ತಾ.ಪಂ.ತ್ರೈಮಾಸಿಕ ಕೆಡಿಪಿ ಸಭೆ : ಸಿ ಮತ್ತು ಡಿ ಭೂಮಿ ವ್ಯಾಪ್ತಿಯಲ್ಲಿ ಕೃಷಿಕರಿಗೆ ತೊಂದರೆ ನೀಡಬೇಡಿ: ಶಾಸಕ ಕೆ.ಜಿ.ಬೋಪಯ್ಯ ಸೂಚನೆ

07/11/2020

ಮಡಿಕೇರಿ ನ.07 : ಜಿಲ್ಲೆಯಲ್ಲಿನ ಸಿ ಮತ್ತು ಡಿ ಭೂಮಿ ಜಂಟಿ ಸರ್ವೇಯಾಗುವವರೆಗೆ ಯಾವುದೇ ಕಾರಣಕ್ಕೂ ಕೃಷಿಕರಿಗೆ ತೊಂದರೆ ನೀಡದಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ನಗರದ ತಾ.ಪಂ.ಎಸ್‍ಜೆಎಸ್‍ವೈ ಸಭಾಂಗಣದಲ್ಲಿ ಶನಿವಾರ ನಡೆದ ತಾ.ಪಂ.ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಲವು ದಶಕಗಳಿಂದ ಪೈಸಾರಿ ಭೂಮಿಯಲ್ಲಿ ಕಾಫಿ ಗಿಡ ಕೃಷಿ ಮಾಡಿಕೊಂಡು ಬರುತ್ತಿರುವ ಸಣ್ಣ ರೈತರಿಗೆ ತೊಂದರೆ ನೀಡುತ್ತಿರುವ ಬಗ್ಗೆ ಮಾಹಿತಿ ಇದ್ದು, ಇಂತಹ ದೂರುಗಳು ಕೇಳಿ ಬರಬಾರದು. ಭಾಗಮಂಡಲ, ಸಂಪಾಜೆ, ಕಾಲೂರು, ಬಿರುನಾಣಿ ಮತ್ತಿತರ ಭಾಗಗಳಲ್ಲಿ ಎಷ್ಟು ಕಷ್ಟದಿಂದ ಬದುಕುತ್ತಿದ್ದಾರೆ ಎಂಬ ಬಗ್ಗೆ ಯೋಚಿಸಬೇಕು ಎಂದರು.
ಕಂದಾಯ ಇಲಾಖೆ ಮೂಲಕ ಆಗಬೇಕಿರುವ ಕೆಲಸಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಗ್ರಾ.ಪಂ.ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆ, ಹಲವು ಅಭಿವೃದ್ಧಿ ಕಾರ್ಯಗಳಿಗೆ ಜಾಗ ಒದಗಿಸುವುದು ಮತ್ತಿತರ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಕೆ.ಜಿ.ಬೋಪಯ್ಯ ಅವರು ಸೂಚಿಸಿದರು.
ತಹಶೀಲ್ದಾರರಾದ ಮಹೇಶ್ ಅವರು 26 ಗ್ರಾ.ಪಂ.ಗಳಲ್ಲಿ 12 ಗ್ರಾ.ಪಂ.ಗಳಿಗೆ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಜಾಗ ಒದಗಿಸಲಾಗಿದೆ. ಉಳಿದ ಗ್ರಾ.ಪಂ.ಗಳಿಗೆ ಭೂಮಿ ಕಲ್ಪಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಸರ್ಕಾರ ಪೌತಿ ಖಾತೆ ಆಂದೋಲನ ನಡೆಸಲು ಅವಕಾಶ ನೀಡಿದ್ದು, ಜನ ಸಾಮಾನ್ಯರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸ್ಥಳೀಯರಿಗೆ ಮಾಹಿತಿ ನೀಡಿ ಪೌತಿ ಖಾತೆ ಆಂದೋಲನವನ್ನು ಯಶಸ್ವಿಗೊಳಿಸುವಂತೆ ತಹಶೀಲ್ದಾರರಿಗೆ ಕೆ.ಜಿ.ಬೋಪಯ್ಯ ಅವರು ಸೂಚಿಸಿದರು.
