ಕೊಡಗಿನ ಮೂರು ಪಟ್ಟಣ ಪಂಚಾಯಿತಿಗಳ ಅಧಿಕಾರ ಬಿಜೆಪಿಗೆ : ಉಪಾಧ್ಯಕ್ಷ ಸ್ಥಾನ ಕುಶಾಲನಗರದಲ್ಲಿ ಜೆಡಿಎಸ್‍ಗೆ, ಸೋಮವಾರಪೇಟೆಯಲ್ಲಿ ಕಾಂಗ್ರೆಸ್‍ಗೆ

03/11/2020

ಮಡಿಕೇರಿ ನ.3 : ಕೊಡಗು ಜಿಲ್ಲೆಯ ಮೂರು ಪಟ್ಟಣ ಪಂಚಾಯತ್‍ಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ಮೂರು ಪಂಚಾಯತ್‍ಗಳ ಅಧಿಕಾರವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಕುಶಾಲನಗರ ಹಾಗೂ ವೀರಾಜಪೇಟೆ ಹಾಗೂ ಸೋಮವಾರಪೇಟೆ ಪಟ್ಟಣ ಪಂಚಾಯತ್ ಚುನಾವಣೆ ನಡೆದು ಎರಡು ವರ್ಷಗಳಾಗಿದ್ದರೂ, ಮೀಸಲಾತಿ ಗೊಂದಲದಿಂದಾಗಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನೆನೆಗುದಿಗೆ ಬಿದ್ದಿತ್ತು. ಇದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ರಾಜ್ಯ ಉಚ್ಛ ನ್ಯಾಯಾಲಯ ತೀರ್ಪು ನೀಡಿ ಸರಕಾರ ಈ ಹಿಂದೆ ನಿಗದಿಪಡಿಸಿದ ಮೀಸಲಾತಿಯ ಅನ್ವಯ ಚುನಾವಣೆ ನಡೆಸುವಂತೆ ಸೂಚಿಸಿದ ಮೇರೆಗೆ ಮಂಗಳವಾರ ಜಿಲ್ಲೆಯ ಮೂರು ಪಟ್ಟಣ ಪಂಚಾಯತ್‍ಗಳಲ್ಲೂ ಚುನಾವಣೆ ನಡೆಯಿತು.
ಕುಶಾಲನಗರ ಪಟ್ಟಣ ಪಂಚಾಯತ್‍ನ ಅಧ್ಯಕ್ಷರಾಗಿ ಬಿಜೆಪಿಯ ಜಯವರ್ಧನ್(ಕೇಶವ್) ಅವರು ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಜೆಡಿಎಸ್‍ನ ಸುರಯ್ಯಭಾನು ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಎ) ಮಹಿಳೆಗೆ ಮೀಸಲಾಗಿತ್ತು.
ಪಂಚಾಯತ್‍ನ ಒಟ್ಟು 13 ಮಂದಿ ಚುನಾಯಿತ ಸದಸ್ಯರ ಪೈಕಿ ಬಿಜೆಪಿ 6, ಕಾಂಗ್ರೆಸ್ 3 ಹಾಗೂ ಜೆಡಿಎಸ್ 4 ಸದಸ್ಯರನ್ನು ಹೊಂದಿದ್ದು, ಮಂಗಳವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್‍ನ ಮೂರು ಮಂದಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಅಧ್ಯಕ್ಷ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಡುವುದರೊಂದಿಗೆ ಉಪಾಧ್ಯಕ್ಷ ಸ್ಥಾನವನ್ನು ಜೆಡಿಎಸ್ ತೆಕ್ಕೆಗೆ ಹಾಕಿಕೊಂಡರು.
ಚುನಾವಣೆಯಲ್ಲಿ ಶಾಸಕ ಅಪ್ಪಚ್ಚುರಂಜನ್ ಹಾಗೂ ಸಂಸದ ಪ್ರತಾಪ್‍ಸಿಂಹ ಅವರುಗಳು ಬಿಜೆಪಿ ಪರ ಮತ ಚಲಾಯಿಸುವ ಮೂಲಕ ಬಿಜೆಪಿಗೆ 11 ಮತಗಳು ಲಭ್ಯವಾದವು. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್‍ನ ಜಯಲಕ್ಷ್ಮಮ್ಮ ಕೇವಲ 6 ಮತಗಳನ್ನು ಪಡೆದರು. ಜೆಡಿಎಸ್‍ನ ವಿ.ಎಸ್.ಆನಂದ ಕುಮಾರ್ ತಟಸ್ಥವಾಗಿ ಉಳಿದರು.
ಜಯವರ್ಧನ್ ಮಾತನಾಡಿ, ಪಕ್ಷ ಎನ್ನುವುದು ಕೇವಲ ಚುನಾವಣೆಗಷ್ಟೇ ಸೀಮಿತ. ಇನ್ನು ಏನೇ ಇದ್ದರೂ ಊರಿನ ಅಭಿವೃದ್ಧಿ ಮಾತ್ರ. ಶಾಸಕರು, ಸಂಸದರ ಸಹಕಾರದಿಂದ ದೂರದೃಷ್ಟಿ ಇಟ್ಟು ಊರಿನ ಅಭಿವೃದ್ಧಿಗೆ ಪಣ ತೊಡುತ್ತೇನೆ. ಎಲ್ಲಾ ಸದಸ್ಯರ ಬೆಂಬಲದೊಂದಿಗೆ ಕೆಲಸ ನಿರ್ವಹಿಸುತ್ತೇನೆ ಎಂದು ತಿಳಿಸಿದರು.
