ಕೊಡಗಿನಲ್ಲಿ ನಕ್ಸಲ್ ನಿಗ್ರಹ ಪಡೆ ಶಿಬಿರ

06/11/2020

ಮಡಿಕೇರಿ ನ.6 : ಕರ್ನಾಟಕದಲ್ಲಿ ನಕ್ಸಲ್ ಚಟುವಟಿಕೆ ನಿಯಂತ್ರಣದಲ್ಲಿದ್ದರೂ, ನೆರೆಯ ಕೇರಳ ಹಾಗೂ ತಮಿಳುನಾಡಿನ ಗಡಿಗಳಲ್ಲಿ ನಕ್ಸಲರ ಚಟುವಟಿಕೆ ಹೆಚ್ಚಿರುವುದರಿಂದ ಅದರ ಪರಿಣಾಮ ಕರ್ನಾಟಕದ ಮೇಲೂ ಬೀರಲಿದೆ. ಈ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಯಾದ ಕೊಡಗಿನಲ್ಲಿ ನಕ್ಸಲ್ ನಿಗ್ರಹ ಪಡೆಯ ಇನ್ನೊಂದು ಶಿಬಿರವನ್ನು ಸ್ಥಾಪಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಕ್ಸಲರ ಚಟುವಟಿಕೆ ನಿಯಂತ್ರಣದಲ್ಲಿದೆ. ಆದರೆ ನೆರೆಯ ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ನಕ್ಸಲರ ಚಟುವಟಿಕೆ ಇನ್ನೂ ಅಧಿಕವಿದ್ದು, ಇದರ ಪರಿಣಾಮ ರಾಜ್ಯದ ಮೇಲೂ ಬೀರಲಿದೆ. ಗಡಿ ಭಾಗದಲ್ಲಿರುವ ನಕ್ಸಲರು ಕರ್ನಾಟಕಕ್ಕೂ ಬಂದು ಹೋಗುವ ಸಾಧ್ಯತೆಗಳಿರುವುದರಿಂದ ಗೃಹ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.
ನಕ್ಸಲ್ ನಿಗ್ರಹ ಪಡೆ ಮಾತ್ರವಲ್ಲದೆ ಎಲ್ಲಾ ಪೊಲೀಸ್ ಠಾಣೆಗಳೂ ಈ ಬಗ್ಗೆ ಜಾಗೃತರಾಗಿರುವಂತೆ ಸೂಚಿಸಲಾಗಿದ್ದು, ಕೇರಳದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಇರುವ ಎರಡು ನಕ್ಸಲ್ ನಿಗ್ರಹ ಶಿಬಿರಗಳ ಜೊತೆಗೆ ಹೆಚ್ಚುವರಿಯಾಗಿ ಇನ್ನೊಂದು ಶಿಬಿರವನ್ನು ಸ್ಥಾಪಿಸಲಾಗುವುದು ಎಂದು ಅವರು ವಿವರಿಸಿದರು.
ಕೇರಳದ ವಯನಾಡ್ ಜಿಲ್ಲೆಯಲ್ಲಿ ನಕ್ಸಲರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಹತನಾಗಿದ್ದು, ಈ ಹಿನ್ನೆಲೆಯಲ್ಲಿ ನಕ್ಸಲರು ಕೊಡಗು ಜಿಲ್ಲೆಗೆ ಪ್ರವೇಶಿಸುವ ಸಾಧ್ಯತೆಗಳಿರುವುದರಿಂದ ಕೂಂಬಿಂಗ್ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ ಎಂದು ಅವರು ನುಡಿದರು.
ಕೊಡಗಿಗೆ ಎಸ್‍ಡಿಆರ್‍ಎಫ್ ತಂಡ: ಇತ್ತೀಚಿನ ವರ್ಷಗಳಲ್ಲಿ ಮಲೆನಾಡು ಪ್ರದೇಶಗಳಲ್ಲಿ ಪ್ರವಾಹ ಹಾಗೂ ಭೂ ಕುಸಿತದಂತಹ ಪ್ರಾಕೃತಿಕ ವಿಕೋಪ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈಗಿರುವ ಎಸ್‍ಡಿಆರ್‍ಎಫ್ ತಂಡದ ಜೊತೆಗೆ ಕೊಡಗು- ಮೈಸೂರು ನಡುವೆ ಪ್ರತ್ಯೇಕ ಎಸ್‍ಡಿಆರ್‍ಎಫ್ ತಂಡವನ್ನು ರಚಿಸಲಾಗುವುದು ಎಂದು ತಿಳಿಸಿದ ಅವರು, ಈ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ಈಗಾಗಲೇ ಎಸ್‍ಡಿಆರ್‍ಎಫ್‍ನ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
ದಕ್ಷಿಣ ವಲಯ ಪೊಲೀಸ್ ಪೊಲೀಸ್ ಮಹಾ ನಿರೀಕ್ಷಕ ವಿಪುಲ್ ಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕಿ ಕ್ಷಮಾ ಮಿಶ್ರ ಹಾಜರಿದ್ದರು.