ರಾಷ್ಟ್ರೀಯ ತೋಟಗಾರಿಕಾ ಅಭಿಯಾನ ಯೋಜನೆಯಡಿ ಕಿತ್ತಳೆ ಮತ್ತು ಕಾಳು ಮೆಣಸು ಗಿಡ ವಿತರಣೆ, ಜೇನು ಕೃಷಿ ಅಭಿವೃದ್ಧಿ, ಬಾಳೆ ಬೆಳೆಗೆ ಸಹಾಯಧನ, ಹೀಗೆ ಹಲವು ಕಾರ್ಯಕ್ರಮಗಳಿಗೆ ಸಹಾಯಧನವನ್ನು ಕೃಷಿಕರಿಗೆ ತಲುಪಿಸುವಂತೆ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಸೂಚಿಸಿದರು.
ಸೌಭಾಗ್ಯ ಯೋಜನೆಯಡಿ ವಿದ್ಯುತ್ ಸಂಪರ್ಕ ಇಲ್ಲದ ಪ್ರತೀ ಕುಟುಂಬಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ವಿವಿಧ ನಿಗಮ ವ್ಯಾಪ್ತಿಯಲ್ಲಿ ಬಾಕಿ ಇರುವ ಕುಡಿಯುವ ನೀರು ಯೋಜನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಈ ಸಂಬಂಧ ಪಂಚಾಯತ್ ರಾಜ್ ಇಲಾಖೆಯವರು ಅನುದಾನ ಒದಗಿಸುವಂತೆ ನಿರ್ದೇಶನ ನೀಡಿದರು.
ಕೊರೊನಾ ಹಿನ್ನೆಲೆ ಅಂಗನವಾಡಿಗಳು ನಡೆಯುತ್ತಿಲ್ಲ. ಆದ್ದರಿಂದ ಮನೆಗಳಿಗೆ ಆಹಾರ ಕಿಟ್ ವಿತರಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಮತ್ತು ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಿಸುವುದು, ಆರ್ಥಿಕ ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಕೋವಿಡ್ ಸಂದರ್ಭದಲ್ಲಿ ಕಾರ್ಮಿಕರಿಗೆ ಸರ್ಕಾರದ ಸಹಾಯಧನ ಕಲ್ಪಿಸಲಾಗಿದೆಯೇ ಎಂದು ಅವರು ಮಾಹಿತಿ ಪಡೆದರು.
ಈ ಸಂಬಂಧ ಮಾಹಿತಿ ನೀಡಿದ ತಾಲ್ಲೂಕು ಕಾರ್ಮಿಕ ಅಧಿಕಾರಿ ಯತ್ನಟಿ ಅವರು ತಾಲ್ಲೂಕಿನಲ್ಲಿ 443 ಕಟ್ಟಡ ಕಾರ್ಮಿಕರು ಹೆಸರು ನೋಂದಾಯಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕರಿಗೆ ಸಹಾಯಧನ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ತಾ.ಪಂ.ಸದಸ್ಯರಾದ ನಾಗೇಶ್ ಕುಂದಲ್ಪಾಡಿ ಅವರು ಮಣ್ಣು ಪರೀಕ್ಷೆಯನ್ನು ಎಲ್ಲೆಲ್ಲಿ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ಪಡೆದರು.
ಈ ಬಗ್ಗೆ ಮಾಹಿತಿ ನೀಡಿದ ಕೃಷಿ ಇಲಾಖೆ ಉಪ ನಿರ್ದೇಶಕರಾದ ರಾಜು ಅವರು ಮಣ್ಣು ಪರೀಕ್ಷೆಯನ್ನು ರ್ಯಾಂಡಮ್ ಆಗಿ ಗ್ರಾಮಗಳಲ್ಲಿ ಮಾಡಲಾಗುತ್ತದೆ. ಮಣ್ಣು ಪರೀಕ್ಷೆಗಾಗಿ ರೈತ ಸಂಪರ್ಕ ಕೇಂದ್ರಕ್ಕೆ ನೀಡಿದಲಿ,್ಲ ಮಣ್ಣು ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುವುದು ಎಂದು ತಿಳಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಣ್ಣು ಪರೀಕ್ಷೆಯನ್ನು ಗ್ರಾಮ ಪಂಚಾಯಿತಿವಾರು ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು 2018ರಲ್ಲಿ ಮಕ್ಕಂದೂರು, ಕೆ.ನಿಡುಗಣೆ, ಮದೆ, ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಪ್ರಕೃತಿ ವಿಕೋಪದಿಂದ ಭತ್ತದ ಗದ್ದೆಗೆ ಮರಳು, ಮಣ್ಣು, ಮರ ತುಂಬಿ ಹೋಗಿದ್ದು, ಈ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಒತ್ತಾಯಮಾಡಿಕೊಂಡು ಬರಲಾಗಿದೆ. ಆದರೆ ಈ ಕಾರ್ಯವಾಗಿಲ್ಲ ಎಂದು ಅವರು ಅತೃಪ್ತಿ ವ್ಯಕ್ತಪಡಿಸಿದರು.

ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಗೆ ಕೋರಂಗಾಲ ಚೇರಂಗಾಲ ಭಾಗದಲ್ಲಿ ಸೇತುವೆ ರಸ್ತೆಗಳು ಕುಸಿದಿದ್ದು, ಇದನ್ನು ಕೂಡಲೇ ಸರಿಪಡಿಸುವಂತೆ ಕೆ.ಜಿ.ಬೋಪಯ್ಯ ಅವರು ಪಂಚಾಯತ್ ರಾಜ್ ಎಂಜಿನಿಯರ್‍ಗೆ ಸೂಚಿಸಿದರು.
ರೈತರ ಆತ್ಮಹತ್ಯೆ ಪ್ರಕರಣ ಸಂಬಂಧಿಸಿದಂತೆ ಪರಿಹಾರ ಪಾವತಿಸಲು ನಾಲ್ಕು ಪ್ರಕರಣ ಬಾಕಿ ಇದೆ ಎಂದು ರಾಜು ಅವರು ಮಾಹಿತಿ ನೀಡಿದರು.
ಚೆಯ್ಯಂಡಾಣೆ, ಕರಿಕೆ ಮೂಲಕ ಗೋವುಗಳ ಸಾಗಾಟ ನಡೆಯುತ್ತಿದ್ದು, ಇದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಕೆ.ಜಿ.ಬೋಪಯ್ಯ ಅವರು ಸೂಚಿಸಿದರು.
ಜಿಲ್ಲೆಯ ಕೆಲವು ಕಡೆಗಳಲ್ಲಿ ಬಲವಂತವಾಗಿ ಮತಾಂತರ ನಡೆಯುತ್ತಿರುವ ಬಗ್ಗೆ ಮಾಹಿತಿ ಇದ್ದು, ಇದನ್ನು ತಡೆಯಬೇಕು ಎಂದು ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಹೇಳಿದರು.
ತಾಲ್ಲೂಕು ಪಂಚಾಯಿತಿ ಸದಸ್ಯರೊಬ್ಬರು ಬಲಮುರಿ ವ್ಯಾಪ್ತಿಯಲ್ಲಿ ರಸ್ತೆಗಳು ಹದಗೆಟ್ಟಿದ್ದು, ಸರಿಪಡಿಸುವಂತೆ ಮನವಿ ಮಾಡಿದರು.
ನಗರಸಭೆ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿ ಆರಂಭಿಸಬೇಕು. ಖಾಸಗಿ ಬಸ್ ನಿಲ್ದಾಣ ಕಾಮಗಾರಿ ತ್ವರಿತಗೊಳಿಸುವಂತೆ ಪೌರಾಯುಕ್ತರಿಗೆ ಕೆ.ಜಿ.ಬೋಪಯ್ಯ ಅವರು ಸೂಚಿಸಿದರು.
ವೀಣಾ ಅಚ್ಚಯ್ಯ ಅವರು ಮಾತನಾಡಿ ಸಂಪಿಗೆ ಕಟ್ಟೆಯಿಂದ ಕನ್ನಂಡಬಾಣೆ ರಸ್ತೆಯ ಗುಂಡಿಯನ್ನಾದರೂ ಮುಚ್ಚುವಂತೆ ಅವರು ಸೂಚಿಸಿದರು. ತಾಲ್ಲೂಕು ಪಂಚಾಯಿತಿ ಕಚೇರಿ ಮಾರ್ಗದ ರಸ್ತೆ ಸರಿಪಡಿಸುವಂತೆ ಅಧ್ಯಕ್ಷರಾದ ತೆಕ್ಕಡೆ ಶೋಭ ಮೋಹನ್ ಅವರು ಹೇಳಿದರು.
ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ತಾಲ್ಲೂಕಿನ ಹಲವು ರಸ್ತೆಗಳು ಹದಗೆಟ್ಟಿದ್ದು, ಅನುದಾನ ಬೇಕಿದ್ದಲ್ಲಿ ಇಲಾಖೆ ಎಂಜಿನಿಯರ್‍ಗಳು ಗಮನಕ್ಕೆ ತರಬೇಕು. ಅದು ಬಿಟ್ಟು ಕ್ರಿಯಾಯೋಜನೆಯನ್ನು ಸರಿಯಾಗಿ ತಯಾರಿಸದೆ ಇರುವುದು ಏಕೆ ಎಂದು ಕೆ.ಜಿ.ಬೋಪಯ್ಯ ಅವರು ಸಿಟ್ಟಾದರು.
ಇದಕ್ಕೆ ಧ್ವನಿಗೂಡಿಸಿದ ವೀಣಾ ಅಚ್ಚಯ್ಯ ಅವರು ಮಕ್ಕಂದೂರು ಭಾಗದಲ್ಲಿ ಮೂರು ವರ್ಷದಲ್ಲಿ ಮೂರು ಬಾರಿ ಕಳಪೆ ಕಾಮಗಾರಿ ಮಾಡಿರುವುದು ಏಕೆ, ಸರ್ಕಾರದ ಹಣ ಪೋಲು ಮಾಡುವುದು ಏಕೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರವಾಸೋದ್ಯಮ ಇಲಾಖೆಯಿಂದ ಮಾಂದಲ್ಪಟ್ಟಿ ರಸ್ತೆಯನ್ನು ಅರಣ್ಯ ಇಲಾಖೆಯವರು ತೆಗೆದುಕೊಂಡಿದ್ದು, ಅರಣ್ಯ ಇಲಾಖೆಯವರು ಕಾಮಗಾರಿಯನ್ನು ಕೈಗೆತ್ತಿಕೊಂಡಿಲ್ಲ ಎಂದು ಶಾಸಕರು ಅತೃಪ್ತಿ ವ್ಯಕ್ತಪಡಿಸಿದರು. ಬಿಳಿಗೇರಿ, ಕುಂಬಳದಾಳು ರಸ್ತೆಯಲ್ಲಿ ಮರ ತೆಗೆಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಾ.ಪಂ.ಅಧ್ಯಕ್ಷರು ತಿಳಿಸಿದರು.
ರಾಜಾಸೀಟಿನಲ್ಲಿ 3.85 ಕೋಟಿ ರೂ. ವೆಚ್ಚದಲ್ಲಿ ಪಾಥ್ ವೇ ನಿರ್ಮಾಣವಾಗುತ್ತಿದೆ. ಜೊತೆಗೆ 47 ಸಾವಿರ ಗಿಡಗಳನ್ನು ನೆಡಲಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಘವೇಂದ್ರ ಅವರು ಮಾಹಿತಿ ನೀಡಿದರು.
ಈ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ವೀಣಾ ಅಚ್ಚಯ್ಯ ಅವರು ಕ್ರಿಯಾ ಯೋಜನೆಯಲ್ಲಿ ಮ್ಯಾನುವೆಲ್ ಮಾಡಲು ಹೇಳಲಾಗಿದೆ. ಆದರೆ ಜೆಸಿಬಿ ಮೂಲಕ ಕಾಮಗಾರಿ ನಿರ್ವಹಿಸುತ್ತಿರುವುದು ಏಕೆ. ಕಳೆದ ಮೂರು ವರ್ಷದಲ್ಲಿ ಜಿಲ್ಲೆಯಲ್ಲಿ ಬೆಟ್ಟ ಗುಡ್ಡಗಳು ಕುಸಿದಿವೆ. ಅದನ್ನು ಅರ್ಥಮಾಡಿಕೊಳ್ಳುವುದು ಬೇಡವೇ. ರಾಜಾಸೀಟು ಕೆಳಭಾಗದಲ್ಲಿ ವಾಸಿಸುವ ಜನರ ಗತಿಯೇನು ಎಂದು ವೀಣಾ ಅಚ್ಚಯ್ಯ ಅವರು ಪ್ರಶ್ನಿಸಿದರು.
ತಾ.ಪಂ.ಸದಸ್ಯರಾದ ಕೊಡಪಾಲ ಗಣಪತಿ, ಕೋಡಿಯಂಡ ಇಂದಿರಾ, ಕುಮುದ ರಶ್ಮಿ ಅವರು ಹಲವು ವಿಚಾರಗಳ ಕುರಿತು ಗಮನ ಸೆಳೆದರು.
ತಾ.ಪಂ.ಇಒ ಲಕ್ಷ್ಮೀ ಅವರು ತಾ.ಪಂ.ವ್ಯಾಪ್ತಿಯಲ್ಲಿ ಆಗಬೇಕಿರುವ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಡಿವೈಎಸ್‍ಪಿ ದಿನೇಶ್ ಕುಮಾರ್ ಅವರು ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಅರುಂಧತಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ಪ್ರಮೋದ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಯಾನಂದ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿ ಶ್ರೀಕಂಠಯ್ಯ, ಸೆಸ್ಕ್ ಎಂಜಿನಿಯರ್ ದೇವಯ್ಯ, ಆಹಾರ ಇಲಾಖೆ ನಿರೀಕ್ಷಕರಾದ ಪ್ರವೀಣ್ ಕುಮಾರ್, ಲೋಕೋಪಯೋಗಿ ಇಲಾಖೆ ಎಇಇ ಶಿವರಾಮ್, ಪೌರಾಯುಕ್ತರಾದ ರಾಮದಾಸ್ ಇತರರು ತಮ್ಮ ಇಲಾಖಾ ವ್ಯಾಪ್ತಿಯ ಪ್ರಗತಿ ಬಗ್ಗೆ ಹಲವು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಬಿ.ಎ.ಹರೀಶ್, ಸದಸ್ಯರಾದ ಯಾಲದಾಳು ಪದ್ಮಾವತಿ, ಕಲಾವತಿ, ತಾ.ಪಂ.ಉಪಾಧ್ಯಕ್ಷರಾದ ಸಂತು ಸುಬ್ರಮಣಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಡಬ್ಬಡ್ಕ ಶ್ರೀಧರ್, ಗ್ರಾ.ಪಂ. ಆಡಳಿತ ಅಧಿಕಾರಿಗಳು, ಪಿಡಿಒಗಳು ಇತರರು ಇದ್ದರು.