8.68 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು : ಬಿಳಿಗೇರಿಯಲ್ಲಿ ಪ್ರಕರಣ

03/11/2020

ಮಡಿಕೇರಿ ನ.2 : ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬಿಳಿಗೇರಿ ನಿವಾಸಿ ಮಡಿಕೇರಿಯಲ್ಲಿ ಆಯುರ್ವೇದ ಕ್ಲಿನಿಕ್ ಹೊಂದಿರುವ ವೈದ್ಯ ದಂಪತಿಯ ಮನೆಯಲ್ಲಿ ಹಾಡ ಹಗಲೇ ಕಳ್ಳತನ ನಡೆದಿದೆ. ಸುಮಾರು 8 ಲಕ್ಷದ 68 ಸಾವಿರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
ಬಿಳಿಗೇರಿ ನಿವಾಸಿ ಡಾ.ರಾಜಗೋಪಾಲ್ ಎಂಬುವವರ ಮನೆಯಲ್ಲಿ ಕಳ್ಳತನ ಪ್ರಕರಣ ನಡೆದಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ದಂಪತಿ ಪ್ರತಿ ದಿನ ಬಿಳಿಗೇರಿಯಿಂದ ಮಡಿಕೇರಿಗೆ ಬಂದು ಕರ್ತವ್ಯ ಮುಗಿಸಿ ಬಳಿಕ ಮನೆಗೆ ತೆರಳುತ್ತಿದ್ದರು. ಎಂದಿನಂತೆ ನ.2ರಂದು ಈ ದಂಪತಿ ತಮ್ಮ ಮಗಳ ಜೊತೆ ಬೆಳಗೆ 9 ಗಂಟೆಯ ಸಮಯದಲ್ಲಿ ಬಿಳಿಗೇರಿಯಿಂದ ಮಡಿಕೇರಿಗೆ ಬಂದಿದ್ದರು ಎನ್ನಲಾಗಿದೆ. ಅದಕ್ಕೂ ಮೊದಲ ಮನೆಯ ಮುಂದಿನ ಬಾಗಿಲಿಗೆ ಡೋರ್ ಲಾಕ್ ಮಾಡಿದ್ದು, ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ಮತ್ತೆ ಮನೆಗೆ ತೆರಳಿದ್ದಾರೆ. ಈ ಸಂದರ್ಭ ಮನೆಯ ಹಿಂಬದಿಯ ಬಾಗಿಲನ್ನು ತೆರೆಯಲು ಮುಂದಾದಾಗ ಅದು ಮೊದಲೇ ತೆರೆದ ಸ್ಥಿತಿಯಲ್ಲಿರುವುದು ಕಂಡು ಬಂದಿದೆ. ಮಾತ್ರವಲ್ಲದೇ ಮೆಟ್ಟಿಲುಗಳು ಹಾಗೂ ಮನೆಯ ಒಳಭಾಗ ಖಾರದ ಪುಡಿಗಳನ್ನು ಹರಡಿರುವುದು ಕಂಡು ಬಂದಿದೆ.
ಬಳಿಕ ಮನೆಯ ಒಳಗೆ ಚಿನ್ನಾಭರಣ ಇಟ್ಟಿದ್ದ ಗಾದ್ರೇಜ್ ಅನ್ನು ಪರಿಶೀಲಿಸಿದಾಗ ಅದು ಕೂಡ ತೆರೆದ ಸ್ಥಿತಿಯಲ್ಲಿದ್ದು, ಚಿನ್ನಾಭರಣ ಇಟ್ಟಿದ್ದ ಬ್ಯಾಗ್ ಸಹಿತ ಎಲ್ಲವನ್ನು ಕಳ್ಳರು ಕದ್ದೊಯ್ದಿರುವುದು ಪತ್ತೆಯಾಗಿದೆ. 4 ನೆಕ್ಲೇಸ್, 4 ಲಾಂಗ್ ಚಿನ್ನದ ಚೈನ್, 52 ಗ್ರಾಂ ತೂಕದ 8 ಬಳೆಗಳು, 4 ಬ್ರೇಸ್ ಲೆಟ್, 1 ಕಡಗ, 1 ಹವಳದ ಚೈನ್, 8 ಉಂಗುರ, 8 ಜೊತೆ ಕಿವಿಯ ಓಲೆಗಳು, 4 ಸಣ್ಣ ಚೈನ್, 1 ಕಾಸಿನ ಸರ, ಕೆನರಾ ಬ್ಯಾಂಕ್‍ನ ಎಫ್.ಡಿ ದಾಖಲೆಗಳು ಕಳುವಾಗಿರುವುದು ಕಂಡು ಬಂದಿದೆ.
ಈ ಎಲ್ಲಾ ಸ್ವತ್ತುಗಳ ಒಟ್ಟು ಮೌಲ್ಯ 8.68 ಲಕ್ಷ ರೂ.ಗಳಾಗಿದೆ ಎಂದು ಅಂದಾಜಿಸಲಾಗಿದೆ. ಕಳವು ಪ್ರಕರಣದ ಬಗ್ಗೆ ಡಾ.ರಾಜಗೋಪಾಲ್ ಅವರು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.