ಸೋಮವಾರಪೇಟೆಯಲ್ಲಿ ಜ್ಞಾನತಾಣ ಕಾರ್ಯಕ್ರಮ : ಗ್ರಾಮಭಿವೃದ್ಧಿ ಯೋಜನೆಯ ಸದಸ್ಯರ ಮಕ್ಕಳಿಗೆ ಸೌಲಭ್ಯ : ಲೋಕೇಶ್ವರಿ ಗೋಪಾಲ್ ಶ್ಲಾಘನೆ

November 9, 2020

ಸೋಮವಾರಪೇಟೆ ನ.9 : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮೀಣಾಭಿವೃದ್ಧಿಯ ಕನಸು ಸಾಕಾರಗೊಳ್ಳುತಿದೆ ಎಂದು ಕೊಡಗು ಜಿಲ್ಲಾ ಪಂಚಾಯ್ತ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪಟ್ಟಣದ ಯೋಜನಾ ಕಛೇರಿ ಸಭಾಂಗಣದಲ್ಲಿ ಸೋಮವಾರ ಆಯೊಜಿಸಿದ್ದ ಜ್ಞಾನತಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೊರೋನಾ ಸಂಕಷ್ಟ ಕಾಲದಲ್ಲಿ ಶಾಲಾ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳು ಆನ್‍ಲೈನ್ ತರಗತಿಗಳಿಗೆ ಮೊರೆಹೊಗಿದ್ದಾರೆ. ಆದರೆ ಮನೆಯಲ್ಲಿರುವ 2-3 ವಿದ್ಯಾರ್ಥಿಗಳಿಗೆ ಸ್ಮಾರ್ಟ್‍ಫೋನ್ ಕೊಡಿಸಲಾಗದೆ ಪೋಷಕರು ಪರದಾಡುವಂತಾಗಿದೆ. ಗ್ರಾಮೀಣ ಭಾಗದಲ್ಲಿ ನೆಟ್ಟ್‍ವರ್ಕ್ ಇಲ್ಲದೆ ಆನ್‍ಲೈನ್ ತರಗತಿಗಳಲ್ಲಿ ಪಾಲ್ಗೊಳ್ಳಲೂ ಕಷ್ಟವಾಗುತ್ತಿದೆ ಎಂದರು. ಗ್ರಾಮಭಿವೃದ್ಧಿ ಯೋಜನೆಯ ಸದಸ್ಯರ ಮಕ್ಕಳಿಗೆ ಸವಲತ್ತು ನೀಡುತ್ತಿರುವುದು ಶ್ಘಾಘನೀಯ ವೆಂದರು. ಯೋಜನೆಯ ಮೂಲಕ ಪಡೆದ ಸಾಲವನ್ನು ಸದುಪಯೋಗಪಡಿಸಿಕೊಳ್ಳುವುದರೊಂದಿಗೆ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಬೇಕು ಎಂದರು.
ಜ್ಞಾನತಾಣ ಯೋಜನೆಯ ಕರಪತ್ರ ಬಿಡುಗಡೆಗೊಳಿಸಿದ ತಾಲ್ಲೂಕು ಪಂಚಾಯ್ತ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಮಾತನಾಡಿ, ರಾಜ್ಯದಲ್ಲಿ ಗ್ರಾಮೀಣ ಅಭಿವೃದ್ಧಿಗೆ ಹೊಸ ಆಯಾಮ ದೊರಕಿಸಿಕೊಟ್ಟವರು ಶ್ರೀ ವಿರೇಂದ್ರ ಹೆಗ್ಗಡೆಯವರು ಎಂದು ಶ್ಘಾಘಿಸಿದರು. ಬದ್ಧತೆ ಇರುವುದರಿಂದ ಹೊಸ ಹೊಸ ಆಲೋಚನೆಗಳು ಬರುತ್ತದೆ ಗ್ರಾಮೀಣಾಭಿವೃದ್ಧಿ, ಮದ್ಯವರ್ಜನೆ ಯೋಜನೆಗಳು ಹೆಗ್ಗಡೆಯವರ ಕನಸಿನ ಕೂಸಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮೀಣಾಭಿವೃದ್ಧಿಯೋಜನೆಯ ಕೊಡಗು ಜಿಲ್ಲಾ ನಿದೇರ್ಶಕರಾದ ಡಾ.ಎ.ಯೋಗೇಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ನಳಿನಿಗಣೇಶ್, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಎಸ್.ಮಹೇಶ್, ಜಿಲ್ಲಾ ಜನ ಜಾಗೃತಿ ವೇದಿಕೆಯ ಸದಸ್ಯ ಎಸ್.ಆರ್.ಸೋಮೇಶ್, ತಾಲ್ಲೂಕು ಯೋಜನಾಧಿಕಾರಿ ವೈ. ಪ್ರಕಾಶ್, ಪತ್ರಕರ್ತ ಎಸ್.ಎ ಮುರಳಿಧರ್ ಮತ್ತಿತರರು ಇದ್ದರು.
ಈ ಸಂಧರ್ಭ ತಾಲ್ಲೂಕಿನ 5ರಿಂದ 10 ನೇ ತರಗತಿ ವರೆಗಿನ 110 ವಿದ್ಯಾರ್ಥಿಗಳಿಗೆ ಟ್ಯಾಬ್ ಹಾಗು ಪದವಿ ವ್ಯಾಸಾಂಗ ಮಾಡುತ್ತಿರುವ 60 ವಿದ್ಯಾರ್ಥಿಗಳಿಗೆ ಸಹಾಯಧನದಲ್ಲಿ ಲ್ಯಾಪ್‍ಟಾಪ್ ವಿತರಣೆಗೆ ಚಾಲನೆ ನೀಡಲಾಯಿತು. ಗ್ರಾಮಾಭಿವೃದ್ಧಿ ಯೋಜನೆಯ ಪ್ರಮುಖ ರವಿಪ್ರಸಾದ್ ಆಶಾ ಜೆ ಕಾರ್ಯಕ್ರಮ ನಿರೂಪಿಸಿ, ವರಲಕ್ಷ್ಮೀ ವಂದಿಸಿದರು.

error: Content is protected !!