ಪಾಲಿಬೆಟ್ಟ ಸರಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಕೊಠಡಿ ಉದ್ಘಾಟನೆ

ಮಡಿಕೇರಿ ನ. 4 : ಪಾಲಿಬೆಟ್ಟ ಸರಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಕೊಠಡಿಯನ್ನು ಜಿ.ಪಂ. ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಪಾಲಿಬೆಟ್ಟ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕಾರ್ಮಿಕ ಕುಟುಂಬಗಳು, ಸಾರ್ವಜನಿಕರು ಅಧಿಕವಾಗಿದ್ದು ಆಸ್ಪತ್ರೆಯ ಸೇವೆಗಳು ಉತ್ತಮ ರೀತಿಯಲ್ಲಿ ಸಿಗಲು ಪ್ರಾಮಾಣಿಕ ಪ್ರಯತ್ನ ಮಾಡಿದ ಹಿನ್ನೆಲೆಯಲ್ಲಿ ಇದೀಗ ಶಸ್ತ್ರಚಿಕಿತ್ಸಾ ಕೊಠಡಿ ಜನರ ಸೇವೆಗೆ ಸಿಗಲಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.
ತಾ.ಪಂ. ಸದಸ್ಯ ಅಜಿತ್ ಕರುಂಬಯ್ಯ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಉತ್ತಮ ಸೇವೆ ನೀಡಲು ವೈದ್ಯಾಧಿಕಾರಿಗಳು ಆಸ್ಪತ್ರೆಯಲ್ಲಿ ಸೇವೆ ನೀಡುತ್ತಿದ್ದಾರೆ. ಇದರೊಂದಿಗೆ ಎಲ್ಲಾ ಸೌಲಭ್ಯಗಳು ಸಿಗಲಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ವೈದ್ಯಾಧಿಕಾರಿ ಲೋಹಿತ್ ಮಾತನಾಡಿ ಆರೋಗ್ಯ ಇಲಾಖೆ ಹಾಗೂ ಜಿ.ಪಂ ಸದಸ್ಯರ ಸಹಕಾರದಿಂದ ಆಸ್ಪತ್ರೆಗೆ ಸೌಲಭ್ಯಗಳು ಲಭಿಸಿದೆ. ನಾಲ್ಕು ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ಆರೋಗ್ಯ ಸೇವೆ ನೀಡಲು ಆಸ್ಪತ್ರೆ ಸಿಬ್ಬಂದಿಗಳು ಮುಂದಾಗಿದ್ದಾರೆ.
ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡು ಆರೋಗ್ಯ ವಂತ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಕೈಜೋಡಿಸಬೇಕೆಂದರು.
ಈ ಸಂದರ್ಭ ಗ್ರಾ. ಪಂ. ಸದಸ್ಯ ದೀಪಕ್ಗಣಪತಿ, ವೈದ್ಯಾಧಿಕಾರಿ ಜಗದೀಶ್ ಹಾಗೂ ದಾದಿಯರು, ಆಶಾಕಾರ್ಯಕರ್ತರು ಹಾಜರಿದ್ದರು.
