ಶನಿವಾರಸಂತೆಯಲ್ಲಿ ಕಂದಾಯ ಪರಿವೀಕ್ಷಕರ ಕೊರತೆ : ಸೂಕ್ತ ಕ್ರಮಕ್ಕೆ ಕರವೇ ಒತ್ತಾಯ

10/11/2020

ಮಡಿಕೇರಿ ನ.10 : ಸೋಮವಾರಪೇಟೆ ತಾಲ್ಲೂಕು ಶನಿವಾರಸಂತೆ ಹೋಬಳಿಯ ಕಂದಾಯ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಂದಾಯ ಪರಿವೀಕ್ಷಕರು ಬಡ್ತಿ ಪಡೆದು ತಿಂಗಳುಗಳೇ ಕಳೆದರೂ ನೂತನ ಅಧಿಕಾರಿಯನ್ನು ನೇಮಿಸಿಲ್ಲವೆಂದು ಸೋಮವಾರಪೇಟೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೇದಿಕೆಯ ತಾಲ್ಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಮಾತನಾಡಿ ಶನಿವಾರಸಂತೆ ಹೋಬಳಿಯಲ್ಲಿ ರೈತರು ಹಾಗೂ ಕೂಲಿ ಕರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅರ್ಜಿ ವಿಲೇವಾರಿ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲವೆಂದು ಆರೋಪಿಸಿದರು.
ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಕಂದಾಯ ಪರಿವೀಕ್ಷಕರಾದ ನಂದಕುಮಾರ್ ಅವರು ಬಡ್ತಿ ಹೊಂದಿ ತಿಂಗಳುಗಳೇ ಕಳೆದರೂ ಕಂದಾಯ ಇಲಾಖೆಗೆ ನೂತನ ಅಧಿಕಾರಿಗಳನ್ನು ನೇಮಿಸಲು ಸರ್ಕಾರ ಮುಂದಾಗಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಸೋಮವಾರಪೇಟೆ ತಹಶೀಲ್ದಾರರ ಗಮನ ಸೆಳೆಯಲಾಗುವುದು. ಮುಂದಿನ ಹದಿನೈದು ದಿನಗಳೊಳಗೆ ನೂತನ ಕಂದಾಯ ಪರಿವೀಕ್ಷಕರನ್ನು ನೇಮಿಸದಿದ್ದಲ್ಲಿ ಕರವೇ ವತಿಯಿಂದ ಶನಿವಾರಸಂತೆ ಕಂದಾಯ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.