ರಾಜಾಸೀಟ್ ಕಾಮಗಾರಿಗೆ ಜೆಸಿಬಿ ಬಳಸಲ್ಲ : ಆದರೆ ಅಭಿವೃದ್ಧಿ ಕಾರ್ಯ ಕೈಬಿಡಲ್ಲ : ಅಧಿಕಾರಿಗಳ ಸ್ಪಷ್ಟನೆ

November 7, 2020

ಮಡಿಕೇರಿ ನ.7 : ಹೆಸರುವಾಸಿ ಪ್ರವಾಸಿತಾಣ ಮಡಿಕೇರಿಯ ರಾಜಾಸೀಟು ಉದ್ಯಾನವನ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಇನ್ನು ಮುಂದೆ ಜೆಸಿಬಿ ಅಥವಾ ಇಟಾಚಿ ಯಂತ್ರಗಳನ್ನು ಬಳಸುವುದಿಲ್ಲವೆಂದು ವಿವಿಧ ಇಲಾಖಾ ಅಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದಾರೆ.
ಪತ್ರಿಕೆಯಲ್ಲಿ ವರದಿ ಪ್ರಕಟವಾದ ನಂತರ ಎಚ್ಚೆತ್ತುಕೊಂಡ ಅಧಿಕಾರಿಗಳು ಈ ರೀತಿ ಸ್ಪಷ್ಟನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದಂತೆ ರಾಜಾಸೀಟು ಉದ್ಯಾನವನದಲ್ಲಿ ಪರಿಸರ ಸಂರಕ್ಷಣೆಯ ಉದ್ದೇಶದಿಂದ ಉದ್ದೇಶಿಸಲಾದ ಎರಡು ಕೃತಕ ಕೆರೆಗಳು ಹಾಗೂ ಮೆಟ್ಟಿಲು ಸೇತುವೆಗಳ ನಿರ್ಮಾಣವನ್ನು ಕೈಬಿಡಲಾಗಿದೆ. ಜೆಸಿಬಿ ಅಥವಾ ಇಟಾಚಿ ಯಂತ್ರಗಳಿಂದ ಕಾಮಗಾರಿ ನಡೆಸದಂತೆ ನಿರ್ಧರಿಸಲಾಗಿದೆ.
ಈ ಪ್ರದೇಶದಲ್ಲಿ ಮೂಲ ಸ್ವರೂಪವನ್ನು ಬದಲಾವಣೆ ಮಾಡದೆ ಯಾವುದೇ ಮರ ಗಿಡ ಕಟಾವು ಮಾಡದೆ ಲಭ್ಯವಿರುವ ಸ್ಥಳದಲ್ಲಿ ಸುಂದರವಾಗಿ ಕಾಮಗಾರಿ ಕೈಗೊಳ್ಳಲಾಗುವುದಾಗಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರು, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.
ರಾಜಾಸೀಟು ಉದ್ಯಾನವನಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ಸಮಗ್ರ ಉದ್ಯಾನವನಗಳ ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ರೂ.455.00 ಲಕ್ಷಗಳಿಗೆ ಕ್ರೀಯಾ ಯೋಜನೆಗೆ ಅನುಮೋದನೆಯಾಗಿದ್ದು, ಅದರಲ್ಲಿ ರೂ.369.00 ಲಕ್ಷಗಳನ್ನು ಲೋಕೋಪಯೋಗಿ ಇಲಾಖೆಗೆ ಬಿಡುಗಡೆ ಮಾಡಿ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಅದರಂತೆ ಲೋಕೋಪಯೋಗಿ ಇಲಾಖೆರವರು ಅನುಮೋದಿತ ಅಂದಾಜು ಪಟ್ಟಿಯಂತೆ ಕಾಮಗಾರಿಯನ್ನು ಕೈಗೊಳ್ಳಲು ಟೆಂಡರ್ ಕರೆದು ಅನುಮೋದಿತ ಸಂಸ್ಥೆಗೆ ನೀಡಿರುತ್ತಾರೆ.
