ಮತಾಂತರದ ವಿರುದ್ಧ ಕಠಿಣ ಕಾನೂನು ಕ್ರಮ : ಸಂಸದ ಪ್ರತಾಪ್ ಸಿಂಹ ಪ್ರತಿಪಾದನೆ

04/11/2020

ಮಡಿಕೇರಿ ನ.4 : ಮದುವೆಯಾಗುವ ಮುನ್ನ ಮತಾಂತರ ಕಡ್ಡಾಯ ಎನ್ನುವವರು ಹುಟ್ಟು ಮತಾಂಧರು ಎಂಬುವುದು ಸ್ಪಷ್ಟವಾಗಿದ್ದು, ಇದಕ್ಕೆ ಕಠಿಣ ಕಾನೂನು ತರ ಬೇಕೆನ್ನುವ ಅಭಿಪ್ರಾಯ ಸರಿಯಾಗಿಯೇ ಇದೆ ಎಂದು ಮೈಸೂರು, ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಸಮರ್ಥಿಸಿಕೊಂಡಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರೀತಿಸುವಾಗ ಅಡ್ಡಿ ಬಾರದ ಧರ್ಮ ಮದುವೆಯಾಗುವಾಗ ಏಕೆ ಅಡ್ಡಿ ಬರುತ್ತಿದೆ ಎಂದು ಪ್ರಶ್ನಿಸಿದ ಪ್ರತಾಪ್ ಸಿಂಹ, ಧರ್ಮಾಂಧತೆ ಕೆಲವು ಮನುಷ್ಯರಲ್ಲಿ ರಕ್ತಗತವಾಗಿದೆ. ಇಂತಹ ವ್ಯಕ್ತಿಗಳು ಪ್ರೀತಿಯ ನಾಟಕವಾಡಿ ಧರ್ಮಾಂಧತೆ ಅಥವಾ ಮತಾಂತರದ ಉದ್ದೇಶ ಹೊಂದಿದ್ದು, ಅದನ್ನು ಲವ್ ಜಿಹಾದ್ ಎಂದೂ ಕರೆಯಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ವಿವಾಹವಾಗುವ ಮುನ್ನ ಮತಾಂತರ ಆಗಬೇಕು ಎಂದು ಒತ್ತಡ ಹೇರಿದರೆ ಅಂತಹವರ ವಿರುದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಕಠಿಣ ಕಾನೂನು ತರುವುದಾಗಿ ಹೇಳಿದ್ದಾರೆ. ಕರ್ನಾಟಕ ರಾಜ್ಯದ ಸಚಿವರು ಹಾಗೂ ಪಕ್ಷದ ಕೇಂದ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸಿ.ಟಿ.ರವಿ ಅವರು ಕೂಡ ಇದನ್ನು ಪುನರುಚ್ಚರಿಸಿದ್ದಾರೆ. ಇದು ಸೂಕ್ತವಾದ ನಿರ್ಧಾರವಾಗಿದೆ ಎಂದು ಪ್ರತಾಪ್ ಸಿಂಹ ಹೇಳಿದರು.
ಇದೇ ವಿಚಾರವನ್ನು ಕೋರ್ಟ್ ಹೇಳಿರುವಾಗ ಇದಕ್ಕೆ ಕಡಿವಾಣ ಹಾಕುವ ಕಾನೂನು ತರಬೇಕು ಎಂಬುದು ಸೂಕ್ತ ಅಭಿಪ್ರಾಯವಾಗಿದ್ದು, ರಾಜ್ಯದಲ್ಲೂ ಈ ಕಾನೂನು ಜಾರಿಯಾಗಬೇಕು ಎಂದರು. ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರು ಅಧಿಕಾರ ವಹಿಸಿಕೊಂಡ ಬಳಿಕ ಟಿಪ್ಪು ಜಯಂತಿಯನ್ನು ರದ್ದು ಮಾಡುವುದಾಗಿ ಹೇಳಿದ್ದು ಅದನ್ನು ಮಾಡಿದ್ದಾರೆ. ಇದೀಗ ಧರ್ಮಾಂಧತೆ ಹಾಗೂ ಲವ್ ಜಿಹಾದ್ ವಿಚಾರದಲ್ಲೂ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸ ತಮಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಗೋಣಿಕೊಪ್ಪದ ಯುವಕನೊಬ್ಬ ಪಾಕಿಸ್ತಾನದ ಜೈಲಿನಲ್ಲಿರುವ ವಿಚಾರದ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಕಳೆದ 2 ವರ್ಷಗಳಿಂದ ಈ ಬಗ್ಗೆ ಕೆಲವರು ಆ ಯುವಕನ ಫೋಟೋ ಹಿಡಿದುಕೊಂಡು ತಮ್ಮ ಬಳಿ ಬಂದಿದ್ದರು ಎಂದು ಹೇಳಿದರು. ಆತ ಪಾಕಿಸ್ತಾನದಲ್ಲಿರುವ ಬಗ್ಗೆ ಎಲ್ಲಿಯೂ ಖಚಿತ ಮಾಹಿತಿ ಇಲ್ಲ. ಖಚಿತ ಮಾಹಿತಿ ಇದ್ದಲ್ಲಿ ಕೇಂದ್ರ ವಿದೇಶಾಂಗ ಖಾತೆ ಸಚಿವರೊಂದಿಗೆ ವ್ಯವಹರಿಸಿ, ಪಾಕಿಸ್ತಾನದಲ್ಲಿರುವ ಇಂಡಿಯನ್ ಹೈ ಕಮೀಷನರ್ ಗಮನಕ್ಕೆ ತಂದು ಆತನನ್ನು ಭಾರತಕ್ಕೆ ಕರೆ ತರುವ ಪ್ರಯತ್ನ ಮಾಡುತ್ತೇನೆ. ಈ ಬಗ್ಗೆ ಹೆಚ್ಚಿನ ಮಾಹಿತಿಯ ನಿರೀಕ್ಷೆಯಲ್ಲಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.