ಕೆ.ಎಂ.ಎ.ಯಿಂದ ಡಾ. ಕುಂಜ್ಹಬ್ದುಲ್ಲಾ ಅವರಿಗೆ ಸನ್ಮಾನ

09/11/2020

ಪೊನ್ನಂಪೇಟೆ, ನ.9: ಜನತೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದ ಕೋವಿಡ್ ಕಾಲದಲ್ಲಿ ಸಾಟಿ ಇಲ್ಲದ ಸೇವೆ ನೀಡಿದ ಕೆಲವು ವೈದ್ಯರು ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಕೋವಿಡ್ ಕಾಲದಲ್ಲಿ ಮಾನವೀಯತೆಯ ಗುಣಗಳನ್ನು ಹೊಂದಿರುವ ಈ ವೈದ್ಯರ ಸೇವೆ ಅನನ್ಯ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷರಾದ ದುದ್ದಿಯಂಡ ಹೆಚ್.ಸೂಫಿ ಹಾಜಿ ಅವರು ಅಭಿಪ್ರಾಯಪಟ್ಟಿದ್ದಾರೆ.

ವಿರಾಜಪೇಟೆಯ ಕೆ.ಎಸ್.ಆರ್. ಟಿ.ಸಿ. ಬಸ್ ನಿಲ್ದಾಣದ ಸಮೀಪವಿರುವ ಉಡುಪಿ ಹೋಟೆಲ್ ನ ಮೇಲ್ಬಾಗದ ಸಭಾಂಗಣದಲ್ಲಿ ಜರುಗಿದ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.)ನ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ಕೋವಿಡ್-19ರ ಸಂಕಷ್ಟದ ಕಾಲದಲ್ಲಿ ನಿಸ್ವಾರ್ಥವಾಗಿ ಆರೋಗ್ಯ ಸೇವೆ ನೀಡಿರುವ ಮೂರ್ನಾಡಿನ ಜನಪ್ರೀಯ ವೈದ್ಯರೂ ಆಗಿರುವ ಕೆ.ಎಂ.ಎ. ಉಪಾಧ್ಯಕ್ಷರಾದ ಡಾ. ಜೋಯಿಪೆರ ಎ. ಕುಂಜ್ಹಬ್ದುಲ್ಲಾ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನ ಮಾಡುವ ಮೂಲಕ ಗೌರವಿಸಿ ಮಾತನಾಡಿದ ಅವರು, ವೈದ್ಯರೊಂದಿಗೆ ಆರೋಗ್ಯ ಸೇವೆಯಲ್ಲಿ ಕೈಜೋಡಿಸಿದ ದಾದಿಯರ, ಆಸ್ಪತ್ರೆ ಸಿಬ್ಬಂದಿಗಳ ಮತ್ತು ಆಶಾ ಕಾರ್ಯಕರ್ತರ ಸೇವೆಯು ಸ್ಮರಣೀಯ. ಇದನ್ನು ಜನತೆ ಎಂದಿಗೂ ಕೃತಜ್ಞತಾಪೂರ್ವಕವಾಗಿ ಸ್ಮರಿಸಬೇಕಿದೆ. ಇವರ ಸೇವೆಯ ಋಣ ಯಾರಿಂದಲೂ ತೀರಿಸಲು ಅಸಾಧ್ಯ ಎಂದು ನುಡಿದರು.

ಡಾ. ಕುಂಜ್ಹಬ್ದುಲ್ಲಾ ಅವರ ಸೇವೆ ನಿಜಕ್ಕೂ ಮೆಚ್ಚುವಂತದ್ದು. ಕೋವಿಡ್ ಕಾಲದಲ್ಲಿ ಕೊಡಗಿನ ಬಹುತೇಕ ಖಾಸಗಿ ಕ್ಲೀನಿಕ್ ಗಳು ಮುಚ್ಚಲ್ಪಟ್ಟಿದ್ದವು. ಇದರಿಂದ ಕೋರೋನಾವಲ್ಲದ ರೋಗಿಗಳಿಗೆ ಆರೋಗ್ಯ ಸೇವೆ ಕೈಗೆಟುಕದಂತಾಗಿತ್ತು. ಇಂಥ ಸಂದರ್ಭದಲ್ಲಿ ಡಾ. ಕುಂಜ್ಹಬ್ದುಲ್ಲಾ ಅವರು ತಮ್ಮ ಬಳಿ ಚಿಕಿತ್ಸೆ ಅರಸಿ ಬರುತ್ತಿದ್ದ ಎಲ್ಲ ಕೋವಿಡೇತರ ರೋಗಿಗಳಿಗೆ ಸ್ಪಂದಿಸಿದ್ದಾರೆ. ಈ ಕಾರಣದಿಂದ ಜಿಲ್ಲೆಯ ಮೂಲೆ ಮೂಲೆಗಳಿಂದಲೂ ಇವರ ಬಳಿಗೆ ರೋಗಿಗಳು ವಿಶ್ವಾಸದಿಂದ ಬರುತ್ತಿದ್ದರು. ಇವರು ನೀಡುತ್ತಿದ್ದ ಆರೋಗ್ಯ ಸೇವೆ ರೋಗಿಗಳಿಗೆ ಹೆಚ್ಚು ಮಾನಸಿಕ ಸ್ಥೈರ್ಯ ತುಂಬಲು ನೆರವಾಗಿದೆ. ತಮ್ಮ ವೈದ್ಯ ವೃತ್ತಿ ಧರ್ಮದ ಬದ್ಧತೆಯೊಂದಿಗೆ ಅನನ್ಯ ಸೇವೆ ಸಲ್ಲಿಸಿದ ಡಾ. ಕುಂಜ್ಹಬ್ದುಲ್ಲಾ ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದ ಡಿ.ಹೆಚ್. ಸೂಫಿ ಹಾಜಿ ಅವರು, ಇವರ ಸೇವೆ ಮುಂದೆಯೂ ಸಮಾಜಕ್ಕೆ ದೊರೆಯುವಂತಾಗಲಿ. ಮಾನವೀಯತೆ ಮತ್ತು ಮನುಷ್ಯತ್ವ ಗುಣ ಡಾ.ಕುಂಜ್ಹಬ್ದುಲ್ಲಾ ಅವರಿಗೆ ಮತ್ತಷ್ಟು ಪ್ರೇರಕವಾಗಲಿ ಎಂದು ಆಶಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಕುಂಜ್ಹಬ್ದುಲ್ಲಾ ಅವರು, ಒಬ್ಬ ವೈದ್ಯರಾಗಿ ಕೇವಲ ವೃತ್ತಿಧರ್ಮವನ್ನಷ್ಟೇ ಪಾಲಿಸಿದ್ದೇನೆ. ಆದರೆ ಚಿಕಿತ್ಸೆಗಾಗಿ ಭರವಸೆಯಿಟ್ಟು ಬರುವ ಯಾವುದೇ ರೋಗಿಗಳನ್ನು ಕೋವಿಡ್ ನೆಪ ಹೇಳಿ ವಾಪಸು ಕಳಿಸಲಿಲ್ಲ ಎಂಬ ಸಮಾಧಾನ ತಮಗಿದೆ. ಕೋವಿಡ್ ಕಾಲದ ಈ ಸೇವೆ ಹೆಚ್ಚು ತೃಪ್ತಿ ನೀಡಿದೆ ಎಂದರಲ್ಲದೆ, ಯಾವುದೇ ನಿರೀಕ್ಷೆಗಳಿಲ್ಲದೆ ಕೆಲಸ ಮಾಡುವವರನ್ನು ಗುರುತಿಸಿ ಸನ್ಮಾನಿಸಿದರೆ ಅದು ಮುಂದೆ ಅವರ ಸಾಮಾಜಿಕ ಹೊಣೆಗಾರಿಕೆಯನ್ನು ಮತ್ತಷ್ಟು ಹೆಚ್ಚಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಡಾ. ಕುಂಜ್ಹಬ್ದುಲ್ಲಾ ಅವರ ಕುರಿತು ಕೆ.ಎಂ.ಎ. ಪ್ರಧಾನ ಕಾರ್ಯದರ್ಶಿ ರಫೀಕ್ ತೂಚಮಕೇರಿ, ಪದಾಧಿಕಾರಿಗಳಾದ ಆಕ್ಕಳತಂಡ ಎಸ್. ಮೊಯಿದು, ಮಾಜಿ ಕಾರ್ಯದರ್ಶಿ ಪುದಿಯತ್ತಂಡ ಹೆಚ್. ಸಂಶುದ್ದೀನ್ ಮೊದಲಾದವರು ಮಾತನಾಡಿ ಅವರ ಆರೋಗ್ಯ ಸೇವೆಯನ್ನು ಇದೇ ಸಂದರ್ಭದಲ್ಲಿ ಶ್ಲಾಘಿಸಿದರು.

ಈ ಕಾರ್ಯಕ್ರಮದಲ್ಲಿ ಡಾ. ಕುಂಜ್ಹಬ್ದುಲ್ಲಾ ಅವರನ್ನು ಶಾಲು ಹೊದಿಸಿ, ಹಾರ ಹಾಕಿ, ಸ್ಮರಣಿಕೆ ಅರ್ಪಿಸಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಆಲೀರ ಎ. ಅಹಮದ್ ಹಾಜಿ(ಬೇಗೂರು), ಹಿರಿಯ ನಿರ್ದೇಶಕರಾದ, ನಿವೃತ್ತ ಉಪ ತಹಶೀಲ್ದಾರ್ ಚಿಮ್ಮಿಚೀರ ಎ.ಅಬ್ದುಲ್ಲಾ ಹಾಜಿ (ವಿರಾಜಪೇಟೆ), ಕೋಶಾಧಿಕಾರಿ ಹರಿಶ್ಚಂದ್ರ ಎ.ಹಂಸ(ಕೊಟ್ಟಮುಡಿ), ಪದಾಧಿಕಾರಿಗಳಾದ ಚಿಮ್ಮಿಚೀರ ಕೆ. ಇಬ್ರಾಹಿಂ(ಹಳ್ಳಿಗಟ್ಟು), ಪೊಯಕೆರ ಎಸ್. ಮೊಹಮ್ಮದ್ ರಫೀಕ್(ಐಮಂಗಲ), ಕುವೇಂಡ ವೈ. ಆಲಿ(ಕೊಟೋಳಿ), ಮಂಡೇಡ ಎ. ಮೊಯ್ದು(ಬೇಟೋಳಿ), ಕುಪ್ಪೋಡಂಡ ಅಬ್ದುಲ್ ರಶೀದ್(ಎಡಪಾಲ), ಮೀತಲತಂಡ ಎಂ. ಇಸ್ಮಾಯಿಲ್ (ಕೊಟೋಳಿ), ಪುದಿಯಾಣೆರ ಹನೀಫ್(ಚಾಮಿಯಾಲ), ಪುಡಿಯಂಡ ಹನೀಫ್(ದೇವಣೆಗೇರಿ) ಸೇರಿದಂತೆ ಸಂಸ್ಥೆಯ ಕೆಲ ಸದಸ್ಯರು ಪಾಲ್ಗೊಂಡಿದ್ದರು.