‘ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ’, ‘ಮೆಟೀರಿಯಲ್ ಸೈನ್ಸ್’ ಪ್ರವೇಶಾತಿ ಆರಂಭ

ಮಡಿಕೇರಿ ನ.9 : ಮಂಗಳೂರು ವಿಶ್ವ ವಿದ್ಯಾನಿಲಯದ ಮಂಗಳ ಗಂಗೋತ್ರಿಯಲ್ಲಿ ‘ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ’ ವಿಷಯ ಹಾಗೂ ‘ಮೆಟೀರಿಯಲ್ ಸೈನ್ಸ್’(ವಸ್ತು ವಿಜ್ಞಾನ) ವಿಷಯದ ಸ್ನಾತಕೋತ್ತರ ವಿಭಾಗಕ್ಕೆ ವಿದ್ಯಾರ್ಥಿಗಳ ಪ್ರವೇಶಾತಿ ಆರಂಭಗೊಂಡಿದ್ದು, ನ.21 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ವಿವಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕರು ಹಾಗೂ ಅಧ್ಯಕ್ಷರಾದ ಡಾ.ಡಿ.ಶಿವಲಿಂಗಯ್ಯ, ಅಗತ್ಯ ಮಾಹಿತಿಯ ಕೊರತೆಯ ಹಿನ್ನೆಲೆಯಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರವೇಶಾತಿಗೆ ವಿದ್ಯಾರ್ಥಿಗಳು ಮುಂದಾಗುತ್ತಿಲ್ಲ. ಆದರೆ, ಈ ವಿಷಯದಡಿ ಸ್ನಾತಕೋತ್ತರ ಪದವಿಯನ್ನು ಪಡೆದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆಯೆಂದು ತಿಳಿಸಿದರು.
ಈ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡವರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಾದ ಬ್ರಿಟೀಷ್ ಲೈಬ್ರೆರಿ, ಬೆಂಗಳೂರು, ಮುಂಬೈ, ಇನ್ಫೋಸಿಸ್, ಇನ್ಫ್ಲಿಬ್ನೆಟ್ ಸೆಂಟರ್ ಅಹಮದಾಬಾದ್, ಎಂಐಟಿ, ಕೆಎಂಸಿ ಮಣಿಪಾಲ್, ಆಸ್ಟ್ರೇಲಿಯಾ, ಸಿಂಗಾಪುರ, ಕೊಲ್ಲಿ ರಾಷ್ಟ್ರಗಳು, ಕೆನಡಾ ಮೊದಲಾದೆಡೆಗಳಲ್ಲಿ ಡಾಕ್ಯುಮೆಂಟೇಶನ್ ಅಧಿಕಾರಿಗಳಾಗಿ, ವೈಜ್ಞಾನಿಕ ಅಧಿಕಾರಿಗಳಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಗಳು ಕೆಲ ವಿಶ್ವವಿದ್ಯಾನಿಲಯಗಳಲ್ಲಿ ಸಹಾಯಕ ಗ್ರಂಥಪಾಲಕರು, ಉಪಗ್ರಂಥಪಾಲಕರು, ವಿಶ್ವವಿದ್ಯಾನಿಲಯದ ಗ್ರಂಥಪಾಲಕರು, ಕಾಲೇಜು ಗ್ರಂಥಪಾಲಕರು, ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಪ್ರಾಧ್ಯಾಪಕರು, ಕುಲಸಚಿವರು (ಆಡಳಿತ) ಮತ್ತು ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಎಂ.ಎಲ್.ಐ.ಎಸ್ಸಿ. ಸ್ನಾತಕೋತ್ತರ ಪದವಿ ಪಡೆದವರು ಯುಜಿಸಿಯ ಎನ್ಇಟಿ, ಎಸ್ಎಲ್ಇಟಿ, ಜೆಆರ್ ಪರೀಕ್ಷೆ ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆಂದು ಮಾಹಿತಿ ನೀಡಿದರು.
ಈ ವಿಭಾಗವು ಪ್ರಾರಂಭದಲ್ಲಿ ಉತ್ತಮ ಪ್ರವೇಶಾತಿಯನ್ನು ಹೊಂದಿತ್ತು. ಕ್ರಮೇಣ ವಿದ್ಯಾರ್ಥಿಗಳ ಪ್ರವೇಶಾತಿಯ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ. ಇದಕ್ಕೆ ಪ್ರಮುಖ ಕಾರಣ ವಿದ್ಯಾರ್ಥಿಗಳಿಗೆ ಈ ಕೋರ್ಸಿನ ಬಗ್ಗೆ ಅರಿವಿನ ಕೊರತೆ ಇರಬಹುದೆಂದು ಅಭಿಪ್ರಾಯಿಸಿ, ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನದ ಸ್ನಾತಕೋತ್ತರ ಅಧ್ಯಯನಕ್ಕೆ ಸೇರಲು ಬಯಸುವವರು ಯಾವುದೇ ವಿಷಯದಲ್ಲಿ ಪದವಿಯನ್ನು ಪಡೆದವರಾಗಿರುವುದು ಅವಶ್ಯವೆಂದು ಸ್ಪಷ್ಟಪಡಿಸಿದರು.
