ಆಸ್ತಿ ವಿವಾದ : ಮಾವನಿಂದ ಸೊಸೆಗೆ ಗುಂಡೇಟು : ಸೋಮವಾರಪೇಟೆಯ ಬೆಟ್ಟದಕೊಪ್ಪ ಗ್ರಾಮದಲ್ಲಿ ಘಟನೆ

05/11/2020

ಸೋಮವಾರಪೇಟೆ ನ. 5 : ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಾವನೇ ಸೊಸೆಗೆ ಗುಂಡಿಕ್ಕಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ಬೆಟ್ಟದಕೊಪ್ಪ ಗ್ರಾಮದಲ್ಲಿ ನಡೆದಿದೆ.

ಸೊಸೆ ತೀರ್ಥ(36) ಗಾಯಗೊಂಡವರು. ಮಾವ ಅಯ್ಯಪ್ಪ ಆರೋಪಿ. ಬೆಳಿಗ್ಗೆ ಹಸುವನ್ನು ಬಾಣೆ ಜಾಗದಲ್ಲಿ ಕಟ್ಟುವ ವಿಚಾರಕ್ಕೆ ರಸ್ತೆಯಲ್ಲೇ ಮಾವ ಸೊಸೆ ನಡುವೆ ಮಾತಿನ ಚಕಮಕಿ ನಡೆದಿದೆ. ಕೋಪಗೊಂಡ ಅಯ್ಯಪ್ಪ ಒಂಟಿನಳಿಕೆ ಕೋವಿಯಿಂದ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಎಡ ಎದೆಯ ಭಾಗ ಹಾಗೂ ತೋಳಿಗೆ ಗಾಯಗೊಂಡಿರುವ ತೀರ್ಥ ಅವರನ್ನು ಸೋಮವಾರಪೇಟೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೊಯ್ಯಲಾಗಿದೆ.
ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನನ್ನ ಪತ್ನಿಗೆ ನನ್ನ ಅಪ್ಪ ಅಯ್ಯಪ್ಪ, ತಾಯಿ ಸೀತಮ್ಮ, ಸಹೋದರಿಯರಾದ ಗುಣ ಮತ್ತು ಪ್ರತೀಮ ಪ್ರತಿ ದಿನ ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು. ನನ್ನ ಅಪ್ಪನೇ ಹೆಂಡತಿಗೆ ಗುಂಡು ಹೊಡೆದಿದ್ದಾರೆ ಎಂದು ತೀರ್ಥ ಅವರ ಪತಿ ಹೂವಯ್ಯ ನೀಡಿದ ದೂರಿನನ್ವಯ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದಾನೆ.