ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಮೌಲ್ಯಮಾಪನ ಕೇಂದ್ರ ಆರಂಭ

ಮಡಿಕೇರಿ ನ. 3 : :ಮಂಗಳೂರು ವಿಶ್ವವಿದ್ಯಾನಿಲಯವು ಕೊಡಗು ಜಿಲ್ಲೆ ವಿಭಾಗದ ಪದವಿ ಮೌಲ್ಯಮಾಪನಾ ಕೇಂದ್ರವನ್ನು ಮಡಿಕೇರಿ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಸ್ಥಾಪಿಸಿ, ಬಿ.ಎ. ಕಲಾ ವಿಷಯಗಳ ಮೌಲ್ಯಮಾಪನ ಕಾರ್ಯಕ್ಕೆ ಚಾಲನೆ ನೀಡಿದೆ.
ಕೊಡಗು ಜಿಲ್ಲೆಯಲ್ಲಿ ಪದವಿ ಮೌಲ್ಯಮಾಪನಕ್ಕೆ ಅವಕಾಶವನ್ನು ಕಲ್ಪಿಸುವ ಕುರಿತು ಹಲವಾರು ವರ್ಷಗಳಿಂದ ಮಂಗಳೂರು ವಿ.ವಿಯ ಮುಂದೆ ಬೇಡಿಕೆ ಇಟ್ಟಿದ್ದು, ಈ ಬಾರಿ ಸಾಕಾರಗೊಂಡಿರುವುದು ಕೊಡಗಿನ ಕಾಲೇಜುಗಳ ಪ್ರಾದ್ಯಾಪಕರಿಗೆ ತುಂಬಾ ಸಂತಸ ತಂದಿದೆ.
ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಉಪನ್ಯಾಸಕರು ಮಂಗಳೂರಿಗೆ ಹೋಗಿ ಮೌಲ್ಯಮಾಪನ ಮಾಡಲು ಅನಾನುಕೂಲವಾಗಿದ್ದು, ಇದೀಗ ಕೊಡಗಿನಲ್ಲೇ ಮೌಲ್ಯಮಾಪನ ಕೇಂದ್ರವನ್ನು ತೆರೆಯಲಾಗಿರುವುದರಿಂದ ಪ್ರಾದ್ಯಾಪಕರಿಗೆ ತುಂಬಾ ಅನುಕೂಲಕರವಾಗಿದೆ.
ಈ ಬಾರಿ ಕಲಾವಿಭಾಗದ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರ ವಿಷಯಗಳ ಮೌಲ್ಯಮಾಪನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಸುಮಾರು 40 ಮೌಲ್ಯಮಾಪಕರು ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿದ್ದಾರೆ. ಮುಂದಿನ ಸಲ ವಿಜ್ಞಾನ, ವಾಣಿಜ್ಯ ವಿಭಾಗಗಳಗೆ ಮೌಲ್ಯಮಾಪನ ವಿಸ್ತಾರಕೊಳ್ಳುವ ಸಾಧ್ಯತೆಯಿದೆ.
ಕೋವಿಡ್‍ಗೆ ಸಂಬಂಧಿಸಿದಂತೆ ಸರ್ಕಾರದ ಮುನ್ನೆಚ್ಚರಿಕೆಯ ನಿರ್ದೇಶನ ಮತ್ತು ನಿಯಮಾವಳಿಗಳ ಪಾಲನೆಯೊಂದಿಗೆ ಮೌಲ್ಯಮಾಪನಾ ಮಾಡಲಾಗುತ್ತಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
ಮೌಲ್ಯಮಾಪನಾ ಕೇಂದ್ರವನ್ನು ಕೊಡಗಿನಲ್ಲಿ ಆರಂಭ ಮಾಡುವುದಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಕುಲ ಸಚಿವರಾದ ಡಾ. ಪಿ.ಎಲ್. ಧರ್ಮ ಅವರು ವಿಶೇಷ ಕಾಳಜಿ ವಹಿಸಿದ್ದು, ಕೊಡಗು ಜಿಲ್ಲೆಯ ಪದವಿ ಪ್ರಾದ್ಯಾಪಕರು ಮಂಗಳೂರು ವಿ.ವಿಯ ಆಡಳಿತಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.
