ತಲಕಾವೇರಿಯ ಹಾನಿಗೊಳಗಾದ ಶಿವಲಿಂಗ ವಿಸರ್ಜನೆಗೆ ಸಲಹೆ

November 7, 2020

ಮಡಿಕೇರಿ ನ.7 : ತಲಕಾವೇರಿಯಲ್ಲಿ ಹಾನಿಗೊಳಗಾಗಿರುವ ಅಗಸ್ತ್ಯ ಮುನಿಗಳು ಪ್ರತಿಷ್ಠಾಪಿಸಿದ ಲಿಂಗವನ್ನು ಹೊರ ತೆಗೆದು ವಿಸರ್ಜಿಸಬೇಕೋ, ಅಥವಾ ಬೇಡವೊ ಎನ್ನುವ ತರ್ಕ ನಡೆಯುತ್ತಿದೆ. ನ್ಯಾಯಾಲಯದ ತಡೆಯಾಜ್ಞೆಯೂ ಜೊತೆಗಿದ್ದು, ಶಿವಲಿಂಗ ಈಗ ಅನಾಥವಾಗಿರುವುದು ವಿಷಾದನೀಯ ಎಂದು ಮೂರ್ನಾಡು ಶ್ರೀಅನ್ನಪೂರ್ಣೇಶ್ವರಿ ದೇವಾಲಯದ ಸಂಸ್ಥಾಪಕರಾದ ಡಾ.ಮಹಾಭಲೇಶ್ವರ ಭಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಧರ್ಮಶಾಸ್ತ್ರದ ಪ್ರಕಾರ ಭಗ್ನ ವಿಗ್ರಹಗಳನ್ನು ಕಂಡರೆ ಅಥವಾ ಅದನ್ನು ಪೂಜಿಸಿದರೆ ಊರಿಗೆ ಅಥವಾ ಕಂಡವರಿಗೆ ಆಪತ್ತು ಎಂದು ಧರ್ಮಶಾಸ್ತ್ರದಲ್ಲಿದೆ. ಅಲ್ಲದೇ ಒಡೆದ ಕನ್ನಡಿ, ಒಡೆದ ಪಾತ್ರೆಗಳು, ತೂತು ಬಿಂದಿಗೆ ಮುರಿದ ಕತ್ತಿ, ಭಗ್ನಗೊಂಡ ಆಸನ ಈ ಯಾವುದೇ ವಸ್ತುಗಳನ್ನು ಮನೆಯಲ್ಲಿ ಆಗಲಿ, ದೇವಾಲಯಗಳಲ್ಲಿ ಬಳಸಿದರೆ ಅಭಿವೃದ್ಧಿ ಅಸಾಧ್ಯ ಎಂಬ ಮಾತಿದೆ. ಧಾರ್ಮಿಕತೆ ಹಾಗೂ ಧರ್ಮಶಾಸ್ತ್ರದ ಸಂಪೂರ್ಣ ತಿಳುವಳಿಕೆ ಇಲ್ಲದೆ ಇಂಥ ಕ್ಷೇತ್ರದ ಬಗ್ಗೆ ಚರ್ಚೆ ಮಾಡುವುದು ಸರಿಯಾದ ಕ್ರಮವಲ್ಲವೆಂದು ಹೇಳಿದ್ದಾರೆ.
ಅಷ್ಟಮಂಗಲ ಪ್ರಶ್ನೆ, ಇತಿಹಾಸದ ಸಬೂಬು ಕೊಡುವುದು ಸರಿಯಲ್ಲ. ಇತಿಹಾಸವನ್ನು ಓದಿ ತಿಳಿದವರೇ ಹೆಚ್ಚು ಹೊರತು ಕಂಡವರು ಯಾರಿದ್ದಾರೆ ಎಂದು ಪ್ರಶ್ನಿಸಿರುವ ಅವರು, ಇತಿಹಾಸದಿಂದ ಒಂದು ಪರಂಪರೆ ಹೊರತು ಧರ್ಮ ಜಿಜ್ಞಾಸೆಗೆ ಉತ್ತರವಾಗಲಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೊಡಗಿನಲ್ಲಿರುವ ದೇವರು, ದೇವತೆಗಳು ಕೇರಳದಿಂದ ಬಂದವರು ಎಂದು ಪ್ರಶ್ನೆ ಇಡುವವರು ಹೇಳುತ್ತಾರೆ. ಕೊಡಗಿನ ದೇವತಾ ಕಾರ್ಯಗಳು ಕೇರಳದ ತಂತ್ರಿಗಳಿಗೆ ಜಮ್ಮಾ ಎನ್ನುವಂತ್ತಾಗಿದೆ. ಪವಿತ್ರವಾದ ಕಾವೇರಮ್ಮ ಉದ್ಭವಿಸಿದ ಕೊಡಗಿನ ಮಣ್ಣಿನಲ್ಲಿ ದೈವೀಶಕ್ತಿ ಇಲ್ಲವೇ ಎಂದು ಪ್ರಶ್ನಿಸಿರುವ ಅವರು, ಪ್ರಶ್ನೆ ಇಡುವವರ ಪರವಾಗಿ ಕೆಲವು ಕಮಿಷನ್ ಏಜಂಟರುಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ನಾಡಿನ ಸಂಪತ್ತಾಗಿರುವ ತೀರ್ಥರೂಪಿಣಿ ಕಾವೇರಿಯನ್ನು ಆರಾಧಿಸುವ ಆಗಮ ಶಾಸ್ತ್ರ ಬಲ್ಲ ಬೇಕಾದಷ್ಟು ಪುರೋಹಿತರು ಹಾಗೂ ಪ್ರಶ್ನೆ ಇಡುವ ದೈವಜ್ಞರು ನಮ್ಮ ರಾಜ್ಯ ಕರ್ನಾಟದಲ್ಲೇ ಇದ್ದಾರೆ. “ದ್ವೆವಾದೀನ ಜಗತ್ ಸರ್ವದಾ” “ಮಂತ್ರಾದೀನಂ ದೈವತಃ” ತಂತ್ರಿಗಳು ಬಂದು ಕೈಸನ್ನೆ ಮಾಡಿದ ಮಾತ್ರದಲ್ಲಿ ದೈವತಾಶಕ್ತಿ ಆರಾಧನೆ ಆಗುವುದಿಲ್ಲ. ದೈವತಾ ಶಕ್ತಿ ಆರಾಧನೆ ಆಗಬೇಕಾದರೆ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಮಂತ್ರ ಪಠನೆಯ ಪರಿಜ್ಞಾನವಿರಬೇಕು. ಕೇರಳದಿಂದ ಬಂದಿರುವ ದೇವರು ಎಂದು ಹೇಳುವುದಾದರೆ, ಕೊಡಗಿನಿಂದಲೂ ಕೇರಳಕ್ಕೆ ದೇವರು ಹೋಗಿರಬೇಕಲ್ಲವೆ. ಆದಿ ಶಂಕರಾಚಾರ್ಯರು, ವಿವೇಕಾನಂದರಂತಹ ಮಹಾನ್ ಪುರುಷರು, ಪವಿತ್ರವಾದ ಹಿಂದೂ ಧರ್ಮಕ್ಕೆ ಕಾವಿ ಬಟ್ಟೆಯನ್ನು ಬಳುವಳಿಯಾಗಿ ನೀಡಿದ್ದಾರೆ.
ಹಿಂದೂ ಎಂದು ಹೇಳಿಕೊಂಡು ಧೈರ್ಯದಿಂದ ಈ ಬಟ್ಟೆಯನ್ನು ಧರಿಸಿ ಒಡಾಡುವ ಪರಿಸ್ಥಿತಿ ಕೇರಳದಲ್ಲಿಲ್ಲ. ಪರಿಸ್ಥಿತಿ ಹೀಗಿರುವಾಗ ಕೊಡಗಿನಲ್ಲಿರುವ ದೇವರ ಶಕ್ತಿಯನ್ನು ಹೆಚ್ಚಿಸಲು ಕೇರಳದ ತಂತ್ರಿಗಳಿಗೆ ಸಾಧ್ಯವೇ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಡಾ.ಮಹಾಭಲೇಶ್ವರ ಭಟ್, ತಲಕಾವೇರಿಯ ಶಿವಲಿಂಗವನ್ನು ಶೀಘ್ರ ವಿಸರ್ಜಿಸುವುದು ಸೂಕ್ತವೆಂದು ತಿಳಿಸಿದ್ದಾರೆ.
ಈ ವಿಷಯದಲ್ಲಿ ಪರಂಪರೆ, ಇತಿಹಾಸ ಎಂದು ಅಡೆತಡೆ ಮಾಡುವುದು ಸರಿಯಲ್ಲ. ಕೊಡಗಿನಲ್ಲಿ ಹುಟ್ಟಿ ಬೆಳೆದಿರುವ ಜೇನು ಕುರುಬರು, ಕಾಡು ಕುರುಬರು, ಎರವರು, ಪರಿಶಿಷ್ಟ ಜಾತಿ, ಜನಾಂಗದ ಮಂದಿಗೆ ಇಂದಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡದೆ, ಧರ್ಮದ ಆಚಾರ, ವಿಚಾರಗಳಿಂದ ವಂಚಿತರಾಗುವಂತೆ ಮಾಡಿರುವ ಮಂದಿ ಈ ರೀತಿಯ ಗೊಂದಲಗಳಿಗೆ ಕಾರಣಕರ್ತರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ದುರ್ಬಲರು ಪರಧರ್ಮದ ಹಾದಿ ಹಿಡಿಯುವುದನ್ನು ತಪ್ಪಿಸಲು ಎಲ್ಲಾ ಗ್ರಾಮ ದೇವಾಲಯಗಳಲ್ಲಿ ಎಲ್ಲರಂತೆ ದುರ್ಬಲ ವರ್ಗಕ್ಕೂ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡುವ ಪ್ರಯತ್ನ ಮಾಡುವುದು ಸೂಕ್ತವೆಂದು ಮಹಾಭಲೇಶ್ವರ ಭಟ್ ಅಭಿಪ್ರಾಯಪಟ್ಟಿದ್ದಾರೆ.
ತಲಕಾವೇರಿಯ ಭಗ್ನ ಶಿವಲಿಂಗವನ್ನು ಧರ್ಮಶಾಸ್ತ್ರದ ಆಧಾರದ ಪ್ರಕಾರ ವಿಸರ್ಜಿಸಲು ಅವಕಾಶ ಮಾಡಿಕೊಟ್ಟು ಕೊಡಗಿನ ಉಳಿವಿಗೆ ಎಲ್ಲರೂ ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.

error: Content is protected !!