ಮತಾಂತರದ ವಿರುದ್ಧ ಕಠಿಣ ಕ್ರಮ

06/11/2020

ಮಂಗಳೂರು ನ.6 : ರಾಜ್ಯದಲ್ಲಿ ವಿವಾಹದ ಕಾರಣಕ್ಕಾಗಿ ಧಾರ್ಮಿಕ ಮತಾಂತರ ನಿಷೇಧಿಸಲು ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಗುರುವಾರ ಮಂಗಳೂರಿನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅರವಿಂದ್ ಲಿಂಬಾವಳಿ ಅವರು, ‘ಲವ್ ಜಿಹಾದ್’ ಅನ್ನು ಕೊನೆಗೊಳಿಸಲು ಕಠಿಣ ಕಾನೂನು ಜಾರಿಗೆ ತರುವ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಸರ್ವಾನುಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಧಾರ್ಮಿಕ ಮತಾಂತರಗಳನ್ನು ಕೊನೆಗೊಳಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದರು.
ಇದೇ ವೇಳೆ ಎರಡೂವರೆ ವರ್ಷದ ಬಳಿಕ ಬಿಜೆಪಿ 140 ರಿಂದ 150 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಆ ಮೂಲಕ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಏರಲಿದೆ ಎಂದು ಯಡಿಯೂರಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಟಿವಿ ರಮಣ ಪೈ ಕನ್ವೆಷನಲ್ ಸೆಂಟರ್ ನಲ್ಲಿ ನಡೆದ ಬಿಜೆಪಿ ವಿಶೇಷ ಕಾರ್ಯಕಾರಿಣಿಯನ್ನು ಉದ್ಘಾಟಿಸಿ ಯಡಿಯೂರಪ್ಪ ಮಾತನಾಡಿದರು.