ಬಾಳೆಗೊನೆಯೊಂದಿಗೆ ಬೀಟೆ ಮರ ಅಕ್ರಮ ಸಾಗಾಟ : ಮಾಕುಟ್ಟದಲ್ಲಿ ಮಾಲು ವಶ

10/11/2020

ಮಡಿಕೇರಿ ನ.10 : ಬಾಳೆಗೊನೆ ಸಾಗಿಸುವ ನೆಪದಲ್ಲಿ ಬೀಟೆ ಮರದ ದಿಮ್ಮಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ವಿರಾಜಪೇಟೆ ಅರಣ್ಯ ಇಲಾಖೆ, ವಾಹನ ಸಹಿತ ಬೀಟೆ ಮರವನ್ನು ವಶಕ್ಕೆ ಪಡೆದಿದ್ದಾರೆ. 2 ಲಕ್ಷ ರೂ. ಮೌಲ್ಯದ ಬೀಟೆ ಮರ ಮತ್ತು ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು, ಚಾಲಕ ಪರಾರಿಯಾಗಿದ್ದಾನೆ.
ಹುಣುಸೂರಿನಿಂದ ಮಹೀಂದ್ರ ಬೊಲೇರೊ ಪಿಕ್‍ಅಪ್ ವಾಹನದಲ್ಲಿ(ಕೆಎ-45,ಎ-2219) ನೇಂದ್ರ ಬಾಳೆ ಗೊನೆಯನ್ನು ಮಾಕುಟ್ಟ ಚೆಕ್ ಪೋಸ್ಟ್ ಮೂಲಕ ಕೇರಳಕ್ಕೆ ಸಾಗಿಸಲಾಗುತ್ತಿತ್ತು. ಸೋಮವಾರ ರಾತ್ರಿ ಮಾಕುಟ್ಟ ಅರಣ್ಯ ತಪಾಸಣೆ ಕೇಂದ್ರ ಬಳಿ ಬಂದ ವಾಹನವನ್ನು ಅರಣ್ಯ ಸಿಬ್ಬಂದಿಗಳು ತಪಾಸಣೆಗೆ ಒಳಪಡಿಸಿದರು. ಈ ಸಂದರ್ಭ ಯಾರಿಗೂ ಸಂಶಯಬಾರದಂತೆ ಮೇಲಿನ ಭಾಗದಲ್ಲಿ ನೇಂದ್ರ ಬಾಳೆಹಣ್ಣಿನ ಗೊನೆಗಳನ್ನು ಜೋಡಿಸಿ ಕೆಳಭಾಗದಲ್ಲಿ ಬೀಟಿ ಮರದ 6 ದಿಮ್ಮಿಗಳಿಟ್ಟಿರುವುದು ಪ್ತತೆಯಾಗಿದೆ. ಈ ಸಂದರ್ಭ ಕತ್ತಲೆಯಲ್ಲಿ ವಾಹನ ಚಾಲಕ ಪರಾರಿಯಾಗಿದ್ದಾನೆ. ವಶಕ್ಕೆ ಪಡೆಯಲಾದ ಸ್ವತ್ತುಗಳ ಮೌಲ್ಯ ಅಂದಾಜು 2 ಲಕ್ಷ ರೂ.ಗಳಾಗಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಅರಣ್ಯ ಇಲಾಖೆ ವಾಹನ ಮತ್ತು ಬೀಟಿ ಮರದ ದಿಮ್ಮಿಗಳನ್ನು ವಶಕ್ಕೆ ಪಡೆದಿದ್ದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ತಪಾಸಣೆ ವೇಳೆಯಲ್ಲಿ ವಲಯ ಅರಣ್ಯಧಿಕಾರಿಗಳಾದ ಸುಹಾನ ಹರೀಶ್ ಅತ್ತಾವರ, ಸಹಾಯಕ ವಲಯ ಅರಣ್ಯಾಧಿಕಾರಿ ಮೊಹಮ್ಮದ್ ಹನೀಫ್, ಅರಣ್ಯ ವೀಕ್ಷಕರಾದ ಐ.ಕೆ.ಗಣಪತಿ ಮತ್ತು ಬಿ.ಎಲ್.ರಾಘವೇಂದ್ರ ಅವರುಗಳು ಹಾಜರಿದ್ದರು.