ಕುಶಾಲನಗರ ಪ.ಪಂ ಮೂವರು ಸದಸ್ಯರು ಆಮಿಷಕ್ಕೆ ಒಳಗಾಗಿದ್ದಾರೆ : ಜೆಡಿಎಸ್ ಅಧ್ಯಕ್ಷ ಗಣೇಶ್ ಅಸಮಾಧಾನ

03/11/2020

ಮಡಿಕೇರಿ ನ.3 : ಕುಶಾಲನಗರದ ಪ.ಪಂ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಗೆಲುವು ಸಾಧಿಸಿರುವ ಸುರಯ್ಯ ಬಾನು ಮತ್ತು ಅವರ ಬೆಂಬಲಿಗರು ಜೆಡಿಎಸ್ ಪಕ್ಷದ ವಿಪ್ ಉಲ್ಲಂಘನೆ ಮಾಡಿ ಹಣದ ಆಮಿಷಕ್ಕೆ ಒಳಗಾಗಿ ಕೋಮುವಾದಿ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ ಎಂದು ಜಾತ್ಯಾತೀತ ಜನತಾ ದಳದ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡಗು ಜಿಲ್ಲಾ ಜೆಡಿಎಸ್ ಜಾತ್ಯಾತೀತ ತತ್ವಗಳನ್ನು ಅನುಸರಿಸುತ್ತಿದ್ದು, ಪಕ್ಷದ ಎಲ್ಲಾ ಕಾರ್ಯಕರ್ತರನ್ನು, ಎಲ್ಲಾ ಮತದಾರರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸ ಮಾಡಿದೆ.
ಆದರೆ ಪಕ್ಷದ ಮೂವರು ಸದಸ್ಯರು ತಮ್ಮ ವೈಯಕ್ತಿಕ ವಿಚಾದಿಂದ ಹಣದ ಆಮಿಷಕ್ಕೆ ಒಳಗಾಗಿ ಭಾರತೀಯ ಜನತಾ ಪಾರ್ಟಿಯೊಂದಿಗೆ ಕೈಜೋಡಿಸಿದ್ದು, ಈ ಮೂವರು ಸದಸ್ಯರನ್ನು ಪಕ್ಷದಿಂದ ಅಮಾನತ್ತು ಗೊಳಿಸಿ ಆದೇಶ ಹೊರಡಿಸಲಾಗಿದೆ. ಅಲ್ಲದೆ ಇವರ ವಿರುದ್ಧ ಕಾನೂನು ಹೋರಾಟ ಮಾಡಲಾಗುದು ಎಂದು ಗಣೇಶ್ ತಿಳಿಸಿದರು.
ಕೊಡಗು ಜೆಡಿಎಸ್ ಎಲ್ಲಾ ಶೋಷಿತ ವರ್ಗದವರ, ಹಿಂದುಳಿದ ವರ್ಗದವರೊಂದಿಗೆ ಸಹಬಾಳ್ವೆಯಿಂದ ಇರುವ ಪಕ್ಷವಾಗಿದ್ದು, ಈ ಪಕ್ಷಕ್ಕೆ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ರಾಜ್ಯ ಯುವ ಜೆಡಿಎಸ್‍ನ ರಾಜ್ಯಾಧ್ಯಕ್ಷ ನಿಖಿಲ್ ಎಲ್ಲಾ ಕಾರ್ಯಕರ್ತರಿಗೆ ಸಹಕಾರ ನೀಡುತ್ತಾ ಬಂದಿದ್ದಾರೆ.
ಇದೇ ಮೊದಲ ಬಾರಿಗೆ ಕೋಮುವಾದದ ಜೊತೆ ಅಲ್ಪಸಂಖ್ಯಾತರ ಮಹಿಳೆಯೊಬ್ಬರು ಕೈ ಜೋಡಿಸಿರುವುದು ಬೇಸರ ತಂದಿದ್ದು, ಪಕ್ಷದ ತತ್ವ ಸಿದ್ದಾಂತವನ್ನು ದಿಕ್ಕರಿಸಿ ಬಿಜೆಪಿ ಪಕ್ಷಕ್ಕೆ ಸಹಕಾರ ನೀಡಿರುವ ಸುರಯ್ಯ ಬಾನು ಹಾಗೂ ಸಂಗಡಿಗರಿಗೆ ಪಕ್ಷದಿಂದ ಎಂದಿಗೂ ಕ್ಷಮೆ ಇಲ್ಲ ಎಂದರು.