ಆದಿದ್ರಾವಿಡ ಸಮಾಜ ಸೇವಕ ಸಂಘದಿಂದ ಮಾದಾಪುರದಲ್ಲಿ ಶ್ರಮದಾನ

ಮಡಿಕೇರಿ ನ.2 : ಕೊಡಗು ಜಿಲ್ಲಾ ಆದಿದ್ರಾವಿಡ ಸಮಾಜ ಸೇವಕ ಸಂಘ ಹಾಗೂ ಸೂರಿಗಾಗಿ ಸಮಿತಿ ವತಿಯಿಂದ 65ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮಾದಾಪುರ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು.
ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ಆವರಣದಲ್ಲಿ ಬೆಳೆದಿದ್ದ ಗಿಡಗಳನ್ನು ಕಡಿದು, ತ್ಯಾಜ್ಯಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು. ಕಾರ್ಯಕ್ರಮವನ್ನು ಸಂಘದ ಗೌರವಧ್ಯಕ್ಷ ಪಿ.ಬಿ.ಬಾಬು ಉದ್ಘಾಟಿಸಿದರು.
ಸಂಘದ ಜಿಲ್ಲಾಧ್ಯಕ್ಷ ಹೆಚ್.ಎಂ.ಸೋಮಪ್ಪ ಮಾತನಾಡಿ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯಲು ಸ್ವಚ್ಛತೆಗೆ ಆದ್ಯತೆ ನೀಡುವ ಅಗತ್ಯವಿದ್ದು, ಈ ಕುರಿತು ಎಲ್ಲರೂ ಗಂಭೀರ ಚಿಂತನೆ ಹರಿಸಬೇಕೆಂದು ಕರೆ ನೀಡಿದರು.
ದೇಶದ ಮುಂದಿನ ಪ್ರಜೆಗಳಾಗಿರುವ ಮಕ್ಕಳ ಆರೋಗ್ಯದ ಬಗ್ಗೆ ಪೋಷಕರು ಹೆಚ್ಚಿನ ಗಮನ ಹರಿಸಬೇಕು ಮತ್ತು ಸ್ವಚ್ಛತೆಯನ್ನು ಕಾಪಾಡಲು ಪ್ರೇರೇಪಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಪಿ.ಎಲ್.ಸುರೇಶ್, ಸಿದ್ದಾಪುರ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ಮಧು, ಸುಂಟಿಕೊಪ್ಪ ಹೋಬಳಿ ಅಧ್ಯಕ್ಷ ರಮೇಶ್, ಪರಿಸರ ಪ್ರೇಮಿ ಅಣ್ಣು, ಎಸ್‍ಡಿಎಂಸಿ ಸದಸ್ಯ ಕೃಷ್ಣ, ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಡೈಸಿ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶೋಭ, ಬೋಧಕ ವರ್ಗ ಹಾಗೂ ಸಂಘದ ಸದಸ್ಯರು ಹಾಜರಿದ್ದರು.




