ಬೀದಿ ಬದಿ ವ್ಯಾಪಾರಿಗಳಿಗೆ ಕಿರುಸಾಲ ಸೌಲಭ್ಯ : ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚನೆ

09/11/2020

ಮಡಿಕೇರಿ ನ.9 : ಪ್ರಧಾನಮಂತ್ರಿ ಸ್ವ ನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಕಿರು ಸಾಲ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮವಹಿಸುವಂತೆ ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆತ್ಮ ನಿರ್ಭರ್ ನಿದಿಯು ಸರ್ಕಾರದ ಮಹಾತ್ವಾಂಕಾಕ್ಷೆ ಯೋಜನೆಯಾಗಿದ್ದು, ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶದ ಬೀದಿ ಬದಿ ವ್ಯಾಪಾರಿಗಳು ಕೋವಿಡ್-19 ಸಂದರ್ಭದಲ್ಲಿ ಸಂಕಷ್ಟ ಎದುರಿಸಿದ್ದಾರೆ ಎಂಬುದನ್ನು ಮನಗಂಡು, ಇವರಿಗೆ 10 ಸಾವಿರ ರೂ. ಕಿರು ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಈ ಕಿರುಸಾಲ ಸೌಲಭ್ಯ ತಲುಪಿಸುವಲ್ಲಿ ಕೊಡಗು ಜಿಲ್ಲೆ ಹಿಂದೆ ಉಳಿದಿದೆ. ಆದ್ದರಿಂದ ಆದಷ್ಟು ತ್ವರಿತವಾಗಿ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲೆಯಲ್ಲಿ 727 ಗುರಿಯಲ್ಲಿ 230 ಅರ್ಜಿಗಳು ಮಾತ್ರ ಬೀದಿ ಬದಿ ವ್ಯಾಪಾರಿಗಳಿಂದ ಸಲ್ಲಿಕೆಯಾಗಿದ್ದು, ಇದರಲ್ಲಿ 65 ಮಂದಿ ಬೀದಿ ಬದಿ ವ್ಯಾಪಾರಿಗಳಿಗೆ ಕಿರುಸಾಲ ಮಂಜೂರಾತಿ ದೊರೆತಿದೆ. ಉಳಿದಂತೆ 497 ಅರ್ಜಿಗಳು ಬರಬೇಕಿದೆ. ಆದ್ದರಿಂದ ಈ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಹೆಚ್ಚಿನ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಜಿಲ್ಲೆಯ ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ಮತ್ತು ಕುಶಾಲನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಗಳಲ್ಲಿ ಬೀದಿ ಬದಿ ವ್ಯಾಪಾರ ಮಾಡುತ್ತಿರುವ ಹೊರ ಜಿಲ್ಲೆಯವರೂ ಸಹ ಅರ್ಜಿ ಸಲ್ಲಿಸಬಹುದಾಗಿದೆ. ಆ ನಿಟ್ಟಿನಲ್ಲಿ ಬೀದಿ ಬದಿ ವ್ಯಾಪಾರ ಮಾಡುತ್ತಿರುವವರು ಹತ್ತಿರದ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಬೀದಿ ಬದಿ ವ್ಯಾಪಾರ ಮಾಡುತ್ತಿರುವವರು ಆಧಾರ್, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಭಾವಚಿತ್ರ, ಬ್ಯಾಂಕ್ ಪಾಸ್ ಪುಸ್ತಕ ಇವುಗಳ ಪ್ರತಿ ಸಲ್ಲಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ನಗರೋತ್ಥಾನ ಕಾರ್ಯಕ್ರಮಗಳು, ಸ್ವಚ್ಛ ಭಾರತ ಅಭಿಯಾನ, ಗೃಹ ಭಾಗ್ಯ ಯೋಜನೆ ಪ್ರಗತಿ, ವಸತಿ ಯೋಜನೆ ಅನುಷ್ಠಾನ ಹೀಗೆ ಹಲವು ಕಾರ್ಯಕ್ರಮಗಳ ಗುರಿ ಸಾಧಿಸುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಸಿ.ರಾಜು ಅವರು ನಗರ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹ, ವಾಣಿಜ್ಯ ಮಳಿಗೆಗಳ ಬಾಡಿಗೆ ಮತ್ತು ಬೋಗ್ಯದ ಆದಾಯ, ಅಂಗಡಿ ಮಳಿಗೆ ಬಾಡಿಗೆ ವಸೂಲಾತಿ, ಜಾಹೀರಾತು ಶುಲ್ಕ, ವ್ಯಾಪಾರ ಪರವಾನಗಿ ಮತ್ತಿತರ ಪ್ರಗತಿ ಸಾಧಿಸಬೇಕು ಎಂದರು.
ಕಲ್ಯಾಣ ಕಾರ್ಯಕ್ರಮಗಳನ್ನು ಅರ್ಹರಿಗೆ ತಲುಪಿಸಬೇಕು. 14 ನೇ ಮತ್ತು 15 ನೇ ಹಣಕಾಸು ಯೋಜನೆ, ಮಳೆ ಹಾನಿ ಕಾಮಗಾರಿಗಳು, ನಗರೋತ್ಥಾನ ಕಾಮಗಾರಿಗಳು ಅನುಷ್ಠಾನ ಹೀಗೆ ಹಲವು ಕಾರ್ಯಕ್ರಮಗಳನ್ನು ಪ್ರಗತಿ ಸಾಧಿಸುವಂತೆ ಸಿ.ರಾಜು ಸೂಚಿಸಿದರು.
ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸುವುದು ಸೇರಿದಂತೆ ನಗರ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮಾಸ್ಕ್‍ನ್ನು ಕಡ್ಡಾಯವಾಗಿ ಧರಿಸುತ್ತಿದ್ದಾರೆಯೇ ಎಂಬುದನ್ನು ಗಮನಿಸಬೇಕು. ಈ ಬಗ್ಗೆ ಅರಿವು ಮೂಡಿಸಬೇಕು ಎಂದು ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರು ತಿಳಿಸಿದರು.
ಪೌರಾಯುಕ್ತರಾದ ಎಸ್.ವಿ.ರಾಮದಾಸ್, ಪ.ಪಂ. ಮುಖ್ಯಾಧಿಕಾರಿಗಳಾದ ನಾಚಪ್ಪ(ಸೋಮವಾರಪೇಟೆ), ಶ್ರೀಧರ್(ವಿರಾಜಪೇಟೆ), ಸುಜಯ್ ಕುಮಾರ್(ಕುಶಾಲನಗರ) ಅವರು ತಮ್ಮ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳ ಪ್ರಗತಿ ಸಂಬಂಧಿಸಿದಂತೆ ಮಾಹಿತಿ ನೀಡಿದರು.
ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಎಂ.ಎಸ್.ರಾಜೇಂದ್ರ ಕುಮಾರ್, ನಟರಾಜು, ಹೇಮಂತ್ ಕುಮಾರ್, ವನಿತಾ, ನಾಗರಾಜು, ಶೈಲ, ಮನೋಜ್ ಕುಮಾರ್, ಹರಿಣಿ, ಸಿದ್ದೇಶ್ ಇತರರು ಹಲವು ಮಾಹಿತಿ ನೀಡಿದರು.