ವಿರಾಜಪೇಟೆಯಲ್ಲಿ ಜನೌಷಧಿ ಕೇಂದ್ರ ಉದ್ಘಾಟನೆ : ಜನೌಷಧಿಯಿಂದ ದೇಶದ ಜನರ ಆರೋಗ್ಯ ವೃದ್ಧಿ : ಶಾಸಕ ಕೆ.ಜಿ.ಬೋಪಯ್ಯ ವಿಶ್ವಾಸ

November 8, 2020

ಮಡಿಕೇರಿ ನ.8 : ಜನರಿಕ್ ಔಷಧಿಗಳನ್ನು ಕಡಿಮೆ ದರದಲ್ಲಿ ಜನ ಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಆರಂಭವಾದ ಜನೌಷಧಿ ಕೇಂದ್ರ ಪ್ರಧಾನಮಂತ್ರಿಗಳ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ದೇಶದ ಜನರ ಆರೋಗ್ಯ ವೃದ್ಧಿಗೆ ಇದು ಸಹಕಾರಿಯಾಗಿದೆ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಹೇಳಿದ್ದಾರೆ.
ವಿರಾಜಪೇಟೆ ತಾಲ್ಲೂಕು ಆಸ್ಪತ್ರೆಯ ಆವರಣದಲ್ಲಿ ಜನೌಷಧಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಪ್ರತಿಯೊಬ್ಬ ಪ್ರಜೆ ಆರೋಗ್ಯವಂತರಾಗಿರಬೇಕು ಮತ್ತು ಯಾರೊಬ್ಬರೂ ಆರ್ಥಿಕ ಹಿನ್ನಡೆಯ ಕಾರಣಕ್ಕಾಗಿ ಚಿಕಿತ್ಸೆಗಳಿಂದ ವಂಚಿತರಾಗಬಾರದು ಎನ್ನುವ ಕಾರಣಕ್ಕಾಗಿ ಕೇಂದ್ರ ಸರ್ಕಾರ ಆರೋಗ್ಯ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ತಂದಿದೆ ಎಂದು ಶಾಸಕರು ತಿಳಿಸಿದರು.
ಕೈಗೆಟಕುವ ದರದಲ್ಲಿ ಔಷಧಿಗಳು ದೊರೆಯುವ ಜನೌಷಧಿ ಕೇಂದ್ರದ ಲಾಭವನ್ನು ಜಿಲ್ಲೆಯ ಜನ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ವಿರಾಜಪೇಟೆ ಪ.ಪಂ ಅಧ್ಯಕ್ಷರಾದ ಸುಶ್ಮಿತ, ಪ್ರಮುಖರಾದ ಡಾ.ಹೇಮಪ್ರಿಯ ಮತ್ತಿತರರು ಹಾಜರಿದ್ದರು.