ಕಿರುಗೂರು ಗ್ರಾಮಸಭೆಗೆ ಅಧಿಕಾರಿಗಳು ಗೈರು : ಸಭೆ ಬಹಿಷ್ಕರಿಸಿದ ಗ್ರಾಮಸ್ಥರು

05/11/2020

ಮಡಿಕೇರಿ ನ.5 : ಗ್ರಾಮಸಭೆಗೆ ವಿವಿಧ ಇಲಾಖಾಧಿಕಾರಿಗಳು ಗೈರು ಹಾಜರಾಗುವ ಮೂಲಕ ಕರ್ತವ್ಯಲೋಪವೆಸಗಿದ್ದಾರೆ ಎಂದು ಆರೋಪಿಸಿ ಕಿರುಗೂರು ಗ್ರಾಮಸ್ಥರು ಗ್ರಾಮಸಭೆಯನ್ನು ಬಹಿಷ್ಕರಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಿರುಗೂರು ಪಂಚಾಯಿತಿಯಲ್ಲಿ ಆಯೋಜಿಸಲ್ಪಟ್ಟಿದ್ದ ಸಭೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಾಗಿ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಬೇಕಾಗಿತ್ತು. ಆದರೆ ಅನೇಕರು ಗೈರಾಗಿ ಗ್ರಾಮಸ್ಥರ ಸಹನೆಯನ್ನು ಪರೀಕ್ಷಿಸಿದರು.
ವಿದ್ಯುತ್ ಸರಬರಾಜು ಇಲಾಖೆ, ತೋಟಗಾರಿಕಾ ಇಲಾಖೆ, ಹೈನುಗಾರಿಕೆ ಇಲಾಖೆ, ಪಶುಪಾಲನೆ ಮತ್ತು ಪೆÇಲೀಸ್ ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿದ್ದರು. ಮಹತ್ವದ ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶ ಸಿಗದೆ ಅಸಮಾಧಾನಗೊಂಡ ಗ್ರಾಮಸ್ಥರು ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.
ಪಂಚಾಯಿತಿ ಕರೆಗೆ ಸ್ಪಂದಿಸದ ಅಧಿಕಾರಿಗಳು ಸಾರ್ವಜನಿಕರ ಕುಂದುಕೊರತೆಗಳನ್ನು ಬಗೆ ಹರಿಸಲು ಹೇಗೆ ಸಾಧ್ಯ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಮುಂದಿನ ಸಭೆಗೆ ಸಂಬಂಧಿಸಿದ ಅಧಿಕಾರಿಗಳು ಹಾಜರಾಗದಿದ್ದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಂತರ ಅನಿವಾರ್ಯವಾಗಿ ಗ್ರಾಮಸಭೆಯನ್ನು ಮುಂದೂಡಲಾಯಿತು.