ಕೊಡಗು ಜೆಡಿಎಸ್ ನಿಂದ ಕನ್ನಡ ರಾಜ್ಯೋತ್ಸವ

02/11/2020

ಮಡಿಕೇರಿ ನ.2 : ಜಿಲ್ಲಾ ಜಾತ್ಯಾತೀತ ಜನತಾದಳದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ನಗರದಲ್ಲಿರುವ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಕಾರ್ಯಕರ್ತರಾದ ಯಾಲದಾಳು ಕುಸುಮಾ ಅವರು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಕನ್ನಡ ನಾಡು, ನುಡಿಯ ಬಗ್ಗೆ ಅಭಿಮಾನ ಮತ್ತು ಗೌರವ ತೋರಬೇಕೆಂದರು. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಕಾರ್ಯಗಳನ್ನು ಮೆಚ್ಚಿ ಜಿಲ್ಲೆಯ ಹೆಚ್ಚಿನ ಸಂಖ್ಯೆಯ ಮಹಿಳೆಯರು ಜೆಡಿಎಸ್‍ಗೆ ಸೇರ್ಪಡೆಗೊಳ್ಳುತ್ತಿದ್ದು, ಇದು ಪಕ್ಷದ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಮುಂಬುರುವ ಚುನಾವಣೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದ ಅವರು, ಮಹಿಳೆಯರ ಸಂಕಷ್ಟಕ್ಕೆ ಸ್ಪಂದನೆ ನೀಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ರಾಜ್ಯ ಉಪಾಧ್ಯಕ್ಷ ಯಾಲದಾಳು ಮನೋಜ್ ಬೋಪಯ್ಯ ಮಾತನಾಡಿ, ಕನ್ನಡದ ಮೇಲಿನ ಅಭಿಮಾನವನ್ನು ನವೆಂಬರ್ ತಿಂಗಳಿಗೇ ಮಾತ್ರ ಸೀಮಿತಗೊಳಿಸದೆ ಪ್ರತಿದಿನ, ಪ್ರತಿಕ್ಷಣ ನಾಡು, ನುಡಿ, ಸಂಸ್ಕøತಿ, ಆಚಾರ, ವಿಚಾರದ ಬಗ್ಗೆ ಹೆಚ್ಚು ಕಾಳಜಿ ಮತ್ತು ಪ್ರೀತಿ ತೋರಬೇಕೆಂದರು.
ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಎನ್.ಸಿ.ಸುನಿಲ್, ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಲೀಲಾಶೇಷಮ್ಮ, ನಗರ ಮಹಿಳಾ ಅಧ್ಯಕ್ಷೆ ಸುನಂದಾ, ಉಪಾಧ್ಯಕ್ಷೆ ಲಲಿತ, ನಗರ ಎಸ್.ಸಿ ಘಟಕದ ಅಧ್ಯಕ್ಷ ರವಿಕುಮಾರ್, ಹಿರಿಯ ಮುಖಂಡ ಪೃಥ್ವಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.