ಬೈಕ್ನಲ್ಲಿ ತೆರಳುತ್ತಿದ್ದವರ ಮೇಲೆ ಕಾಡಾನೆ ದಾಳಿ : ಶ್ರೀಮಂಗಲದಲ್ಲಿ ಬೈಕ್ ಜಖಂ, ಸವಾರರು ಪಾರು

ಮಡಿಕೇರಿ ನ.10 : ಬೈಕ್ನಲ್ಲಿ ತೆರಳುತ್ತಿದ್ದವರ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ದಕ್ಷಿಣ ಕೊಡಗಿನ ಶ್ರೀಮಂಗಲ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದ್ದು, ಸವಾರರು ಬೈಕ್ ಬಿಟ್ಟು ಪರಾರಿಯಾದ ಹಿನ್ನೆಲೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶ್ರೀಮಂಗಲ ಸಮೀಪದ ಕುರ್ಚಿ ಗ್ರಾಮದ ಬೆಳೆಗಾರ ಅಲ್ಲೇಟಿರ ವಿಜು ಮಾಚಯ್ಯ ಅವರು ಮಂಗಳವಾರ ಬೆಳಗ್ಗೆ 7.30ರ ಸುಮಾರಿಗೆ ತಮ್ಮ ಬೈಕ್ನಲ್ಲಿ ಶ್ರೀಮಂಗಲದಿಂದ ಕಾರ್ಮಿಕನೊಬ್ಬನನ್ನು ತೋಟದ ಕೆಲಸಕ್ಕೆಂದು ಕುರ್ಚಿ ಗ್ರಾಮಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ಶ್ರೀಮಂಗಲ-ಕುರ್ಚಿ ಮುಖ್ಯ ರಸ್ತೆಯಿಂದ ತಮ್ಮ ತೋಟಕ್ಕೆ ಹೋಗುವ ತೆರಳುವ ರಸ್ತೆಯಲ್ಲಿ ತೋಟದಿಂದ ದಿಢೀರಾಗಿ ಕಾಡಾನೆ ಎದುರಾಗಿದೆ.
ಕಾಡಾನೆ ತಮ್ಮತ್ತಲೇ ಬರುತ್ತಿರುವುದನ್ನು ಗಮನಿಸಿದ ಬೈಕ್ ಸವಾರರು ವಾಹನವನ್ನು ಅಲ್ಲೇ ಬಿಟ್ಟು ಸುಮಾರು 100 ಅಡಿಗಳಷ್ಟು ದೂರ ಓಡಿದ್ದಾರೆ. ಅಟ್ಟಿಸಿಕೊಂಡು ಬಂದ ಕಾಡಾನೆ ಬೈಕ್ನ ಮೇಲೆ ಎರಗಿದ್ದು, ಬೈಕನ್ನು ಹಾನಿ ಮಾಡಿದೆ.
ಸ್ಥಳಕ್ಕೆ ಶ್ರೀಮಂಗಲ ಆರ್.ಎಫ್.ಓ. ವೀರೇಂದ್ರ ಮರಿಬಸಣ್ಣವರ್ ಮತ್ತು ಸಿಬ್ಬಂದಿಗಳು ತೆರಳಿ ಕಾಡಾನೆಯನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ಕೈಗೊಂಡಿದ್ದಾರೆ.
