ಸೋಮವಾರಪೇಟೆ ಪ.ಪಂ ಅಧ್ಯಕ್ಷ ಸ್ಥಾನ ಬಿಜೆಪಿಗೆ

03/11/2020

ಮಡಿಕೇರಿ ನ.3 : ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ 3ನೇ ವಾರ್ಡ್‍ನ ಸದಸ್ಯೆ ಬಿಜೆಪಿಯ ನಳಿನಿಗಣೇಶ್, ಉಪಾಧ್ಯಕ್ಷರಾಗಿ 6ನೇ ವಾರ್ಡ್‍ನ ಕಾಂಗ್ರೆಸ್‍ನ ಬಿ.ಸಂಜೀವ ಆಯ್ಕೆಯಾದರು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಚುನಾವಣಾಧಿಕಾರಿ ತಹಸೀಲ್ದಾರ್ ಗೋವಿಂದರಾಜು ಸಮ್ಮುಖದಲ್ಲಿ ಪ್ರಕ್ರಿಯೆ ಪ್ರಾರಂಭವಾಯಿತು. ಈರ್ವರು ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ 3 ಗಂಟೆಗೆ ಅವಿರೋಧ ಆಯ್ಕೆಯಾಗಿರುವ ಬಗ್ಗೆ ಚುನಾವಣಾಧಿಕಾರಿ ಘೋಷಿಸಿದರು.
ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ 4, ಜೆಡಿಎಸ್ 3, ಬಿಜೆಪಿ 3, ಪಕ್ಷೇತರ ಒಬ್ಬರು ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಪರಿಶಿಷ್ಟಜಾತಿಗೆ ಹಾಗು ಉಪಾಧ್ಯಕ್ಷ ಸ್ಥಾನ ಬಿಸಿಎಂ(ಎ) ಮೀಸಲಾಗಿದೆ. ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟಕ್ಕೆ ಬಹುಮತವಿದ್ದರೂ ಮೀಸಲಾತಿ ಅನ್ವಯ ಚುನಾಯಿತ ಸದಸ್ಯರಿಲ್ಲದ ಕಾರಣ, ಬಿಜೆಪಿಗೆ ಅದೃಷ್ಟ ಒಲಿಯಿತು.
ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ನಳಿನಿ ಗಣೇಶ್ ಹಾಗು ಪಿ.ಕೆ.ಚಂದ್ರು ಅಕಾಂಕ್ಷಿಗಳಾಗಿದ್ದರು. ಪಕ್ಷದ ನಾಯಕರು ಚರ್ಚೆ ನಡೆಸಿ ಇಬ್ಬರಿಗೂ 15 ತಿಂಗಳ ಅಧಿಕಾರ ಹಂಚಿಕೆ ಮಾಡಲಾಗಿದೆ. ಕಾಂಗ್ರೆಸ್ ಜೆಡಿಎಸ್ ನಡುವಿನ ಒಪ್ಪಂದದಂತೆ ಮೊದಲ ಹದಿನೈದು ತಿಂಗಳ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್‍ಗೆ, ನಂತರದ 15 ತಿಂಗಳು ಜೆಡಿಎಸ್‍ಗೆ ಅವಕಾಶ ಕಲ್ಪಿಸುವ ತೀರ್ಮಾನ ಮಾಡಲಾಗಿದೆ ಎನ್ನಲಾಗಿದೆ.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಪ್ರತ್ಯೇಕವಾಗಿ ಪಟ್ಟಣದ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಎಲ್ಲ ಸದಸ್ಯರ ಸಹಕಾರ ಪಡೆದು ಪಟ್ಟಣದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಅಧ್ಯಕ್ಷೆ ನಳಿನಿ ಗಣೇಶ್ ಹೇಳಿದರು. ಕಸವಿಲೇವಾರಿ ಸಮಸ್ಯೆ ಬಗೆಹರಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು.
ಎರಡು ವರ್ಷದ ವಿಳಂಬದಿಂದ ಪಟ್ಟಣದ ಅಭಿವೃದ್ಧಿ ಕುಂಠಿತವಾಗಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕಾಗಿದೆ ಎಂದು ಉಪಾಧ್ಯಕ್ಷ ಬಿ.ಸಂಜೀವ ಹೇಳಿದರು.
ಚುನಾವಣೆ ಪ್ರಕ್ರಿಯೆ ನಡೆಯುವ ಸಂದರ್ಭ ಶಾಸಕ ಅಪ್ಪಚ್ಚು ರಂಜನ್, ಸದಸ್ಯರಾದ ಬಿ.ಆರ್.ಮಹೇಶ್, ಶುಭಾಕರ್, ಬಿ.ಸಿ.ವೆಂಕಟೇಶ್, ಶೀಲಾ ಡಿಸೋಜ, ಉದಯಶಂಕರ್, ಜಯಂತಿ ಶಿವಕುಮಾರ್, ನಾಗರತ್ನ, ಜೀವನ್, ನಾಮನಿರ್ದೇಶನ ಸದಸ್ಯರಾದ ಎಸ್.ಮಹೇಶ್, ಎಸ್.ಆರ್.ಸೋಮೇಶ್, ಶರತ್ ಹಾಜರಿದ್ದರು.
ಬಿಜೆಪಿಯ ಪ್ರಮುಖರಾದ ಲೋಕೇಶ್ವರಿ ಗೋಪಾಲ್, ಎಂ.ಬಿ.ಅಭಿಮನ್ಯು ಕುಮಾರ್, ಮನುಕುಮಾರ್ ರೈ, ಮಂಜುಳಾ, ತಂಗಮ್ಮ, ಕಾಂಗ್ರೆಸ್‍ನ ಕೆ.ಪಿ.ಚಂದ್ರಕಲಾ, ಬಿ.ಬಿ.ಸತೀಶ್, ಕೆ.ಎಂ.ಲೋಕೇಶ್, ಎಸ್.ಎಂ.ಚಂಗಪ್ಪ, ಬಿ.ಇ.ಜಯೇಂದ್ರ, ಜೆಡಿಎಸ್ ಮುಖಂಡರಾದ ಎಚ್.ಆರ್.ಸುರೇಶ್, ಬಗ್ಗನ ಅನಿಲ್ ಕುಮಾರ್, ಎಸ್.ಎಂ.ಡಿಸಿಲ್ವಾ, ಕಮಲ, ಪ್ರವೀಣ್ ಕುಮಾರ್ ಮತ್ತಿತರರು ವಿಜಯೋತ್ಸವ ಸಂದರ್ಭ ಹಾಜರಿದ್ದರು. ಡಿವೈಎಸ್‍ಪಿ ಶೈಲೇಂದ್ರ, ಸರ್ಕಲ್‍ಇನ್ಸ್‍ಪೆಕ್ಟರ್ ಮಹೇಶ್ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು.