ಕೊಡಗು ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲಾಗಿದೆ : ಜೆಡಿಎಸ್ ತಿರುಗೇಟು

November 7, 2020

ಮಡಿಕೇರಿ ನ.7 : ಕೊಡಗು ಜಿಲ್ಲಾ ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲಿನಂತಾಗಿದ್ದು, ಪಕ್ಷದ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಅವರು, ತಮ್ಮ ಮನೆಯ ಬಾಗಿಲನ್ನು ಮೊದಲು ಗಟ್ಟಿ ಮಾಡಿಕೊಂಡು ನಂತರ ಇತರ ಪಕ್ಷದವರ ಬಗ್ಗೆ ಮಾತನಾಡಲಿ ಎಂದು ಜಾತ್ಯತೀತ ಜನತಾ ದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ಯತೀತ ಜನತಾದಳವನ್ನು ಮತೀಯ ಪಕ್ಷವೆಂದು ಹೇಳಿಕೆ ನೀಡಲು ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಯಾವುದೇ ನೈತಿಕತೆ ಇಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಸಂದರ್ಭ ಎಲ್ಲೂ ಕಾಣಿಸಿಕೊಳ್ಳದೆ ಮರದ ಪೊಟರೆಯೊಳಗೆ ಇದ್ದಂತೆ ಇದ್ದು, ಎಲ್ಲಾ ಮುಗಿದ ಮೇಲೆ ಹೊರ ಬಂದು ಇಲ್ಲ ಸಲ್ಲದ ಹೇಳಿಕೆ ನೀಡುತ್ತಿರುವುದು ಖಂಡನೀಯವೆಂದರು.
ಜೆಡಿಎಸ್ ಎನ್ನುವುದು ಎಲ್ಲಾ ಜಾತಿ ಜನಾಂಗದವರು ಒಗ್ಗಟಿನಿಂದಿರುವ ಜಾತ್ಯತೀತವಾದದ ಪಕ್ಷವಾಗಿದೆ. ಕಾಂಗ್ರೆಸ್‍ನ ಮುಂದೆ ಮೈತ್ರಿಗಾಗಿ ಕೈ ಚಾಚುವ ಅಗತ್ಯ ಜೆಡಿಎಸ್‍ಗಿಲ್ಲ. ಮೀಸಲಾತಿಯಡಿ ಅಗತ್ಯ ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಹಿಡಿಯಲು ಅವಕಾಶವಿದ್ದರು ಆ ಪಕ್ಷದ ಜಿಲ್ಲಾಧ್ಯಕ್ಷರು ಒಂದೇ ಒಂದು ದಿನ ಜೆಡಿಎಸ್‍ನೊಂದಿಗೆ ಮಾತುಕತೆ ನಡೆಸಿಲ್ಲ. ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಆಸಕ್ತಿ ತೋರದ ಮಂಜುನಾಥ್ ಕುಮಾರ್ ಅವರು ತಮ್ಮ ವೈಫಲ್ಯವನ್ನು ಮರೆ ಮಾಚಲು ಜೆಡಿಎಸ್ ಮೇಲೆ ಗೂಬೆ ಕೂರಿಸುವ ಯತ್ನ ಮಾಡುತ್ತಿದ್ದಾರೆ ಗಣೇಶ್ ಆರೋಪಿಸಿದರು.
ಕಾಂಗ್ರೆಸ್‍ನ ವಿ.ಪಿ.ಶಶಿಧರ್ ಅವರು ಪ.ಪಂ ಅಧಿಕಾರ ಹಿಡಿಯಬೇಕೆನ್ನುವ ಉದ್ದೇಶದಿಂದ ನಿರಂತರವಾಗಿ ನಮ್ಮೊಂದಿಗೆ ಸಂಪರ್ಕದಲ್ಲಿದ್ದರು. ಆದರೆ, ಈ ಆಸಕ್ತಿ ಜಿಲ್ಲಾಧ್ಯಕ್ಷರಲ್ಲಿ ಕಂಡು ಬರಲಿಲ್ಲ. ಪಕ್ಷದ ಪರವಾಗಿ ಎಷ್ಟು ಪ್ರಾಮಾಣಿಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವುದನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಮೊದಲು ಸಾಬೀತು ಪಡಿಸಲಿ ಎಂದು ಸವಾಲು ಹಾಕಿದರು.
ಅಲ್ಪಸಂಖ್ಯಾತರನ್ನು ಓಲೈಸಿಕೊಳ್ಳುವುದಕ್ಕಾಗಿ ಜಾತ್ಯತೀತ ಜನತಾ ದಳವನ್ನು ಟೀಕಿಸುವ ಅಗತ್ಯವಿಲ್ಲ. ಜಿಲ್ಲೆಯ ಅಲ್ಪಸಂಖ್ಯಾತರಿಗೆ ಯಾವುದೇ ಸಮಸ್ಯೆ ಎದುರಾದಾಗಲು ಜೆಡಿಎಸ್ ಮುಂದೆ ನಿಂತು ಧೈರ್ಯ ತುಂಬಿದೆ. ಅಲ್ಲದೆ, ಸಮಸ್ಯೆಗಳಿಗೆ ಸ್ಪಂದಿಸಿದೆ. ಜೆಡಿಎಸ್‍ನ್ನು ಮತೀಯ ಪಕ್ಷವೆಂದು ಹೇಳಿಕೆ ನೀಡಿರುವ ಮಂಜುನಾಥ್ ಕುಮಾರ್ ಅವರು ತಮ್ಮ ಮಾತನ್ನು ವಾಪಾಸ್ ಪಡೆಯಬೇಕೆಂದು ಗಣೇಶ್ ಒತ್ತಾಯಿಸಿದರು.
