ನಿವೇಶನ ಮತ್ತು ವಸತಿಗಾಗಿ ಒತ್ತಾಯ : ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಎಐಟಿಯುಸಿ ಸಂಘಟನೆ

10/11/2020

ಮಡಿಕೇರಿ ನ.10 : ಕೊಡಗು ಜಿಲ್ಲೆಯ ವಸತಿ ಹೀನ ಮತ್ತು ನಿವೇಶನ ರಹಿತರ ವಸತಿ ಹಕ್ಕಿಗಾಗಿ ಭಾರತ ಕಮ್ಯೂನಿಸ್ಟ್ ಪಾರ್ಟಿ (ಸಿಪಿಐ) ಹಾಗೂ ಎಐಟಿಯುಸಿ ಸಂಘಟನೆ ಆಗ್ರಹಿಸಿದೆ.
ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ಸಂಘಟನೆಯ ಪ್ರಮುಖರು ಕಳೆದ ಅನೇಕ ವರ್ಷಗಳಿಂದ ನಿವೇಶನಕ್ಕಾಗಿ ಒತ್ತಾಯಿಸಿ ನಿರಂತರ ಹೋರಾಟವನ್ನು ನಡೆಸುತ್ತಾ ಬಂದಿದ್ದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ.ಸೋಮಪ್ಪ, ಕೊಡಗು ಜಿಲ್ಲೆಯಲ್ಲಿ ಆದಿವಾಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಾವಿರಾರು ಕುಟುಂಬಗಳು ನಿವೇಶನ ಮತ್ತು ವಸತಿ ಇಲ್ಲದೆ ತೋಟದ ಲೈನ್ ಮನೆಗಳಲ್ಲಿ, ನದಿ ತೀರಗಳಲ್ಲಿ, ಬಾಡಿಗೆ ಮನೆಗಳಲ್ಲಿ ಮತ್ತು ಪೈಸಾರಿ ಜಾಗಗಳಲ್ಲಿ ವಾಸಿಸುತ್ತಾ ಅತಂತ್ರ ಪರಿಸ್ಥಿತಿಯಲ್ಲಿ ಪರದಾಡುತ್ತಿದ್ದಾರೆ. ಆದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬಡವರ ಸಂಕಷ್ಟವನ್ನು ಅರ್ಥಮಾಡಿಕೊಳ್ಳುತ್ತಿಲ್ಲವೆಂದು ಆರೋಪಿಸಿದರು.
ಕಳೆದ ಹದಿನೈದು ವರ್ಷಗಳಿಂದ ವಿವಿಧ ಹೋರಾಟ ಸಮಿತಿಗಳು ವಸತಿ ರಹಿತರಿಗೆ ಸೂರು ಕಲ್ಪಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮೊರೆ ಇಟ್ಟಿವೆ. ಆದರೆ ಇಂದು ಜಿಲ್ಲಾಧಿಕಾರಿಗಳು ತಮಗೆ ನಿವೇಶನದ ಬೇಡಿಕೆಯ ಅರ್ಜಿಗಳು ಬಂದಿಲ್ಲ ಎಂದು ಹೇಳಿದ್ದು, ಈ ಹೇಳಿಕೆ ನಮಗೆ ತೃಪ್ತಿ ತಂದಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಂದಿನ ಒಂದು ತಿಂಗಳೊಳಗೆ ಈ ಬಗ್ಗೆ ಚರ್ಚಿಸಿ ಮಾಹಿತಿ ನೀಡುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದು, ಇದು ಈಡೇರದಿದ್ದಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಸೋಮಪ್ಪ ಎಚ್ಚರಿಕೆ ನೀಡಿದರು.
ಕೊಡಗು ಜಿಲ್ಲೆಯಲ್ಲಿರುವ ಎಲ್ಲಾ ವಸತಿ ಹೀನರ ಸಮೀಕ್ಷೆ ನಡೆಸಿ ಪ್ರತಿಯೊಂದು ಬಡ ಕುಟುಂಬಕ್ಕೂ ಸೂರು ಕಲ್ಪಿಸಲು ಕ್ರಮ ಕೈಗೊಳ್ಳಬೇಕು, ನದಿ ತೀರದಲ್ಲಿ ವಾಸಿಸುತ್ತಿರುವ ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಿ ಪುನರ್ವಸತಿ ಕಲ್ಪಿಸಬೇಕು, ನಿವೇಶನ ರಹಿತರಿಂದ ಅರ್ಜಿ ಪಡೆಯುವ ಪ್ರಕ್ರಿಯೆಯನ್ನು ಗ್ರಾ.ಪಂ ಗಳು ಸ್ಥಗಿತಗೊಳಿಸಿದ್ದು, ಅರ್ಜಿ ಸ್ವೀಕಾರವನ್ನು ಪುನರ್ ಆರಂಭಿಸಬೇಕು ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ವಸತಿ ಹೀನರ ಬಗ್ಗೆ ವಿಶೇಷ ಕಾಳಜಿ ತೋರಬೇಕೆಂದು ಅವರು ಒತ್ತಾಯಿಸಿದರು.
ಸಿಪಿಐ ಕಾರ್ಯದರ್ಶಿ ಕೆ.ವಿ.ಸುನಿಲ್, ವಿರಾಜಪೇಟೆ ಪ.ಪಂ ಸದಸ್ಯ ರಜನಿಕಾಂತ್, ಸೂರಿಗಾಗಿ ಹೋರಾಟ ಸಮಿತಿಯ ಅಧ್ಯಕ್ಷ ಹೆಚ್.ಬಿ.ಅಣ್ಣಪ್ಪ, ಕಾರ್ಯದರ್ಶಿ ಸಿಂಧು, ಉಪ ಕಾರ್ಯದರ್ಶಿ ಶಬಾನ, ಸರೋಜ, ಜಯ, ಭವ್ಯ, ಕೃಷ್ಣ, ಕುಮಾರ್, ಸುಬ್ರಮಣಿ, ಆದಿ ದ್ರಾವಿಡ ಸಂಘಟನೆಯ ಮಡಿಕೇರಿ ಅಧ್ಯಕ್ಷ ರವಿ ಪಾಪು ಮತ್ತಿತರರು ಈ ಸಂದರ್ಭ ಹಾಜರಿದ್ದರು.