ಉದ್ದೇಶಿತ ಉದ್ಯಾನವನದ ಕಾಮಗಾರಿಯಲ್ಲಿ ಪೊದೆ ಸಸ್ಯಗಳಾದ ಡ್ರೀಸಿನಾ, ಹೇಮೀಲಿಯಾ, ಕೇಶಿಯಾ, ಟಿಕೋಮಾ, ಸ್ಟೇಫೀಲಿರ ಇತ್ಯಾದಿ 21300 ಸಸ್ಯಗಳನ್ನು ನಾಟಿ ಮಾಡಲು ಉದ್ದೇಶಿಸಲಾಗಿದೆ.
ಇಳಿಜಾರು ಪ್ರದೇಶದಲ್ಲಿ ಮಣ್ಣಿನ ಸವಕಳಿಯನ್ನು ತಡೆಗಟ್ಟಲು ನೆಲದಲ್ಲಿ ಹಬ್ಬುವ ಹಾಗೂ ಬಳ್ಳಿಗಳ ಜಾತಿಯ ಗಿಡಗಳಾದ ಲಂಟನಾ, ವರ್ಬಿನಾ, ಗಜೇನಿಯಾ, ಬೋಗನ್‍ವಿಲ್ಲಾ, ಸೈಡರ್‍ಲಿಲ್ಲಿ ಇತ್ಯಾದಿ 25000 ಸಂಖ್ಯೆಯ ಗಿಡಗಳನ್ನು ನಾಟಿ ಮಾಡಲಾಗುವುದು. ಉದ್ದೇಶಿತ ಉದ್ಯಾನವನದಲ್ಲಿ ಹೂವಿನ ಮರಗಳಾದ ಅಶೋಕ, ಸಂಪಿಗೆ, ಪ್ಲೋಮೀರಿಯಾ, ತಬೋಬಿಯಾ, ಸ್ಪೇತೋಡಿಯಾ, ಲಗೋಸ್ಟ್ರೀಮಿಯಾ ಇತ್ಯಾದಿ 1265 ಮರಗಳನ್ನು ನಾಟಿ ಮಾಡಲು ಉದ್ದೇಶಿಸಲಾಗಿದೆ.
ಉದ್ದೇಶಿತ ಉದ್ಯಾನವನದಲ್ಲಿ 17222 ಚ.ಅಡಿ ವಿಸ್ತೀರ್ಣದಲ್ಲಿ ಸ್ಥಳೀಯ ಹಾವಾಗುಣಕ್ಕೆ ಹೊಂದಿಕೊಳ್ಳುವ ಬರ್ಮುಡಾ, ಕೆಂಟುಕಿ ಬ್ಲೂ, ಸೈಟೋಪೋರಮ್ ಇತ್ಯಾದಿ ಹುಲ್ಲು ಹಾಸು (ಲಾನ್) ರಚಿಸಲಾಗುವುದು.
ಉದ್ಯಾನವನದ ಸುತ್ತಲೂ ಅಂದಾಜು 1.350 ಕಿ.ಮೀಗಳ ಉದ್ದದ ಪಾಥ್ ವೇ/ ನಡೆದಾಡುವ ರಸ್ತೆಯನ್ನು ಸಾದರಳ್ಳಿ/ಶಿರಾ/ಕೋಬಲ್ ಕಲ್ಲುಗಳಿಂದ ನಿರ್ಮಿಸಲಾಗುವುದು. ಪಾಥ್ ವೇ ಯ ಎರಡು ಬದಿಗಳಲ್ಲಿ ಮಣ್ಣು ಸವಕಳಿಯಾಗದಂತೆ ತಡೆಗೋಡೆ ಹಾಗೂ ರೈಲಿಂಗ್ಸ್ (ರಕ್ಷಣಾತ್ಮಕ ಕಂಬಿಗಳು)ನ್ನು ಮಾಡಲಾಗುವುದು.
