ಬೆಮ್ಮತ್ತಿ ಜುಮಾ ಮಸೀದಿಯಲ್ಲಿ ಉಚಿತ ಮಾಸ್ಕ್ ವಿತರಣೆ : ಕೋವಿಡ್ ಪ್ರತಿರೋಧಿಸಲು ಭಯದ ಬದಲು ಕಾಳಜಿ ಅಗತ್ಯವೆಂದ ಮೊಯ್ದು

08/11/2020

ಪೊನ್ನಂಪೇಟೆ, ನ.8: ಕೊಡಗಿನಲ್ಲಿ ಕೋವಿಡ್-19ರ ಸೋಂಕು ಕಡಿಮೆಯಾಗಿದೆ ಎಂಬ ಕಾರಣಕ್ಕೆ ಆರೋಗ್ಯಕಾಳಜಿ ನಿರ್ಲಕ್ಷಿಸಿದರೆ ಮುಂದೆ ಈ ಸೋಂಕಿನ ಅಪಾಯ ತಪ್ಪಿದ್ದಲ್ಲ. ಮುಂದಿನ ಮತ್ತಷ್ಟು ತಿಂಗಳು ಜನತೆ ಜಾಗೃತರಾಗಿರಬೇಕು. ಕೋವಿಡ್ ಸೋಂಕನ್ನು ಮುಖ್ಯವಾಗಿ  ಪ್ರತಿರೋಧಿಸಲು ಭಯದ ಬದಲು ಆರೋಗ್ಯ ಕಾಳಜಿ ತೀರಾ ಅಗತ್ಯ ಎಂದು ಉದ್ಯಮಿ ಅಕ್ಕಳತಂಡ ಎಸ್.ಮೊಯ್ದು ಅವರು ಹೇಳಿದರು. 
ಗೋಣಿಕೊಪ್ಪಲು ಸಮೀಪದ ಮಾಯಮುಡಿಯ ಬೆಮ್ಮತ್ತಿ ಜುಮಾ ಮಸೀದಿಯ ಆವರಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ಎನ್.ಸಿ.ಟಿ. ಸಂಸ್ಥೆಯಿಂದ ಗ್ರಾಮವಾಸಿಗಳಿಗೆ ಉಚಿತವಾಗಿ ಮಾಸ್ಕ್ ವಿತರಿಸಿ ಮಾತನಾಡಿದ ಅವರು, ದೇಶದ ಇಡೀ ಆರ್ಥಿಕ ವ್ಯವಸ್ಥೆಯನ್ನೇ ತಲ್ಲಣಗೊಳಿಸಿದ ಮಹಾಮಾರಿ ಕೋವಿಡ್-19 ಸೋಂಕನ್ನು ಪ್ರತಿರೋಧಿಸಲು ಮುಂದೆಯೂ ಕೂಡ ಜನತೆ ಮಾನಸಿಕವಾಗಿ ಸಜ್ಜಾಗಬೇಕು. ಇದನ್ನು ಯಾವುದೇ ರೀತಿಯಲ್ಲಿ ನಿರ್ಲಕ್ಷಿಸುವಂತಿಲ್ಲ. ಕೋವಿಡ್ ಮುಕ್ತ ವಾತಾವರಣ ನಿರ್ಮಾಣವೇ ಮುಂದೆ ಪ್ರತಿಯೊಬ್ಬರ ಗುರಿಯಾಗಿರಬೇಕು ಎಂದು ಅವರು ಕರೆ ನೀಡಿದರು. 
ರಾಜ್ಯದ ಇತರ ಇತರೆಡೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಕೋವಿಡ್ ಅಟ್ಟಹಾಸ ಹೆಚ್ಚಾಗಿ ನಡೆಯಲಿಲ್ಲ. ಇದಕ್ಕೆ ಇಲ್ಲಿನ ಜನರ ಪ್ರಜ್ಞಾವಂತಿಕೆಯೂ ಸ್ವಲ್ಪಮಟ್ಟಿಗೆ ಕಾರಣವಿರಬಹುದು. ಆದರೆ ಮುಂದೆ ನಿರ್ಲಕ್ಷಿಸಿದರೆ ಸೋಂಕು ಮತ್ತಷ್ಟು ಹರಡುವ ಸಾಧ್ಯತೆಗಳಿವೆ. ಆದ್ದರಿಂದ ಪ್ರತಿಯೊಬ್ಬರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅಭಿಪ್ರಾಯಪಟ್ಟ ಅವರು, ಕೊರೋನಾ ಮಹಾಮಾರಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವಲ್ಲಿ ಮತ್ತು ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ಹಗಲಿರುಳೆನ್ನದೆ ನಿಸ್ವಾರ್ಥವಾಗಿ ದುಡಿದ ಜಿಲ್ಲೆಯ ಆರೋಗ್ಯಾಧಿಕಾರಿ -ದಾದಿಯರ ಹಾಗು ಆಶಾ ಕಾರ್ಯಕರ್ತರನ್ನು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಸೇವೆಯನ್ನು ಸಮಾಜ ಎಂದೂ ಮರೆಯುವಂತಿಲ್ಲ ಎಂದರು. 
ಬೆಮ್ಮತ್ತಿ ಜಮಾ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷರು ಆಗಿರುವ, ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರಾದ ಕೆ.ಎಂ.ಅಬ್ದುಲ್ ರಹಿಮಾನ್ (ಬಾಪು) ಅವರು ಮಾತನಾಡಿ,  ಕೋವಿಡ್ ಸಂಪೂರ್ಣವಾಗಿ ನಿರ್ಮೂಲನೆಗೊಳ್ಳಲು ಪ್ರತಿಯೊಬ್ಬರ ಸಂಘಟಿತ ಪ್ರಯತ್ನ ಅಗತ್ಯ. ಕೇವಲ ಸರಕಾರದ ಮೇಲೆ ಜವಾಬ್ದಾರಿ ಹೊರಿಸಿ ನಾಗರಿಕರು ತಮ್ಮ ಹೊಣೆಗಾರಿಕೆ ಮರೆತರೆ ಅದರ ಪರಿಣಾಮ ಸಮಾಜದ ಮೇಲಾಗುತ್ತದೆ. ಆದ್ದರಿಂದ ಕೋವಿಡ್ ನಿರ್ಮೂಲನೆಗಾಗಿ ವಿವಿಧ ರೀತಿಯಲ್ಲಿ ಕೈಜೋಡಿಸುವುದು ಪ್ರತಿಯೊಬ್ಬರ ಸಾಮಾಜಿಕ ಹೊಣೆಗಾರಿಕೆ ಎಂಬ ವಾಸ್ತವತೆಯನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದರಲ್ಲದೆ, ಕೊರೋನಾ ಸೋಂಕನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮಾಸ್ಕ್ ಪ್ರಮುಖ ಅಸ್ತ್ರವಾಗಿದ್ದು, ಮುಂದಿನ ಕೆಲವು ತಿಂಗಳು ಇದು ಜನರ ಸಂಗಾತಿಯಂತೆ ಕಡ್ಡಾಯವಾಗಿ ಜೊತೆಯಲ್ಲಿರಿಸಿಕೊಂಡು ಅದನ್ನು ಉಪಯೋಗಿಸಬೇಕು. ಅದರೊಂದಿಗೆ ವೈಯಕ್ತಿಕ ಸ್ವಚ್ಛತೆಗೂ ಆದ್ಯತೆ ನೀಡಬೇಕು ಎಂದು ಅವರು ಕಿವಿಮಾತು ಹೇಳಿದರು. 
ಕಾರ್ಯಕ್ರಮದಲ್ಲಿ ಬೆಮ್ಮತ್ತಿ ಜುಮಾ ಮಸೀದಿಯ ಖತೀಬರಾದ ನೌಶಾದ್ ಫೈಝಿ, ಸದರ್ ಮುಸ್ಲಿಯಾರ್ ಆಗಿರುವ ಸಿದ್ಧಿಖ್ ಅಝಾರಿ,  ಮಸೀದಿಯ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಕುಂಜ್ಹ್,  ಕಾರ್ಯದರ್ಶಿ ಸೈದು, ಕೋಶಾಧಿಕಾರಿ ಸೈದಲವಿ, ಜಂಟಿ ಕಾರ್ಯದರ್ಶಿ ಅಬು, ಪದಾಧಿಕಾರಿಗಳಾದ ಕೆ.ಎಂ. ಅಂಸು, ಟಿ.ಈ.ಉಸ್ಮಾನ್, ಕುಂಜ್ಹ ಮೊಹಮ್ಮದ್ ಮುಸ್ಲಿಯಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.