ಬಿಜೆಪಿ ಸಂಭ್ರಮ: ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಜಯವರ್ಧನ್, ಶಾಸಕ ಮತ್ತು ಸಂಸದರ ಪರ ಜಯ ಘೋಷ ಮೊಳಗಿಸಿದರು. ಚುನಾವಣೆ ಮುಗಿಸಿ ಕಚೇರಿಯಿಂದ ಜಯವರ್ಧನ್ ಹೊರ ಬಂದ ತಕ್ಷಣ ಕಾರ್ಯಕರ್ತರ ಉತ್ಸಾಹ ಎಲ್ಲೆ ಮೀರಿತ್ತು. ಪಟ್ಟಾಕಿ ಸಿಡಿಸಿ, ಹೂವಿನ ಹಾರಗಳನ್ನು ಹಾಕಿ ಸಂಭ್ರಮಿಸಿದರು.
ಜೆಡಿಎಸ್ ಆಕ್ರೋಶ: ಜೆಡಿಎಸ್‍ನ ಮೂವರು ಪ.ಪಂ. ಸದಸ್ಯರನ್ನು ಬಿಜೆಪಿಯ ನಗರಾಧ್ಯಕ್ಷ ಉಮಾಶಂಕರ್ ಕಾರಿನಲ್ಲಿ ಕರೆ ತಂದರು. ಜೆಡಿಎಸ್ ಪಕ್ಷದ ಪ್ರಮುಖರಿಗೆ ಈ ಸದಸ್ಯರನ್ನು ಭೇಟಿ ಮಾಡಲು ಅವಕಾಶ ನೀಡದೆ ಪಂಚಾಯಿತಿ ಕಚೇರಿ ಒಳಗೆ ಕಳುಹಿಸುವಲ್ಲಿ ಬಿಜೆಪಿಯ ಕಾರ್ಯಕರ್ತರು ಯಶಸ್ವಿಯಾದರು. ಚುನಾವಣೆ ನಂತರವೂ ಜೆಡಿಎಸ್ ಸದಸ್ಯರಿಗೆ ಪಕ್ಷದ ವರಿಷ್ಠರ ಭೇಟಿಗೆ ಅವಕಾಶ ನೀಡಲಿಲ್ಲ.
ಜೆಡಿಎಸ್ ಪ್ರತಿಭಟನೆ: ಇದೇ ವೇಳೆ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಜಾಕ್ ನೇತೃತ್ವದಲ್ಲಿ ಕಾರ್ಯಕರ್ತರು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರಲ್ಲದೆ, ಚುನಾವಣೆಯಲ್ಲಿ ತಟಸ್ಥರಾಗಿ ಉಳಿದ ವಿ.ಎಸ್.ಅನಂದಕುಮಾರ್ ಅವರನ್ನು ಭುಜದ ಮೇಲೆ ಕೂರಿಸಿಕೊಂಡು ಕುಣಿದಾಡಿದರು.
ವೀರಾಜಪೇಟೆ ಪ.ಪಂ. ವೀರಾಜಪೇಟೆ ಪಟ್ಟಣ ಪಂಚಾಯತ್‍ನ ಅಧ್ಯಕ್ಷರಾಗಿ ಬಿಜೆಪಿಯ ಟಿ.ಆರ್.ಸುಶ್ಮಿತಾ ಹಾಗೂ ಉಪಾಧ್ಯಕ್ಷರಾಗಿ ಲಾಟರಿ ಮೂಲಕ ಹರ್ಷವರ್ಧನ್ ಆಯ್ಕೆಯಾಗಿದ್ದಾರೆ,
ಪಂಚಾಯತ್‍ನ ಒಟ್ಟು 18 ಚುನಾಯಿತ ಸದಸ್ಯರ ಪೈಕಿ ಬಿಜೆಪಿ 8, ಕಾಂಗ್ರೆಸ್ 6, ಜೆಡಿಎಸ್ 1 ಹಾಗೂ ಪಕ್ಷೇತರ ಮೂರು ಮಂದಿ ಇದ್ದಾರೆ. ಮಂಗಳವಾರ ನಡೆದ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಸುಶ್ಮಿತಾ ಮಾತ್ರ ಅರ್ಹರಾಗಿರುವುದರಿಂದ ಬಿಜೆಪಿಯ 8 ಹಾಗೂ ಶಾಸಕ ಕೆ.ಜಿ.ಬೋಪಯ್ಯ ಹಾಗೂ ಸಂಸದ ಪ್ರತಾಪ್‍ಸಿಂಹ ಅವರ ಎರಡು ಮತಗಳ ಸಹಕಾರದಿಂದ 10 ಮತಗಳನ್ನು ಪಡೆದರು.
ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‍ನ ಅಗಸ್ಟಿನ್ ಹಾಗೂ ಹರ್ಷವರ್ಧನ್ ಅವರುಗಳು ತಲಾ 10 ಮತಗಳನ್ನು ಪಡೆದು ಸಮಬಲ ಸಾಧಿಸಿದರೆ, ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ಎಲ್.ಎಂ.ನಂದೀಶ್ ಅವರು ಲಾಟರಿ ಮೂಲಕ ವಿಜೇತರನ್ನು ಆಯ್ಕೆ ಮಾಡುವ ಸಂದರ್ಭ ಹರ್ಷವರ್ಧನ್ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರರ ಮೈತ್ರಿ ಕೂಟ ಮುಖಭಂಗ ಅನುಭವಿಸುವಂತಾಯಿತು.
ಅತ್ತ ಸೋಮವಾರಪೇಟೆ ಪಟ್ಟಣ ಪಂಚಾಯತ್‍ನಲ್ಲೂ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ನಳಿನಿ ಗಣೇಶ್ ಮೀಸಲಾತಿಯಡಿ ಆಯ್ಕೆಯಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಅಭ್ಯರ್ಥಿ ಕಾಂಗ್ರೆಸ್‍ನ ಬಿ.ಸಂಜೀವ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.