ಉದ್ಯಾನವನದಲ್ಲಿ ಇಳಿಜಾರಿನಲ್ಲಿ ಮೆಟ್ಟಲುಗಳು ಹಾಗೂ ತಡೆಗೋಡೆಗಳನ್ನು ಎರಡು ಕಡೆ ನಿರ್ಮಿಸಲಾಗುವುದು. ಈಗಾಗಲೇ ಲಭ್ಯವಿರುವ ಉದ್ಯಾನವನ ಎತ್ತರದ ಗುಡ್ಡದಲ್ಲಿ ಮೂಲ ಸ್ವರೂಪಗಳಿಗೆ ದಕ್ಕೆಯಾಗದಂತೆ ಎರಡು ವೀಕ್ಷಣಾ ಗೋಪುರಗಳನ್ನು ಹಾಗೂ ಮಳೆ/ಬಿಸಿಲಿನಲ್ಲಿ ವಿಶ್ರಾಂತಿಗಾಗಿ ಮೂರು ಅಲಂಕಾರಿಕ ಮಂಟಪಗಳನ್ನು ನಿರ್ಮಿಸಲಾಗುವುದು.
ಉದ್ಯಾನವನದ ವಿವಿಧ ಭಾಗಗಳಲ್ಲಿ ಅಲಂಕಾರಿಕ ಹೂವಿನ ಬಳ್ಳಿಗಳನ್ನು ಹಬ್ಬಿಸಲು ಕಲ್ಲಿನ ಎಂಟು ಪೆರ್ಗೊಲಾ (Peಡಿgoಟಚಿ) ಗಳನ್ನು ನಿರ್ಮಿಸಲಾಗುವುದು. ಉದ್ಯಾನವನದಲ್ಲಿ ನೈಸರ್ಗಿಕವಾಗಿರುವ ಪ್ರದೇಶದಲ್ಲಿ ಮಕ್ಕಳ ಸಣ್ಣ ಆಟದ ಉದ್ಯಾನವನ್ನು ನಿರ್ಮಿಸಲಾಗುವುದು.
ಉದ್ಯಾನವನದಲ್ಲಿ ಸಾರ್ವಜನಿಕರ ವಿಶ್ರಾಂತಿಗಾಗಿ 25 ಆಸನಗಳ ವ್ಯವಸ್ಥೆ ಹಾಗೂ ಮರದ ಸುತ್ತಲೂ ಕೂರಲು ಆಸನದ ವ್ಯವಸ್ಥೆ ನಿರ್ಮಿಸಲಾಗುವುದು. ಉದ್ಯಾನವನದಲ್ಲಿ ಮಕ್ಕಳ ಮನೋರಂಜನೆಗಾಗಿ ವಿವಿಧ ಪ್ರಾಣಿಗಳ ಕಲಾಕೃತಿಗಳನ್ನು ಹಾಗೂ ಶಿಲ್ಪಕಲಾಕೃತಿಗಳನ್ನು ಅಳವಡಿಸಲಾಗುವುದು.
ಉದ್ಯಾನವನದಲ್ಲಿ ವಿವಿಧ ಅಲಂಕಾರಿಕ ಹೂವಿನ ಕುಂಡಗಳು, ಕಸದ ಬುಟ್ಟಿ, ಸೂಚನಾ ಫಲಕಗಳು, ಪ್ರವಾಸಿ ಮಾಹಿತಿ ಫಲಕ ಇತ್ಯಾದಿಗಳನ್ನು ಅಳವಡಿಸಲಾಗುವುದು. ಉದ್ಯಾವನದಲ್ಲಿ ಅಲಂಕಾರಿಕ ವಿದ್ಯುತ್ ದೀಪ ಅಳವಡಿಕೆ, ನೀರಾವರಿ ಅಳವಡಿಕೆ ಹಾಗೂ ಸಿ.ಸಿ ಕ್ಯಾಮರವನ್ನು ಅಳವಡಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.