ಬೆಳೆ ಸಮೀಕ್ಷೆಗೆ ಆಕ್ಷೇಪಣೆ ಸಲ್ಲಿಸಲು ಬೆಳೆ ದರ್ಶಕ್ ಆಪ್‍ನಲ್ಲಿ ಅವಕಾಶ

10/11/2020

ಮಡಿಕೇರಿ ನ.10 : ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ತಂತ್ರಾಂಶದ ಮೂಲಕ ಸಂಗ್ರಹಿಸಲಾದ ಬೆಳೆ ಮಾಹಿತಿಯನ್ನು ಗ್ರಾಮ ಪಂಚಾಯತ್ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರದರ್ಶಿಸಲಾಗಿದ್ದು, ಈ ಕುರಿತು ರೈತರು ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ರೈತರು ಬೆಳೆ ಮಾಹಿತಿ, ವಿಸ್ತೀರ್ಣದ ಮಾಹಿತಿ ಕುರಿತು ಬೆಳೆ ದರ್ಶಕ್ ಮೊಬೈಲ್ ಆಪ್ ಮೂಲಕ ಅಥವಾ ಬೆಳೆ ಸಮೀಕ್ಷೆ ತಂತ್ರಾಂಶದ ಮೂಲಕ 10 ದಿನಗಳ ಒಳಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಬೆಳೆ ಸಮೀಕ್ಷೆ ದತ್ತಾಂಶವನ್ನು ಆಧರಿಸಿ ಮುಂದಿನ ದಿನಗಳಲ್ಲಿ ಬೆಳೆ ವಿಮೆಗೆ ಸಂಬಂಧಿಸಿದ ಮಿಸ್‍ಮ್ಯಾಚ್ ಪ್ರಕರಣಗಳ ಇತ್ಯರ್ಥ, ಬೆಂಬಲ-ಬೆಲೆಯಡಿ ರೈತರು ಮಾರಾಟ ಮಾಡಲು, ನೇರ ನಗದು ವರ್ಗಾವಣೆ ಹಾಗೂ ಇತರೆ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಮರ್ಪಕವಾಗಿ ಬಳಕೆ ಮಾಡುವುದರಿಂದ ರೈತರು ಬೆಳೆ ಸಮೀಕ್ಷೆಯಿಂದ ವಂಚಿತರಾಗದೇ, ತಾವು ಬೆಳೆದ ಬೆಳೆ ಹಾಗೂ ಬೆಳೆ ಸಮೀಕ್ಷೆಯಲ್ಲಿ ದಾಖಲಾದ ಬೆಳೆಯು ಒಂದೇ ಇರುವ ಕುರಿತು ಬೆಳೆ ದರ್ಶಕ ಮೊಬೈಲ್ ಆಪ್ ಮೂಲಕ ಖಾತರಿ ಪಡಿಸಿಕೊಳ್ಳಬೇಕು.
ಒಂದು ವೇಳೆ ಭಿನ್ನವಾಗಿದ್ದಲ್ಲಿ ಆಕ್ಷೇಪಣೆಗಳನ್ನು ಹತ್ತು ದಿನಗಳೊಳಗೆ ಸಲ್ಲಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗೆ ರೈತ ಸಂಪರ್ಕ ಕೇಂದ್ರ, ನಾಡ ಕಚೇರಿ, ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.