ಶಾಂತಳ್ಳಿಯಲ್ಲಿ ಪೌತಿ ಖಾತೆ ಆಂದೋಲನ

06/11/2020

ಸೋಮವಾರಪೇಟೆ: ಕಂದಾಯ ಇಲಾಖೆ ವತಿಯಿಂದ ಶಾಂತಳ್ಳಿ ಗ್ರಾಮದ ಶ್ರೀ ಕುಮಾರಲಿಂಗೇಶ್ವರ ಸಮುದಾಯ ಭವನದಲ್ಲಿ ಪಂಚಾಯಿತಿ ವ್ಯಾಪ್ತಿಯ ಪೌತಿ ಖಾತೆ ಆಂದೋಲನ ಕಾರ್ಯಕ್ರಮ ಶುಕ್ರವಾರ ನಡೆಯಿತು.
ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಚಾಲನೆ ನೀಡಿದರು. ನಂತರ ಮಾತನಾಡಿ, ಕೃಷಿ ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ಮಾಲಿಕತ್ವ ಉತ್ತರಾಧಿಕಾರಿಗಳಿಗೆ ವರ್ಗಾವಣೆಯಾಗದಿದ್ದಲ್ಲಿ ಸರ್ಕಾರದ ಯೋಜನೆಗಳನ್ನು ಪಡೆಯಲು ಕಷ್ಟವಾಗಿರುವುದರಿಂದ, ಸರ್ಕಾರ ಈ ಸಮಸ್ಯೆ ಪರಿಹರಿಸಲು ಪೌತಿ ಖಾತೆ ಆಂದೋಲನ ಕಾರ್ಯಕ್ರಮ ನಡೆಸುತ್ತಿದೆ. ಇದರ ಪ್ರಯೋಜನವನ್ನು ಎಲ್ಲರೂ ಬಳಸಿಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭ ಉಪ ತಹಶೀಲ್ದಾರ್ ಕೆ.ಎಸ್. ಧನರಾಜ್, ಕಂದಾಯ ಪರಿವೀಕ್ಷಕರಾದ ಸಿ.ಪಿ. ಗಣೇಶ್, ಗ್ರಾಮ ಲೆಕ್ಕಾಧಿಕಾರಿಗಳಾದ ಎಂ.ಬಿ. ಉಮೇಶ್, ಕರಿಬಸವರಾಜ ಸೇರಿದಂತೆ ಗ್ರಾಮ ಸಹಾಯಕರು ಇದ್ದರು.