ದಿಕ್ಕಾರ ಕೂಗಿದ ಜೆಡಿಎಸ್ ಕಾರ್ಯಕರ್ತನಿಗೆ ಸನ್ಮಾನ, ಅಧ್ಯಕ್ಷ ಸ್ಥಾನದ ಬಹುಮಾನ

05/11/2020

ಮಡಿಕೇರಿ ನ.5 : ಜಾತ್ಯತೀತ ಜನತಾದಳದ ವಿಪ್ ಉಲ್ಲಂಘಿಸಿ ಬಿಜೆಪಿಗೆ ಬೆಂಬಲವಾಗಿ ಕುಶಾಲನಗರ ಪ.ಪಂ ಉಪಾಧ್ಯಕ್ಷರಾಗಿ ಆಯ್ಕೆಯಾದ ಸುರಯ್ಯಬಾನು ಅವರ ನಿವಾಸದ ಎದುರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿ ದಿಕ್ಕಾರ ಕೂಗಿದ ಜೆಡಿಎಸ್ ಕಾರ್ಯಕರ್ತ ಝಬಿಯುಲ್ಲಾ ಅವರನ್ನು ಪಕ್ಷದ ಅಲ್ಪಸಂಖ್ಯಾತರ ಘಟಕ ಸನ್ಮಾನಿಸಿತು. ಅಲ್ಲದೆ ಜಿಲ್ಲಾ ಯುವ ಘಟಕ ಕುಶಾಲನಗರ ನಗರ ಯುವ ಅಧ್ಯಕ್ಷ ಸ್ಥಾನವನ್ನು ಕೂಡ ನೀಡಿತು.
ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್‍ಖಾನ್ ಅವರು ಝಬಿಯುಲ್ಲಾ ಅವರನ್ನು ಸನ್ಮಾನಿಸಿ ಮಾತನಾಡಿ ಪ.ಪಂ ಸದಸ್ಯೆ ಸುರಯ್ಯಬಾನು ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಕಾರಣಕ್ಕೆ ಅಸಮಾಧಾನಗೊಂಡ ಕಾರ್ಯಕರ್ತ ಝಬಿಯುಲ್ಲಾ ಅವರು ಪ್ರತಿಭಟನೆ ನಡೆಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ನಡೆಸಲು ಎಲ್ಲರಿಗೂ ಅಧಿಕಾರಿವಿದೆ. ಆದರೆ ಪೊಲೀಸರು ಝಬಿಯುಲ್ಲಾ ಅವರನ್ನು ವಶಕ್ಕೆ ಪಡೆದಿರುವುದು ಮಾತ್ರ ಖಂಡನೀಯವೆಂದರು.
ಕಾರ್ಯಕರ್ತರನ್ನು ನಾಯಕರನ್ನಾಗಿ ಬೆಳೆಸುವ ಪಕ್ಷ ಜೆಡಿಎಸ್ ಆಗಿದ್ದು, ಇದೇ ಕಾರಣಕ್ಕೆ ಝಬಿಯುಲ್ಲಾ ಅವರ ಪಕ್ಷ ನಿಷ್ಠೆಯನ್ನು ಗಮನಿಸಿ ಕುಶಾಲನಗರ ನಗರ ಯುವ ಘಟಕದ ಅಧ್ಯಕ್ಷ ಸ್ಥಾನವನ್ನು ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಸಿ.ಎಲ್.ವಿಶ್ವ ಅವರು ನೀಡಿದ್ದಾರೆ ಎಂದರು.
ಝಬಿಯುಲ್ಲಾ ಮಾತನಾಡಿ, ಪಂಚಾಯಿತಿ ಸದಸ್ಯರ ಸ್ಥಾನಕ್ಕೆ ನಡೆದ ಚುನಾವಣೆಯ ಸಂದರ್ಭ ಕಾರ್ಯಕರ್ತರೆಲ್ಲರು ಸೇರಿ ಸುರಯ್ಯಬಾನು ಅವರ ಗೆಲುವಿಗಾಗಿ ಅವಿರತ ಶ್ರಮ ವಹಿಸಿದ್ದೇವೆ. ಆದರೆ ಅಧಿಕಾರ ಮತ್ತು ಹಣದ ಆಸೆಯಿಂದ ಇದೀಗ ಸುರಯ್ಯ ಅವರು ಬಿಜೆಪಿ ಪಕ್ಷದೊಂದಿಗೆ ಕೈಜೋಡಿಸಿದ್ದಾರೆ. ಅಲ್ಪಸಂಖ್ಯಾತರ ಮತಗಳು ಬಿಜೆಪಿಗೆ ಬೆಂಬಲವಾಗಿ ರೂಪಾಂತರಗೊಂಡಿರುವುದರಿಂದ ಮತದಾರರು ತೀವ್ರ ಬೇಸರಗೊಂಡಿದ್ದಾರೆ ಎಂದರು.
ಪ.ಪಂ ಸದಸ್ಯ ಶೇಕ್ ಕಲಿಮುಲ್ಲಾ, ಡಾ.ಅಂಬೇಡ್ಕರ್ ಜನಪದ ವೇದಿಕೆಯ ಜಿಲ್ಲಾಧ್ಯಕ್ಷ ಜಯಪ್ರಕಾಶ್ ಹಾಗೂ ಜೆಡಿಎಸ್ ಕಾರ್ಯಕರ್ತರು ಈ ಸಂದರ್ಭ ಹಾಜರಿದ್ದರು.