ವಿರಾಜಪೇಟೆ ಪ.ಪಂ ಅಧಿಕಾರ ಬಿಜೆಪಿಗೆ

03/11/2020

ಮಡಿಕೇರಿ ನ.3 : ವಿರಾಜಪೇಟೆ ಪಟ್ಟಣ ಪಂಚಾಯ್ತಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿಗಳು ಅನಾಯಾಸ ಗೆಲುವು ಸಾಧಿಸಿದರು.
ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಯ ಮಹಿಳೆಗೆ ಮೀಸಲಾಗಿದ್ದು, ಪಕ್ಷದ ಹೆಚ್.ಆರ್.ಸುಶ್ಮಿತಾ ಹಾಗೂ ಟಿ.ಎಂ.ಪೂರ್ಣಿಮ ಮೀಸಲಾತಿಯನ್ವಯ ಅರ್ಹತೆಯನ್ನು ಪಡೆದಿದ್ದರು. ಕಳೆದ ಎರಡು ದಿನಗಳಿಂದ ಪಕ್ಷದ ಜಿಲ್ಲಾ ಪ್ರಮುಖರ ನಡುವೆ ನಡೆದ ಚರ್ಚೆಗಳ ಆಧಾರದಲ್ಲಿ ಐದನೇ ವಾರ್ಡ್‍ನಿಂದ ಆಯ್ಕೆ ಹೊಂದಿದ ಹೆಚ್.ಆರ್.ಸುಶ್ಮಿತಾರವರನ್ನು ಕಣಕ್ಕಿಳಿಸಲು ತೀರ್ಮಾನವಾಗಿತ್ತು. ಇತರ ಪಕ್ಷಗಳಲ್ಲಿ ಯಾರೂ ಮೀಸಲಾತಿ ಅರ್ಹತೆ ಹೊಂದಿಲ್ಲದ ಕಾರಣ ಸುಶ್ಮಿತಾ ಅವರು ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಬಿ.ಜೆ.ಪಿಯ ಮೀನುಪೇಟೆ ವಾರ್ಡ್‍ನಿಂದ ಆಯ್ಕೆ ಹೊಂದಿದ್ದ ಕೆ.ಬಿ.ಹರ್ಷವರ್ಧನ್ ಹಾಗೂ 8ನೇ ವಾರ್ಡ್ ನೆಹರೂ ನಗರದಿಂದ ಆಯ್ಕೆಯಾಗಿದ್ದ ಕಾಂಗ್ರೆಸ್‍ನ ಬೆನ್ನಿ ಸೆಬಾಸ್ಟಿನ್ ನಾಮಪತ್ರ ಸಲ್ಲಿಸಿದರು. ಆದರೆ ಎರಡೂ ಕಡೆಯಲ್ಲಿ ತಲಾ ಹತ್ತು ಸದಸ್ಯ ಬಲ ಇದ್ದುದರಿಂದ ಲಾಟರಿ ಮೊರೆ ಹೋಗಬೇಕಾಯ್ತು. ಅದೃಷ್ಟ ಹರ್ಷವರ್ಧನ್ ಪರವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಸಂಸದ ಪ್ರತಾಪ್‍ಸಿಂಹ ಹಾಗೂ ಶಾಸಕ ಕೆ.ಜಿ.ಬೋ¥ಯ್ಯ ಸೇರಿದಂತೆ ಬಿ.ಜೆ.ಪಿ.ಪಾಳಯದಲ್ಲಿ ಹತ್ತು ಮಂದಿ ಸದಸ್ಯ ಬಲವಿತ್ತು. ಚುನಾವಣಾಧಿಕಾರಿ ತಹಶೀಲ್ದಾರ್ ನಂದೀಶ್ ಅವರು ಆಯ್ಕೆಯಾದವರನ್ನು ಅಧಿಕೃತವಾಗಿ ಘೋಷಿಸಿದರು.