ಮಡಿಕೇರಿ ಉಪ ನೋಂದಣಾಧಿಕಾರಿಗಳ ಕಛೇರಿಗೆ ಎಸಿಬಿ ದಿಢೀರ್ ಭೇಟಿ : ಲಂಚ ಕೇಳಿದರೆ ದೂರು ನೀಡಲು ಮನವಿ

04/11/2020

ಮಡಿಕೇರಿ ನ.4 : ಕಾಲ ವಿಳಂಬವಿಲ್ಲದೆ ಸಾರ್ವಜನಿಕ ಕೆಲಸ ಕಾರ್ಯಗಳನ್ನು ನಿರ್ವಹಿಸಿಕೊಡಲು ಸರ್ಕಾರಿ ಅಧಿಕಾರಿಗಳು ಕ್ರಮ ಕೈಗೊಳ್ಳುವ ಮೂಲಕ ಅತ್ಯಂತ ಪಾರದರ್ಶಕ ಆಡಳಿತಕ್ಕೆ ಮುಂದಾಗಬೇಕೆಂದು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಸರ್ಕಾರಿ ಕಛೇರಿಗಳಿಗೆ ತೆರಳಿ ಅರಿವು ಮೂಡಿಸುತ್ತಿದ್ದಾರೆ.
ಜಿಲ್ಲಾ ಕೇಂದ್ರ ಮಡಿಕೇರಿಯ ಉಪ ನೋಂದಣಾಧಿಕಾರಿಗಳ ಕಛೇರಿಗೆ ಬುಧವಾರ ಬೆಳಗ್ಗೆ ದಿಢೀರನೆ ಭೇಟಿ ನೀಡಿದ ಎಸಿಬಿ ಅಧಿಕಾರಿಗಳು, ಅಲ್ಲಿ ಕೆಲಸ ಕಾರ್ಯಗಳಿಗಾಗಿ ಆಗಮಿಸಿದ್ದ ಸಾರ್ವಜನಿಕರಿಗೆ ಮಾಹಿತಿ ಕರ ಪತ್ರವನ್ನು ನೀಡಿ, ಕಛೇರಿಯಲ್ಲಿ ಲಂಚ ಕೇಳುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.
ಇದೇ ಸಂದರ್ಭ ಉಪ ನೋಂದಣಾಧಿಕಾರಿ ಸೇರಿದಂತೆ ಕಛೇರಿ ಸಿಬ್ಬಂದಿಗಳು ಹಾಗೂ ಸಾರ್ವಜನಿಕರೊಂದಿಗೆ ಮಾತನಾಡಿದ ಎಸಿಬಿ ತಂಡದ ಅಧಿಕಾರಿಗಳು, ತಾಂತ್ರಿಕ ಸಮಸ್ಯೆ ಹೊರತು ಪಡಿಸಿದಲ್ಲಿ ಉಳಿದಂತೆ ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆ ಉಂಟಾಗಕೂಡದು. ಸಿಬ್ಬಂದಿಗಳು ಕಛೇರಿಗೆ ಆಗಮಿಸುವ ಸಂದರ್ಭ ಅವರ ಬಳಿ ಸ್ವಂತದ ಹಣ ಎಷ್ಟಿದೆ ಎನ್ನುವ ಬಗ್ಗೆ ಮತ್ತು ಹೊರ ತೆರಳುವಾಗ ಎಷ್ಟಿತ್ತು ಎನ್ನುವ ಕುರಿತು ದಾಖಲೆಯನ್ನು ನಿಯಮಿತವಾಗಿ ನಿರ್ವಹಿಸಬೇಕೆಂದು ಸ್ಪಷ್ಟ ನಿರ್ದೇಶನ ನೀಡಿದರು.
