ಫೀ.ಮಾ.ಕಾರ್ಯಪ್ಪ ಕಾಲೇಜ್ ಗೆ ಕುಲಪತಿ ಭೇಟಿ : ಸರ್ಕಾರದ ನಿರ್ದೇಶನದಂತೆ ಕಾಲೇಜು ಪುನರಾರಂಭದ ಮುನ್ಸೂಚನೆ ನೀಡಿದ ಡಾ.ಪಿ.ಸುಬ್ರಮಣ್ಯ

04/11/2020

ಮಡಿಕೇರಿ ನ. 4 : ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಸುಬ್ರಮಣ್ಯ ಯಡಪಡಿತ್ತಾಯ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿಗೆ ಭೇಟಿ ನೀಡಿ ಕಾಲೇಜು ಪ್ರಾಂಶುಪಾಲರು ಹಾಗೂ ಉಪನ್ಯಾಸಕರೊಂದಿಗೆ ಸಮಾಲೋಚನೆ ನಡೆಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ.17 ರಿಂದ ಕಾಲೇಜು ಪುನರಾರಂಭಿಸಲು ಸೂಚನೆ ಸಿಕ್ಕಿದೆಯಾದರೂ ಕೋವಿಡ್-19 ಪರಿಸ್ಥಿತಿಯನ್ನು ನೋಡಿಕೊಂಡು ಸರ್ಕಾರದ ನಿರ್ದೇಶನದ ಮೇರೆಗೆ ಕಾಲೇಜು ಪುನರಾರಂಭದ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.
ಮಡಿಕೇರಿಯ ಎಫ್‍ಎಂಸಿ ಕಾಲೇಜಿನಲ್ಲಿ ವಿಶ್ವವಿದ್ಯಾಲಯದಿಂದ ಮೌಲ್ಯಮಾಪನ ಕೇಂದ್ರವನ್ನು ಆರಂಭಿಸಲಾಗಿದೆ. ಮೌಲ್ಯಮಾಪನದ ಕಾರ್ಯವೈಖರಿಗಳನ್ನು ಖುದ್ದಾಗಿ ಪರಿಶೀಲಿಸುವ ನಿಟ್ಟಿನಲ್ಲಿ ನೈತಿಕ ಬೆಂಬಲ ನೀಡುವ ಸಲುವಾಗಿ ಇಲ್ಲಿಗೆ ಭೇಟಿ ನೀಡಿದ್ದೇನೆ ಎಂದರು.
ಬಿಎ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರದ ಮೌಲ್ಯಮಾಪನವನ್ನು ಸದ್ಯಕ್ಕೆ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬೇರೆ ವಿಷಯಗಳ ಮೌಲ್ಯಮಾಪನ ಕೇಂದ್ರ ಆರಂಭಿಸಲಾಗುವುದು. ಡಿಜಿಟಲ್ ಮೌಲ್ಯಮಾಪನ ಮಾಡಬೇಕೆಂಬ ಕನಸಿತ್ತು. ಆದರೆ ಕೋವಿಡ್ ಕಾರಣದಿಂದ ಅದು ನನಸಾಗಲಿಲ್ಲ ಎಂದರು.
ಕಾಲೇಜಿನಲ್ಲಿ ಸಿಎಸ್‍ಆರ್ ಫಂಡ್‍ನಿಂದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತದೆ ಎಂದರಲ್ಲದೆ ಅತಿಥಿ ಉಪನ್ಯಾಸಕರ ವೇತನ ಸಮಸ್ಯೆಯ ಬಗ್ಗೆ ಮಾತನಾಡಿದರು. ಅತಿಥಿ ಉಪನ್ಯಾಸಕರಿಗೆ ಮಧ್ಯಮಾವಧಿ ರಜೆಯ ವೇತನ ನೀಡಲು ನಿರ್ಧರಿಸಿದ್ದೇವೆ. ಕಳೆದ ಬಾರಿ ಇದ್ದ ಉಪನ್ಯಾಸಕರನ್ನೇ ಮುಂದುವರೆಸಿಕೊಂಡು ಹೋಗಲಾಗುವುದು ಎಂದು ಮಾಹಿತಿ ನೀಡಿದರು. ಕಾಲೇಜು ಮಟ್ಟದಲ್ಲಿ ಆಯಾ ಕ್ಷೇತ್ರದ ಶಾಸಕರು, ಸಚಿವರನ್ನು ಒಳಗೊಂಡಂತೆ ಅಭಿವೃದ್ಧಿ ಸಮಿತಿಗಳನ್ನು ರಚಿಸಲಾಗುವುದು. ವಿಶ್ವವಿದ್ಯಾಲಯ ವಿದ್ಯಾರ್ಥಿ ಸ್ನೇಹಿ, ಸಾರ್ವಜನಿಕ ಸ್ನೇಹಿ ಆಡಳಿತವನ್ನು ನೀಡಲಿದೆ ಎಂದು ಭರವಸೆ ನೀಡಿದರು.
ಕಾಲೇಜು ಪ್ರಾಂಶುಪಾಲ ಡಾ.ಸಿ.ಜಗತ್ ತಿಮ್ಮಯ್ಯ ಮಾತನಾಡಿ, ಕುಲಪತಿಗಳು ನಮ್ಮ ಕಾಲೇಜಿಗೆ ಎಲ್ಲಾ ರೀತಿಯ ಬೆಂಬಲ, ಪ್ರೋತ್ಸಾಹ ನೀಡುತ್ತಿದ್ದು, ಕಾಲೇಜು ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ ಎಂದರು.
ಈ ಸಂದರ್ಭ ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಲ್.ಧರ್ಮ, ಉಪನ್ಯಾಸಕರು ಇದ್ದರು.