ರಾಜಾಸೀಟ್ ಗೆ ಕೃತಕ ಸೌಂದರ್ಯದ ಅಗತ್ಯವಿಲ್ಲ : ನೈಜತೆಗೆ ದಕ್ಕೆಯಾದರೆ ಹೋರಾಟ : ಕೊಡಗು ರಕ್ಷಣಾ ವೇದಿಕೆ ಎಚ್ಚರಿಕೆ

07/11/2020

ಮಡಿಕೇರಿ ನ.7 : ಪ್ರಕೃತಿ ಪ್ರಿಯರ ನೆಚ್ಚಿನ ಪ್ರವಾಸಿತಾಣ ಮಡಿಕೇರಿಯ ರಾಜಾಸೀಟ್ ಉದ್ಯಾನವನ ನೈಜ ಸೌಂದರ್ಯದ ಮೂಲಕವೇ ದೇಶ, ವಿದೇಶಿಗರ ಗಮನ ಸೆಳೆದಿದ್ದು, ಕೃತಕತೆಯ ಮೂಲಕ ನೈಜತೆಗೆ ದಕ್ಕೆ ತರುವ ಅಗತ್ಯವಿಲ್ಲವೆಂದು ಕೊಡಗು ರಕ್ಷಣಾ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ತಿಳಿಸಿದ್ದಾರೆ. ಪ್ರಕೃತಿ ಸೌಂದರ್ಯಕ್ಕೆ ಮತ್ತು ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗುವ ರೀತಿಯ ಕಾಮಗಾರಿಗಳನ್ನು ಕೈಗೊಂಡರೆ ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ರಾಜಾಸೀಟ್ ನಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿದ ಅವರು ಕೊಡಗಿನ ಭೌಗೋಳಿಕ ವಸ್ತುಸ್ಥಿತಿಯ ಅರಿವಿಲ್ಲದ ಹೊರ ರಾಜ್ಯ ಮತ್ತು ಹೊರ ಜಿಲ್ಲೆಯ ಅಧಿಕಾರಿಗಳು ಪ್ರಕೃತಿಗೆ ವಿರುದ್ಧವಾದ ಯೋಜನೆಗಳನ್ನು ರೂಪಿಸಿ ಅನಾಹುತಗಳಿಗೆ ದಾರಿ ಮಾಡಿಕೊಡುತ್ತಿದ್ದಾರೆ. ಅಲ್ಲದೆ ಅಧಿಕಾರಿಗಳು ಮಾಡುವ ತಪ್ಪುಗಳನ್ನು ತಿದ್ದುವ ಜವಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಗಳು ಜಾಣ ಮೌನಕ್ಕೆ ಶರಣಾಗುತ್ತಿದ್ದಾರೆ ಎಂದು ಆರೋಪಿಸಿದರು.
ಕೊಡಗು ಪ್ರಯೋಗ ಶಾಲೆಯಲ್ಲ, ಇದೊಂದು ಪ್ರಕೃತಿಯ ಅಮೂಲ್ಯ ಕೊಡುಗೆಯಾಗಿದೆ. ಇದನ್ನು ವಿರೂಪಗೊಳಿಸುವ ಪ್ರಯತ್ನಕ್ಕೆ ಯಾರೂ ಪ್ರಯತ್ನಿಸಬಾರದು. ಈ ರೀತಿಯ ದೂರದೃಷ್ಟಿ ಇಲ್ಲದ ಯೋಜನೆಗಳಿಂದಲೇ ಇಂದು ಕೊಡಗಿನಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿವೆ. ಇದರ ಅರಿವಿದ್ದರೂ ಅಧಿಕಾರಿಗಳು ರಾಜಾಸೀಟ್ ನಲ್ಲಿ ಜೆಸಿಬಿ ಮತ್ತು ಇಟಾಚಿ ಯಂತ್ರಗಳನ್ನು ಬಳಸಿ ಕಾಮಗಾರಿ ಕೈಗೊಂಡಿರುವುದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು.
ನೈಜ ಪ್ರಕೃತಿ ಸೌಂದರ್ಯವನ್ನು ಹಾಳು ಮಾಡಲು 3.50 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಖರ್ಚು ಮಾಡಲಾಗುತ್ತಿದೆ. ಆದರೆ ಮಡಿಕೇರಿ ನಗರದ ರಸ್ತೆಗಳು ಕಳೆದ ಎರಡು ವರ್ಷಗಳಿಂದ ಹೊಂಡ ಗುಂಡಿಗಳಾಗಿ ವಾಹನಗಳು ಸಂಚರಿಸಲಾಗದ ದುಸ್ಥಿತಿಯಲ್ಲಿದ್ದರೂ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಜನರಿಗೆ ಅಗತ್ಯವಿಲ್ಲದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸರ್ಕಾರದ ಅನುದಾನವನ್ನು ದುರುಪಯೋಗ ಪಡಿಸಲಾಗುತ್ತಿದೆ ಎಂದು ಪವನ್ ಪೆಮ್ಮಯ್ಯ ಆರೋಪಿಸಿದರು.
ರಾಜಾಸೀಟ್ ಉದ್ಯಾನವನ ರಾಜಾಸೀಟ್ ನಂತೆ ಇರಲಿ, ಇಲ್ಲಿ ಕೃತಕತೆಯ ಅಗತ್ಯವಿಲ್ಲವೆಂದು ಹೇಳಿದ ಅವರು, ಉದ್ಯಾನವನದಲ್ಲಿ ಕೈಗೆತ್ತಿಕೊಂಡಿರುವ ಯೋಜನೆಯನ್ನು ತಕ್ಷಣ ಕೈಬಿಟ್ಟು ಅದೇ ಹಣವನ್ನು ನಗರದ ರಸ್ತೆಗಳ ಅಭಿವೃದ್ಧಿಗೆ ವಿನಿಯೋಗಿಸಬೇಕೆಂದು ಒತ್ತಾಯಿಸಿದರು. ಜಿಲ್ಲಾಡಳಿತ ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೊದಲು ಸಾಧಕ, ಬಾಧಕಗಳ ಬಗ್ಗೆ ಸಮಾಲೋಚನೆ ನಡೆಸಿ ಸ್ಥಳೀಯರ ಅಭಿಪ್ರಾಯಗಳನ್ನು ಸಂಗ್ರಹಿಸಬೇಕೆಂದು ತಿಳಿಸಿದರು.