ಪ್ರಸ್ತುತ ಮಂಗಳೂರು ವಿವಿಯ ಮಂಗಳ ಗಂಗೋತ್ರಿಯಲ್ಲಿ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದಲ್ಲಿ 38 ಮಂದಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿದೆ. ಇದರಲ್ಲಿ ಸಾಮಾನ್ಯ ವರ್ಗಕ್ಕೆ 16, ಇತರೆ 10 ಮತ್ತು ಪಾವತಿ ವರ್ಗಕ್ಕೆ 12 ಸೀಟ್ಗಳು ಮೀಸಲಾಗಿದೆ. ಈ ಬಗೆ ಹೆಚ್ಚಿನ ಮಾಹಿತಿಗೆ ಮೊ.9448358314, 6366274222, 9449472724 ನ್ನು ಸಂಪರ್ಕಿಸಬಹುದೆಂದು ತಿಳಿಸಿದರು.
ಮಟೀರಿಯಲ್ ಸೈನ್ಸ್ ಪ್ರವೇಶಾತಿ- ಮಂಗಳೂರು ವಿವಿಯ ಮಂಗಳ ಗಂಗೋತ್ರಿಯ ಮೆಟೀರಿಯಲ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ.ಮಂಜುನಾಥ್ ಪಟ್ಟಾಭಿ ಅವರು ಮಾತನಾಡಿ, ವಿಜ್ಞಾನದ ಹಲವಾರು ಶಾಖೆಗಳಲ್ಲಿ ಮೆಟೀರಿಯಲ್ ಸೈನ್ಸ್ ಒಂದಾಗಿದೆ. ಹೀಗದ್ದೂ ಇಂದಿಗೂ ಸಾಕಷ್ಟು ವಿದ್ಯಾರ್ಥಿಗಳಿಗೆ ಈ ವಿಷಯದ ಬಗ್ಗೆ ಹೆಚ್ಚಿನ ಅರಿವಿಲ್ಲ. ಇದರಿಂದಾಗಿ ಮೆಟೀರಿಯಲ್ ಸೈನ್ಸ್ ಸ್ನಾತಕೋತ್ತರ ಪದವಿಗೆ ಪ್ರವೇಶಾತಿ ಕಡಿಮೆ ಇರುವುದಾಗಿ ಅಭಿಪ್ರಾಯಿಸಿ, ಭೌತಶಾಸ್ತ್ರವನ್ನು ಆಧರಿಸಿದ ಈ ಮೆಟೀರಿಯಲ್ ಸೈನ್ಸ್ ಎನ್ನುವುದು ಅಂತರಿಕ್ಷ ಯಾನ, ಮೊಬೈಲ್, ಆಟೋಮೋಬೈಲ್ಸ್ ಹೀಗೆ ವಿವಿಧ ಕ್ಷೇತ್ರಗಳಿಗೆ ಅನಿವಾರ್ಯವಾದ ವಿಚಾರವಾಗಿದ್ದು, ಇದರ ಅಧ್ಯಯನದಿಂದ ಸಾಕಷ್ಟು ಉದ್ಯೋಗಾವಕಾಶಗಳು ದೊರಕುತ್ತದೆಂದು ತಿಳಿಸಿದರು.
ವಸ್ತು ವಿಜ್ಞಾನ ಪದವೀಧÀರರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನಿಗಳಾಗಿ, ಪ್ರಾಧ್ಯಾಪಕರಾಗಿ, ಕೈಗಾರಿಕೋದ್ಯಮಿಗಳಾಗಿ ಹಾಗೂ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಲ್ಲದೆ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿರುತ್ತಾರೆ. ವಸ್ತು ವಿಜ್ಞಾನ ಪದವೀಧರರಿಗೆ ಉತ್ತಮ ಭವಿಷ್ಯವಿದೆ ಎನ್ನುವುದನ್ನು ಹಳೆಯ ವಿದ್ಯಾರ್ಥಿಗಳು ಸಾಬೀತುಪಡಿಸಿದ್ದಾರೆಂದು ತಿಳಿಸದ ಅವರು, ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ಜಾಲತಾಣ ಅಥವಾ ವಸ್ತುವಿಜ್ಞಾನ ವಿಭಾಗದ ಇಮೈಲ್ (manjupattabil@yahoo.com) ದೂರವಾಣಿ (9448260563) ಸಂಪರ್ಕಿಸಬಹುದೆಂದು ತಿಳಿಸಿದರು.
