ವೇಶ್ಯಾವಾಟಿಕೆ ನಡೆಸುತ್ತಿದ್ದ ಹೋಂಸ್ಟೇ ಮಾಲೀಕ ಸಹಿತ ಇಬ್ಬರ ಬಂಧನ : ಕುಶಾಲನಗರದಲ್ಲಿ ಪ್ರಕರಣ

03/11/2020

ಮಡಿಕೇರಿ ನ.3 : ಮೈಸೂರಿನಿಂದ ಮಹಿಳೆಯರನ್ನು ಕರೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಹೋಂಸ್ಟೇ ಮಾಲೀಕ ಸೇರಿದಂತೆ ಇಬ್ಬರನ್ನು ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಕುಶಾಲನಗರ ಗಂಧದಕೋಟೆಯ ಕೂರ್ಗ್ ಹಾಲಿಡೇ ಹೋಂಸ್ಟೇ ಮಾಲೀಕ ರಾಜೇಶ್(34) ಹಾಗೂ ದಲ್ಲಾಳಿ ಮದಲಾಪುರದ ನಿವಾಸಿ ಎ.ಆರ್.ರಜನಿಕಾಂತ್ ಅಲಿಯಾಸ್ ರಜನಿ (36) ಎಂದು ಗುರುತಿಸಲಾಗಿದೆ.
ಈ ಮೇಲಿನ ಆರೋಪಿಗಳು ಮೈಸೂರಿನಿಂದ ಮಹಿಳೆಯರನ್ನು ಕರೆಸಿ ಸ್ಥಳೀಯ ವ್ಯಕ್ತಿಗಳನ್ನು ಮಹಿಳೆಯರೊಂದಿಗೆ ಲೈಂಗಿಕ ಚಟುವಟಿಕೆಗೆ ಬಿಟ್ಟು ಅವರಿಂದ ಸಾವಿರಾರು ರೂ.ಗಳನ್ನು ಪಡೆಯುತ್ತಿದ್ದರೆಂದು ಹೇಳಲಾಗಿದೆ. ಅದರಂತೆ ಸೋಮವಾರ ಸಂಜೆ ಇವರಿಬ್ಬರು ಮೈಸೂರಿನಿಂದ ಇಬ್ಬರು ಮಹಿಳೆಯರನ್ನು ಕರೆಸಿರುವ ಖಚಿತ ಮಾಹಿತಿ ಪಡೆದ ಕುಶಾಲನಗರ ವೃತ್ತ ನಿರೀಕ್ಷಕ ಎಂ.ಮಹೇಶ್ ಹಾಗೂ ತಂಡದವರು ಹೋಂಸ್ಟೇಗೆ ದಾಳಿ ನಡೆಸಿದಾಗ ಅಲ್ಲಿ ಮೈಸೂರು ವಿಜಯನಗರ ಮೂಲದ ಹಾಗೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಇಬ್ಬರು ಮಹಿಳೆಯರೊಂದಿಗೆ ಗುಡ್ಡೆಹೊಸೂರು ಗ್ರಾಮದವರು ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದುದು ಕಂಡು ಬಂದಿದೆ.
ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಕುಶಾಲನಗರ ಪೊಲೀಸರು ಮಾಲೀಕ ಹಾಗೂ ದಲ್ಲಾಳಿಯನ್ನು ಬಂಧಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಹಾಗೂ ಸೋಮವಾರಪೇಟೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಹೆಚ್.ಎಂ. ಶೈಲೇಂದ್ರ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಎಂ. ಮಹೇಶ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕುಶಾಲನಗರ ಟೌನ್ ಠಾಣಾಧಿಕಾರಿ ಗಣೇಶ್, ವಿ.ಪ್ರಕಾಶ್. ರವೀಂದ್ರ, ಜಯಪ್ರಕಾಶ್, ಸಜಿ, ಸಂಪತ್ ರೈ, ಶ್ವೇತಾ ಪಾಲ್ಗೊಂಡಿದ್ದರು.