ಪರಿಸರ ತಜ್ಞ ಸತೀಶ್‌ಗೆ ರಾಷ್ಟ್ರಮಟ್ಟದ ವನ್ಯಜೀವಿ ಛಾಯಾಚಿತ್ರ ಪ್ರಶಸ್ತಿ

November 7, 2020

ಪೊನ್ನಂಪೇಟೆ, ನ.7: ಹೆಸರಾಂತ ಉರಗ ಮತ್ತು ಪರಿಸರ ತಜ್ಞ ಸತೀಶ್ ಗೆ ರಾಷ್ಟ್ರಮಟ್ಟದ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರತಿಷ್ಠಿತ ಪ್ರಥಮ ಸ್ಥಾನದ ಪ್ರಶಸ್ತಿ ಲಭಿಸಿದೆ.

ವನ್ಯಜೀವಿ ಸಪ್ತಾಹ-2020 ರ ಅಂಗವಾಗಿ ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆಯಲ್ಲಿ ಸತೀಶ್ ಅವರು ಸಾದರಪಡಿಸಿದ ಅತ್ಯುತ್ತಮ ವನ್ಯಜೀವಿ ಛಾಯಾಗ್ರಹಣಕ್ಕೆ ಈ ಪ್ರಶಸ್ತಿ ದೊರೆತಿದೆ. ಸತೀಶ್ ಅವರು ಇತ್ತೀಚಿಗೆ ಕಬಿನಿ ಅರಣ್ಯದಲ್ಲಿ ಸೆರೆಹಿಡಿಯಲಾದ ಎರಡು ಹುಲಿಗಳ ಅಪರೂಪದ ಭಂಗಿಯ ಚಿತ್ರಕ್ಕೆ ಈ ಪ್ರತಿಷ್ಠಿತ ಬಹುಮಾನ ದೊರೆತಿದೆ.

ಇದೇ ಸ್ಪರ್ಧೆಯಲ್ಲಿ ಬೆಂಗಳೂರಿನ ಅರವಿಂದ್ ಕಾರ್ತಿಕ್ ಬಿ. ಅವರು ನಾಗರಹೊಳೆಯಲ್ಲಿ ಸೆರೆಹಿಡಿದ ವನ್ಯಜೀವಿ ಛಾಯಚಿತ್ರಕ್ಕೆ ಮತ್ತು ಮಂಗಳೂರಿನ ಕಿಶನ್ ಕುಮಾರ್ ಬಿಜೈ ಅವರು ಕಬಿನಿಯಲ್ಲಿ ಸೆರೆಹಿಡಿದ ಛಾಯಾಚಿತ್ರಗಳಿಗೆ ಎರಡನೇ ಸ್ಥಾನ ಹಾಗೂ ಮಣಿಪಾಲದ ಹ್ಯಾರೀಸ್ ಮೊಹಮ್ಮದ್ ಅವರು ಆಗುಂಬೆಯಲ್ಲಿ ಸೆರೆಹಿಡಿದ ಮತ್ತು ಬೆಂಗಳೂರಿನ ಬಿ.ಆರ್.ಹರೀಶ್ ಗೌಡ ಅವರು ಕಬಿನಿಯಲ್ಲಿ ಹಿಡಿದ ವನ್ಯಜೀವಿ ಚಿತ್ರಗಳಿಗೆ ತೃತಿಯ ಬಹುಮಾನ ಪಡೆದಿದ್ದಾರೆ.

ದೇಶದ ವಿವಿಧೆಡೆಗಳಿಂದ ಒಟ್ಟು 248 ಸ್ಪರ್ಧಿಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಸತೀಶ್ ಅವರ ಛಾಯಾಚಿತ್ರಕ್ಕೆ ಪ್ರಥಮ ಸ್ಥಾನ ದೊರೆತಿರುವುದು ವಿಶೇಷವಾಗಿದೆ.

ಈ ಹಿಂದೆಯೂ ತಮ್ಮ ಅತ್ಯುತ್ತಮ ವನ್ಯಜೀವಿ ಛಾಯಾಗ್ರಹಣಗಳಿಗೆ ರಾಷ್ಟ್ರ ಪ್ರಶಸ್ತಿ ಪಡೆದಿರುವ ಸತೀಶ್ ಅವರು ಇದೀಗ ಸತತವಾಗಿ ನಾಲ್ಕನೇ ಬಾರಿಗೆ ಈ ಪ್ರತಿಷ್ಠಿತ ಗೌರವವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಈ ಹಿಂದೆ ಕೊಡಗಿನಲ್ಲಿ ಉರಗ ಮತ್ತು ಪರಿಸರ ಸಂರಕ್ಷಣೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸತೀಶ್ ಅವರಿಗೆ 2009ರಲ್ಲಿ ರಾಜ್ಯ ಸರಕಾರವು ಪ್ರತಿಷ್ಠಿತ ‘ಪರಿಸರ ಪ್ರಶಸ್ತಿ’ ನೀಡಿ ಗೌರವಿಸಿತು. ಮೂಲತಃ ಉಡುಪಿಯವರಾದ ಸತೀಶ್ ಅವರು ಮೈಸೂರಿನ ಇನ್ಫೋಸಿಸ್ ಕೇಂದ್ರದಲ್ಲಿ ಹಾಲಿ ಪ್ರಾದೇಶಿಕ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

error: Content is protected !!