ಮಾವೋವಾದಿ ಸಾವಿನ ಹಿನ್ನೆಲೆ : ನಕ್ಸಲ್ ಚಟುವಟಿಕೆ ವಿರುದ್ಧ ಕೊಡಗಿನಲ್ಲೂ ಕಟ್ಟೆಚ್ಚರ

November 4, 2020

ಮಡಿಕೇರಿ ನ.4 : ಕೇರಳದ ವಯನಾಡುವಿನ ಬಣಾಸುರಮನೆ ಎಂಬ ಅರಣ್ಯದಲ್ಲಿ ಕೇರಳದ ನಕ್ಸಲ್ ನಿಗ್ರಹ ದಳ ‘ಥಂಡರ್ ಬೋಲ್ಟ್’ ಹಾಗೂ ಮಾವೋವಾದಿಗಳ ನಡುವೆ ಮಂಗಳವಾರ ಬೆಳಗ್ಗೆ ಗುಂಡಿನ ಚಕಮಕಿ ನಡೆದು ಓರ್ವ ಮಾವೋವಾದಿ ಮೃತಪಟ್ಟ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ಗಡಿ ಪ್ರದೇಶಗಳಲ್ಲಿ ಕೂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ.
ವಯನಾಡಿನಲ್ಲಿ 3 ಮಂದಿ ನಕ್ಸಲರು ಮತ್ತು ಥಂಡರ್ ಬೋಲ್ಟ್ ಕಮಾಂಡೋಗಳ ನಡುವೆ ಗುಂಡಿನ ಕಾಳಗ ನಡೆದಿದ್ದು, ತಮಿಳುನಾಡಿನ ವೇಲು ಮುರುಘ(32) ಎಂಬ ನಕ್ಸಲ್ ಮೃತಪಟ್ಟಿದ್ದು, ಇನ್ನುಳಿದವರು ಕಾಡಿನಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಬುಧವಾರ ಬೆಳಗಿನ ಸಮಯದಲ್ಲಿ ಮೃತ ನಕ್ಸಲ್ ವೇಲು ಮುರುಘನ ಮೃತ ದೇಹವನ್ನು ಶವ ಮರಣೋತ್ತರ ಪರೀಕ್ಷೆಗಾಗಿ ಕ್ಯಾಲಿಕಟ್‍ನ ಮೆಡಿಕಲ್ ಕಾಲೇಜಿಗೆ ಸ್ಥಳಾಂತರ ಮಾಡಲಾಗಿದೆ ಎಂದು ಮಾಹಿತಿಯೂ ಲಭ್ಯವಾಗಿದೆ.
ಈ ನಡುವೆ ಎನ್‍ಕೌಂಟರ್ ಸಂದರ್ಭ ತಪ್ಪಿಸಿಕೊಂಡ ಮಾವೋವಾದಿಗಳು ಕೊಡಗು ಅರಣ್ಯ ಗಡಿಯ ಮೂಲಕ ಕರ್ನಾಟಕ ಪ್ರವೇಶಿಸದಂತೆ ತಡೆಯುವ ನಿಟ್ಟಿನಲ್ಲಿ ವಿರಾಜಪೇಟೆಯ ಆರ್ಜಿ ಎಎನ್‍ಎಫ್, ಭಾಗಮಂಡಲ ಎಎನ್‍ಎಫ್ ಹಾಗೂ ಕಾರ್ಕಳ ಎಎನ್‍ಎಫ್ ಯೋಧರು ಒಟ್ಟು 4 ತಂಡಗಳಾಗಿ ವಿಭಜನೆಗೊಂಡು ಪೆರುಂಬಾಡಿಯಿಂದ ಕರಿಕೆಯವರೆಗೆ ಕೂಬಿಂಗ್ ಕಾರ್ಯಾಚರಣೆ ನಡೆಸಿರುವ ಮಾಹಿತಿ ಲಭಿಸಿದೆ. ಮಾತ್ರವಲ್ಲದೇ, ನಕ್ಸಲ್ ಗುಪ್ತ ದಳ, ಆಂತರಿಕ ಭದ್ರತಾ ವಿಭಾಗದ ಸಿಬ್ಬಂದಿಗಳು ಕೂಡ ಈ ಹಿಂದೆ ಜಿಲ್ಲೆಯಲ್ಲಿ ನಕ್ಸಲರು ಪ್ರತ್ಯಕ್ಷರಾದ ಗ್ರಾಮಗಳಿಗೆ ತೆರಳಿದ್ದು, ಅಲ್ಲಿಯೂ ಮಾಹಿತಿ ಕಲೆ ಹಾಕುವ ಕಾರ್ಯ ಮಾಡಿರುವ ಬಗ್ಗೆ ವಿಶ್ವಸನೀಯ ಮೂಲಗಳು ಮಾಹಿತಿ ನೀಡಿವೆ.

(ಸಂಗ್ರಹಚಿತ್ರ)

error: Content is protected !!