ಹಾಸನಾಂಬೆ ಜಾತ್ರೆ ಆರಂಭ

06/11/2020

ಹಾಸನ ನ.6 : ಹಾಸನಾಂಬೆ ಜಾತ್ರೆಯ ಆರಂಭದ ದಿನ ದೇವಸ್ಥಾನದ ಬಾಗಿಲು ತೆರೆಯುವ ಸಂದರ್ಭದಲ್ಲೇ ಹಾಜರಿದ್ದು, ದರ್ಶನ ಪಡೆದಿದ್ದು ಸಂತಸ ನೀಡಿದೆ ಎಂದು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಅವರು ಹೇಳಿದ್ದಾರೆ.
ಹಾಸನಾಂಬ ದೇವಸ್ಥಾನ ಮತ್ತು ಸಿದ್ದೇಶ್ವರ ದೇವಸ್ಥಾನದ ಭೇಟಿಯ ನಂತರ ದೇವಾಲಯದ ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು ಪ್ರತಿವರ್ಷದಂತೆ ಈ ವರ್ಷವೂ ಸಂಪ್ರದಾಯಗಳಿಗೆ ಲೋಪ ಉಂಟಾಗದಂತೆ ದರ್ಶನೋತ್ಸವಕ್ಕೆ ಚಾಲನೆ ನೀಡಲಾಗಿದೆ ಎಂದರು.
ಕೊರೋನಾ ಸೋಂಕು ವ್ಯಾಪಕವಾಗಿ ಸಮುದಾಯದಲ್ಲಿ ಹರಡುತ್ತಿರುವ ಕಾರಣಾರ್ಥವಾಗಿ ಮುನ್ನೇಚ್ಚರಿಕೆಯಿಂದ ಜಿಲ್ಲೆಯ ಮತ್ತು ಹೊರ ಜಿಲ್ಲೆಯಿಂದ ಬರುವ ಭಕ್ತಾಧಿಗಳಿಗೆ ಈ ಬಾರಿ ಹಾಸನಾಂಬ ದೇವಾಲಯದ ದರ್ಶನಕ್ಕೆ ಅವಕಾಶವನ್ನು ನಿರ್ಬಂಧಿಸಲಾಗಿದೆ, ದೇವಾಲಯದ ಬಳಿ ಬಂದಿರುವ ಸಾರ್ವಜನಿಕರು ಹೊರಗಿನಿಂದಲೇ ದೇವಿಗೆ ನಮಸ್ಕರಿಸಿ ಆಶಿರ್ವಾದ ಪಡೆಯುವ ಮೂಲಕ ಸಹಕರಿಸಬೇಕೆಂದು ಸಚಿವರಾದ ಕೆ. ಗೋಪಾಲಯ್ಯ ಅವರು ಮನವಿ ಮಾಡಿದರು.
ಇಂದು 12:30ಕ್ಕೆ ಜಿಲ್ಲಾಡಳಿತದಿಂದ ಸಕಲ ಗೌರವ ಹಾಗೂ ಪದ್ದತಿಯಂತೆ ದೇವಾಲಯದ ಬಾಗಿಲು ತೆರೆಯಲಾಗಿದೆ. ಬಾಗಿಲು ತೆರೆದ ಸಂದರ್ಭದಲ್ಲಿ ಗರ್ಭಗುಡಿಯ ಎರಡು ದೀಪಗಳು ಉರಿಯುತ್ತಿತ್ತು. ತಾಯಿಯ ಆಶಿರ್ವಾದದಿಂದ ಕೊರೋನಾ ಸೋಂಕು ಬೇಗ ನಿವಾರಣೆಯಾಗಲಿ ಎಂದು ಪ್ರಾರ್ಥಿಸಿರುವುದಾಗಿ ಸಚಿವರು ಹೇಳಿದರಲ್ಲದೆ, ನ.16 ರಂದು ಮಧ್ಯಾಹ್ನ 12 ಗಂಟೆಗೆ ವಿಧಿ ವಿಧಾನಗಳ ಮೂಲಕ ದೇವಸ್ಥಾನದ ಬಾಗಿಲು ಮುಚ್ಚಲಾಗುವುದು ಎಂದರು.