::: ನಮ್ಮ ಪಂಚಾಯ್ತಿಗೆ ಬನ್ನಿ :::
ಎಸಿಬಿ ಅಧಿಕಾರಿಗಳು ಭ್ರಷ್ಟಾಚಾರ ನಿಗ್ರಹದ ಬಗ್ಗೆ ಮಾಹಿತಿ ನೀಡುವ ಸಂದರ್ಭ ತಮ್ಮ ಕೆಲಸ ಕಾರ್ಯಗಳಿಗೆ ಆಗಮಿಸಿದ್ದ ಸೋಮವಾರಪೇಟೆ ತಾಪಂ ಸದಸ್ಯರು ಹಾಗೂ ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಅವರು, ಉಪ ನೋಂದಾವಣೆ ಕಛೇರಿಯಲ್ಲಿ ಭ್ರಷ್ಟಾಚಾರದ ವಿಚಾರಗಳಿಲ್ಲ. ನೀವು ಮೊದಲು ಚೆಟ್ಟಳ್ಳಿ ಗ್ರಾ.ಪಂಗೆ ಒಮ್ಮೆ ಭೇಟಿ ನೀಡಬೇಕೆಂದು ಮನವಿ ಮಾಡಿದರು.
ಸಾರ್ವಜನಿಕರೊಬ್ಬರು ಮಾತನಾಡಿ, ತಾಲ್ಲೂಕು ಕಛೇರಿಯಲ್ಲಿ ಕಾರ್ಯ ವಿಳಂಬವಾಗುತ್ತಿದ್ದು, ಅಲ್ಲಿಗೆ ಭೇಟಿ ನೀಡಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು. ಈ ಸಂದರ್ಭ ಎಸಿಬಿ ಅಧಿಕಾರಿಗಳು, ಸರ್ಕಾರಿ ಕೆಲಸಕ್ಕಾಗಿ ಲಂಚದ ಬೇಡಿಕೆ ಇಡುವ ಪ್ರಕರಣಗಳು ಇದ್ದಲ್ಲಿ ಯಾವುದೇ ಹಿಂಜರಿಕೆ ಇಲ್ಲದೆ ಎಸಿಬಿಗೆ ದೂರು ನೀಡುವಂತೆ ಮನವಿ ಮಾಡಿದರಲ್ಲದೆ, ಕೆಲಸ ಬೇಗನೆ ಆಗಬೇಕೆಂದು ಗ್ರಾಹಕರೇ ಲಂಚ ನೀಡುವುದು ಕೂಡ ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದರು.
ಕೇವಲ ವೈಯಕ್ತಿಕ ಹಿತಾಸಕ್ತಿಗಳ ಹಿನ್ನೆಲೆ ಅಧಿಕಾರಿ ಸಿಬ್ಬಂದಿಗಳ ವಿರುದ್ಧ ಸುಳ್ಳು ಪುಕಾರು ನೀಡುವ ಪ್ರಯತ್ನಗಳು ನಡೆಯಬಾರದೆಂದು ತಿಳಿಸಿದರು.
::: ಇಲ್ಲಿಗೆ ದೂರು ನೀಡಿ :::
ಯಾವುದೇ ಸರ್ಕಾರಿ ಇಲಾಖೆಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ವಿಳಂಬವಾದಲ್ಲಿ, ನಿರ್ಲಕ್ಷ್ಯತೆ ತೋರಿದಲ್ಲಿ ಲಂಚ ಕೇಳಿದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಕೊಡಗು ಜಿಲ್ಲೆ ಇಲ್ಲಿ ದೂರು ನೀಡಬಹುದಾಗಿದೆ. ಮಡಿಕೇರಿಯ ಕಾನ್ವೆಂಟ್ ಜಂಕ್ಷನ್‍ನ ಶಾಂತಿ ನಿಲಯದಲ್ಲಿ ಎಸಿಬಿ ಕಛೇರಿ ಇದ್ದು ದೂ. 08272-222100, ಡಿವೈಎಸ್‍ಪಿ ಮೊ.9480806225, ಪೊಲೀಸ್ ಇನ್ಸ್‍ಪೆಕ್ಟರ್1- 9480806281, ಪೊಲೀಸ್ ಇನ್ಸ್‍ಪೆಕ್ಟರ್2- ಮೊ.9480806282 ವನ್ನು ಸಂಪರ್ಕಿಸಬಹುದಾಗಿದೆ.