ನ.15 ರಂದು ಕಾರ್ಯಪ್ಪ ಕಾಲೇಜ್ ಹಳೇ ವಿದ್ಯಾರ್ಥಿಗಳ ಸಂಘದ ಮಹಾಸಭೆ

07/11/2020

ಮಡಿಕೇರಿ ನ.7 : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂತೋಷಕೂಟ ನ.15 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷೆ ಅಮ್ಮಟ್ಟಂಡ ಡಾ.ಪಾರ್ವತಿ ಅಪ್ಪಯ್ಯ ಅವರು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರು ಹಾಗೂ ಹಳೇ ವಿದ್ಯಾರ್ಥಿಗಳ ಸಂಘದ ಸ್ಥಾಪಕಾಧ್ಯಕ್ಷರೂ ಆದ ಕೊಂಗಂಡ ಎಸ್.ದೇವಯ್ಯ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ಪ್ರಾಶುಂಪಾಲರಾದ ಡಾ.ಜಗತ್ ತಿಮ್ಮಯ್ಯ ಭಾಗವಹಿಸಲಿದ್ದು, ತನ್ನ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ಕಳೆದ ಒಂದು ವರ್ಷದಲ್ಲಿ ಸಂಘದ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, ಸಂಘದ ಗೌರವ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ ಅವರ ಸಹಕಾರದಿಂದ ಹಳೇ ವಿದ್ಯಾರ್ಥಿಗಳ ಸಂಘದ ನೋಂದಾವಣಿಯನ್ನು ಸಂಬಂಧಿಸಿದ ಇಲಾಖೆ ಮೂಲಕ ಅಧಿಕೃತಗೊಳಿಸಲಾಗಿದೆ ಎಂದು ತಿಳಿಸಿದರು.
ಕಾಲೇಜಿನ ಮಹಾದ್ವಾರ ನಿರ್ಮಿಸಿ ಅದನ್ನು ಉದ್ಘಾಟಿಸಲಾಗಿದೆ. ಕೊಡಗಿನ ಪ್ರವಾಸೋದ್ಯಮದ ಮೇಲೆ ಪ್ರಾಕೃತಿಕ ವಿಕೋಪದ ಪರಿಣಾಮ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗಿದೆ. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪತ್ರಿಕೋದ್ಯಮದ ವಿದ್ಯಾರ್ಥಿಗೆ ಕ್ಯಾಮರವನ್ನು ಉಡುಗೊರೆಯಾಗಿ ನೀಡಲಾಗಿದೆ.
ಕಾಲೇಜು ವಿದ್ಯಾರ್ಥಿಗಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಕಾಲೇಜಿಗೆ ತೆರಳುವ ರಸ್ತೆ ದುರಸ್ತಿಗಾಗಿ ಒತ್ತಾಯಿಸಿ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಗಿದೆ. ಹಳೇ ವಿದ್ಯಾರ್ಥಿ ಸಂಘ ಹಾಗೂ ಎನ್‍ಸಿಸಿ ಘಟಕದ ಸಂಯುಕ್ತಾಶ್ರಯದಲ್ಲಿ ಕಾಲೇಜ್ ತೋಟವನ್ನು ಸ್ವಚ್ಚಗೊಳಿಸಲಾಗಿದೆ.
ಇದೀಗ ಸಂಘದ ನಿರ್ದೇಶಕಿ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರ ನೇತೃತ್ವದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಕೋವಿಡ್ ಬಗ್ಗೆ ಆನ್‍ಲೈನ್‍ನಲ್ಲಿ ಕವನ ಬರೆಯುವ ಕಾರ್ಯಕ್ರಮ ಏರ್ಪಡಿಸಿದ್ದು, ನ.15 ರಂದು ನಡೆಯಲಿರುವ ವಾರ್ಷಿಕ ಮಹಾಸಭೆಯ ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹಳೇ ವಿದ್ಯಾರ್ಥಿಗಳ ಸಂಘದ ಕಾರ್ಯಕಾರಿ ಸಮಿತಿಯ ಸಭೆ ಹಾಗೂ ಕಚೇರಿ ಉಪಯೋಗಕ್ಕಾಗಿ ಒಂದು ನೂತನ ಕೋಣೆಯನ್ನು ನಿರ್ಮಿಸಲು ಮಂಗಳೂರು ವಿಶ್ವವಿದ್ಯಾನಿಯಲದಿಂದ ಅನುಮತಿ ಪಡೆದಿದ್ದು, ಮುಂದಿನ ದಿನಗಳಲ್ಲಿ ಇದನ್ನು ನಿರ್ಮಿಸಲಾಗುವುದು. ಅಲ್ಲದೇ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಕಾರ್ಯಾಗಾರ ನಡೆಸಲು ನಿರ್ಧರಿಸಲಾಗಿದೆ ಎಂದರು.
ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘ ಪ್ರಾರಂಭವಾಗಿ 25 ವರ್ಷ ತುಂಬಿದ ಪ್ರಯುಕ್ತ ಸ್ಮರಣಾ ಸಂಚಿಕೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದ್ದು, ಇದರ ಸಂಪಾದಕರಾಗಿ ಮೊಣ್ಣಂಡ ಶೋಭಾ ಸುಬ್ಬಯ್ಯ ಹಾಗೂ ಸದಸ್ಯರಾಗಿ ಬಿದ್ದಂಡ ಕಾವೇರಿ ನಂಜಪ್ಪ, ಬಲ್ಯಂಡ ವಿಜು ನಂಜಪ್ಪ, ಕಿಶೋರ್ ರೈ ಕತ್ತಲೆಕಾಡು, ವಿಘ್ನೇಶ್ ಭೂತನಕಾಡು ಅವರುಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಸಂಘದ ನಿರ್ದೇಶಕಿ ಹಾಗೂ ಬೆಳ್ಳಿಹಬ್ಬ ಸಂಚಿಕೆಯ ಸಂಪಾದಕಿ ಮೊಣ್ಣಂಡ ಶೋಭಾ ಸುಬ್ಬಯ್ಯ ಮಾತನಾಡಿ, ಸಂಘದ ನಿರ್ಧಾರದ ಮೇರೆಗೆ ಮಾರ್ಚ್ ತಿಂಗಳಲ್ಲಿ ಬೆಳ್ಳಿ ಹಬ್ಬದ ಸ್ಮರಣಾ ಸಂಚಿಕೆಯನ್ನು ಹೊರತರಲು ತೀರ್ಮಾನಿಸಲಾಗಿದೆ ಎಂದರು.
ಈ ಸಂಚಿಕೆಗೆ ಹಳೇ ವಿದ್ಯಾರ್ಥಿಗಳಿಂದ ಅವರ ಕಾಲೇಜು ದಿನಗಳಿಗೆ ಸಂಬಂಧಪಟ್ಟ ಲೇಖನ, ಕವನ ಕಥೆ, ಕಾರ್‍ಟೂನ್, ಚುಟುಕು, ಹನಿಗವನ ಹಾಗೂ ಕಾಲೇಜಿಗೆ ಸಂಬಂಧಿಸಿದ ಹಳೇ ಫೋಟೋಗಳನ್ನು ಆಹ್ವಾನಿಸಿದ್ದು, ಕಥೆಗಳು 1,500 ಪದ ಮೀರದಂತೆ, ಕವನಗಳು, 16 ಪಂಕ್ತಿ, ನ್ಯಾನೋ ಕಥೆ 100 ಪದ ಮೀರದಂತೆ ಹಾಗೂ ಪ್ರಬಂಧಗಳಲ್ಲಿ ಅನಿಸಿಕೆ, ಸಲಹೆ, ರಾಜಕೀಯ ಹೊರತಾಗಿ ಕಳಹಿಸುವಂತೆ ತಿಳಿಸಿದರು.
ಎಲ್ಲಾ ವಿಷಯಗಳು ಹಾರ್ಡ್‍ಕಾಪಿ ಹಾಗೂ ಸಾಫ್ಟ್ ಕಾಪಿ ಮಾಡಿ ಎಂ. ಶೋಭಸುಬ್ಬಯ್ಯ, ಅಶೋಕ ಭವನ, ಹೊಸ ಬಡಾವಣೆ, ಮಡಿಕೇರಿ ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ. ಸಾಫ್ಟ್ ಕಾಪಿಯನ್ನು mಚಿರಿoಡಿಟಿಚಿಟಿರಿಚಿಠಿಠಿಚಿ2@gmಚಿiಟ.ಛಿom, ಞಚಿveಡಿಥಿಚಿiಥಿಚಿಟಿಟಿಚಿ@gmಚಿiಟ.ಛಿom ಗೆ ಜನವರಿ 31 ರೊಳಗೆ ಕಳುಹಿಸಬಹುದಾಗಿದೆ. ಬರಹಗಾರರು ತಮ್ಮ ಭಾವಚಿತ್ರವನ್ನು ಲಗತ್ತಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಎಂ.ಶೋಭಾ ಸುಬ್ಬಯ್ಯ 9448366715 ನ್ನು ಸಂಪರ್ಕಿಸುವಂತೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ನಾಟೋಳಂಡ ಚರ್ಮಣ, ಗೌರವ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ ಹಾಗೂ ನಿರ್ದೇಶಕ ಬಲ್ಯಂಡ ವಿಜು ನಂಜಪ್ಪ ಉಪಸ್ಥಿತರಿದ್ದರು.