ಪಕ್ಷದ ರಾಷ್ಟ್ರಾಧ್ಯಕ್ಷರಾದ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಕೊಡಗಿನಲ್ಲಿ ಪಕ್ಷವನ್ನು ಕಟ್ಟಿಬೆಳೆಸುತ್ತಿದ್ದು, ಇದನ್ನು ಸಹಿಸಲಾಗದ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಜೆಡಿಎಸ್‍ನ್ನು ಮುಗಿಸುವ ಭ್ರಮೆಯಲ್ಲಿದ್ದಾರೆ. ಆದರೆ ಅದು ಸಾಧ್ಯವಿಲ್ಲವೆಂದು ಅವರು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಕೊಡಗು ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆಯೆಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿರುವಂತೆ ಕೊಡಗಿನಲ್ಲು ಬಿಜೆಪಿ, ಕಾಂಗ್ರೆಸ್ ಮೈತ್ರಿ ಆಡಳಿತ ನಡೆಯುತ್ತಿದ್ದು, ಇದು ಬಹಿರಂಗ ಸತ್ಯವಾಗಿದೆ. ಹಿಂದುತ್ವವನ್ನು ಪ್ರತಿಪಾದಿಸುವ ಬಿಜೆಪಿ ಅಧಿಕಾರಕ್ಕಾಗಿ ಯಾವುದೇ ಮಾರ್ಗವನ್ನು ಹಿಡಿಯಲು ಸಿದ್ಧವೆಂದು ಕುಶಾಲನಗರ ಪ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂದರ್ಭ ಸಾಬೀತು ಪಡಿಸಿದೆ ಎಂದು ಆರೋಪಿಸಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮನೋಜ್ ಬೋಪಯ್ಯ ಮಾತನಾಡಿ, ಕೈಯಲ್ಲಿ ಆಗದವರು ಮೈಪರಚಿಕೊಂಡ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಇದ್ದಾರೆ ಎಂದು ಟೀಕಿಸಿದರು. ಜಾತ್ಯತೀತ ನಿಲುವಿನಡಿ ಜೆಡಿಎಸ್‍ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಕಾಂಗ್ರೆಸ್‍ಗೆ ಅವಕಾಶವಿತ್ತು. ಆದರೆ, ಆ ಪಕ್ಷದ ಜಿಲ್ಲಾಧ್ಯಕ್ಷರು ಬಿಜೆಪಿಗೆ ಬೆಂಬಲವಾಗಿ ಹೇಳಿಕೆಯನ್ನು ನೀಡುತ್ತಿದ್ದು, ಮೊದಲು ಬಾಲಿಶ ಹೇಳಿಕೆ ನಿಲ್ಲಿಸಲಿ ಎಂದು ಒತ್ತಾಯಿಸಿದರು.
ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್ ಮಾತನಾಡಿ, ಕುಶಾಲನಗರ ಪ.ಪÀಂ ಅಧಿಕಾರ ತಪ್ಪಲು ಕಾಂಗ್ರೆಸ್ ಜಿಲ್ಲಾಧ್ಯಕ್ಷರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿದರು. ಈಗಾಗÀಲೇ ಜೆಡಿಎಸ್‍ನ ಮೂವರು ಸದಸ್ಯರನ್ನು ಅಮಾನತುಗೊಳಿಸಲಾಗಿದೆ. ಇವರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ವಿ.ಪಿ.ಶಶಿಧರ್ ಅವರನ್ನು ಬಿಟ್ಟರೆ ಬೇರೆ ಯಾರೂ ಜನಪರವಾಗಿ ಹೋರಾಟ ನಡೆಸುತ್ತಿಲ್ಲ. ಆದರೆ, ಆ ಪಕ್ಷ ಅವರಿಗೆ ಸ್ಥಾನಮಾನವನ್ನು ನೀಡದೆ ವಂಚಿಸಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಪಕ್ಷದ ಜಿಲ್ಲಾಧ್ಯಕ್ಷರೆ ಅಥವಾ ವಕ್ತಾರರೆ ಎನ್ನುವ ಸಂಶಯ ಮೂಡಿದೆಯೆಂದು ಇಸಾಕ್ ಖಾನ್ ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಖಜಾಂಚಿ ಡೆನ್ನಿ ಬರೋಸ್, ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೀಲಾ ಶೇಷಮ್ಮ ಹಾಗೂ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಾಷೀರ್ ಉಪಸ್ಥಿತರಿದ್ದರು.

error: Content is protected !!