ಆನೆ ಚೌಕೂರಿನ ಭೀಮನಿಗೆ ಕೋಪ ಬಂದಿದ್ದು ಯಾಕೆ ಗೊತ್ತಾ !

04/11/2020

ಮಡಿಕೇರಿ ನ.4 : ರಸ್ತೆ ಬದಿಯಲ್ಲಿ ನೆಮ್ಮದಿಯಾಗಿ ತನ್ನ ಪಾಡಿಗೆ ಮೇಯುತ್ತಿದ್ದ ಸಾಕಿದ ಆನೆಯ ಫೋಟೋ ತೆಗೆಯಲು ತೆರಳಿದ ವ್ಯಕ್ತಿಯೊಬ್ಬನ ಬೈಕ್ ಅನ್ನು ಆನೆ ಜಖಂಗೊಳಿಸಿದ ಘಟನೆ ಆನೆಚೌಕೂರು ಬಳಿ ನಡೆದಿದೆ.
ಎಂದಿನಂತೆ ಮತ್ತಿಗೋಡು ಸಾಕಾನೆ ಶಿಬಿರದಿಂದ ಭೀಮ ಆನೆಯನ್ನು ಮಾವುತರು ಕಾಡಿನಲ್ಲಿ ಮೇಯಲು ಬಿಟ್ಟಿದ್ದರು. ಇಂದು ಕೂಡ ಭೀಮ ತನ್ನ ಪಾಡಿಗೆ ರಸ್ತೆಗೆ ಹೊಂದಿಕೊಂಡ ಕಾಡಿನಲ್ಲಿ ಮೇಯುತ್ತಿತ್ತು. ಸಾಕಿದ ಆನೆಯನ್ನು ಕಂಡು ಬೈಕ್ ಸವಾರರಿಬ್ಬರೂ ಅದರ ಫೋಟೋ ತೆಗೆಯಲು ಮುಂದಾಗಿದ್ದಾರೆ. ಇದರಿಂದ ಕೋಪಗೊಂಡ ಭೀಮ ಬೈಕ್ ಸವಾರರನ್ನು ಗದರಿಸಿದೆ. ಆನೆಯ ಗದರುವಿಕೆಗೆ ಬೈಕ್ ಅನ್ನು ಸ್ಥಳದಲ್ಲೇ ಬಿಟ್ಟು ಬೈಕ್ ಸವಾರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ತನ್ನ ನೆಮ್ಮದಿಗೆ ಭಂಗ ತಂದ ಬೈಕ್ ಸವಾರರಿಗೆ ಬುದ್ದಿ ಕಲಿಸಲು ಭೀಮ ಬೈಕ್ ಅನ್ನು ತನ್ನ ಸೊಂಡಿಲಲ್ಲಿ ಎತ್ತಿ ಅತ್ತಿಂದಿತ್ತ ಎಳೆದಾಡಿದೆ. ಆನೆಯ ಆಟೋಟೋಪ ಕಂಡು ರಸ್ತೆಯ ಎರಡೂ ಬದಿ ನೂರಾರು ವಾಹನಗಳು ಸಾಲು ಗಟ್ಟಿ ನಿಂತಿದ್ದವು. ಆದರೆ ಭೀಮ ಮಾತ್ರ ಬೇರ‍್ಯಾವ ವಾಹನದ ಬಳಿಯೂ ತೆರಳದೆ ರಸ್ತೆ ಬದಿಯಲ್ಲಿ ಬೈಕ್ ಅನ್ನು ಎಳೆದಾಡಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣದಲ್ಲಿಯೂ ವೈರಲ್ ಆಗಿದೆ. ಬಳಿಕ ಮಾವುತರು ಭೀಮನನ್ನು ಕರೆದುಕೊಂಡು ಸಾಕಾನೆ ಶಿಬಿರಕ್ಕೆ ತೆರಳಿದ್ದಾರೆ.