಗಿರಿಜನ ಯೋಜನೆಯಲ್ಲಿ ಸರ್ಕಾರದಿಂದ ಸವಲತ್ತು ಬಂದರೂ ನಮ್ಮವರಿಗೆ ನೀಡಿಲ್ಲ. ಇಲ್ಲಿರುವ ಶಾಲೆಗೆ ಶಿಕ್ಷಕರಿಲ್ಲ, ರಸ್ತೆ, ಮೋರಿಯೂ ಸರಿ ಇಲ್ಲ. ನಾವು ಹಾಕಿದ ಬ್ಯಾನರ್ ತೆಗೆಯುವ ಮೊದಲು ನಮ್ಮ ಸಮಸ್ಯೆಯನ್ನು ಅಧಿಕಾರಿಗಳು ಆಲಿಸಬೇಕಿತ್ತು. ಆ ಸೌಜನ್ಯವನ್ನು ಅಧಿಕಾರಿಗಳು ತೋರಿಲ್ಲ. ಮುಂದೆ ನಮ್ಮ ಹಕ್ಕಿಗಾಗಿ ಕಾನೂನು ಹೋರಾಟ ಮಾಡುತ್ತೇವೆ……….ಮಿಥುನ್, ನಿವಾಸಿ, ಚಾಮಕಜಿ

ಪಂಚಾಯತ್ ಅನುಮತಿ ಪಡೆಯದೆ ಚುನಾವಣೆ ಬಹಿಷ್ಕಾರದ ಬ್ಯಾನರ್ ಅಳವಡಿಸಿದ ಕಾರಣಕ್ಕೆ ಬ್ಯಾನರ್ ತೆರವುಗೊಳಿಸಲಾಗಿದೆ. ಆ ಭಾಗಕ್ಕೆ ಪಂಚಾಯತ್‍ನಿಂದ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡಲಾಗಿದೆ. ರಸ್ತೆಗೆ ಆನುದಾನ ಇದೆಯೆಂದು ಗೊತ್ತಾಗಿದೆ. ಅಲ್ಲಿಗೆ ನೀರಿನ ಟ್ಯಾಂಕ್ ನೀಡಲಾಗಿದೆ. ನಾವು ಆ ಪ್ರದೇಶಕ್ಕೆ ಭೇಟಿ ನೀಡಿ, ಜನರೊಂದಿಗೆ ಸಮಾಲೋಚನೆ ನಡೆಸಿ ಅವರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತೇವೆ. ಸಂಬಂಧಿಸಿದ ಇಲಾಖೆಗೂ ಅವರ ಅಹವಾಲು ತಲುಪಿಸಲಾಗುವುದು……..ಪ್ರಭು ಪಿ.ಡಿ.ಒ, ಪೆರಾಜೆ