ಬೆಂಗಳೂರಿನಲ್ಲಿ ಅಗ್ನಿ ಅವಘಡ : ಕೆಮಿಕಲ್ ಫ್ಯಾಕ್ಟರಿ ಸ್ಫೋಟ

11/11/2020

ಬೆಂಗಳೂರು ನ. 11 : ಬೆಂಗಳೂರಿನ ಬಾಪೂಜಿ ನಗರದಲ್ಲಿರುವ ರೇಖಾ ಕೆಮಿಕಲ್ ಫ್ಯಾಕ್ಟರಿಯಲ್ಲಿ ಭಾರೀ ಬೆಂಕಿ ದುರಂತ ಸಂಭವಿಸಿದೆ. ಬಾಪೂಜಿನಗರದ ಗುಡ್ಡದಹಳ್ಳಿ ಬಳಿ ಇರುವ ಕೆಮಿಕಲ್ ಫ್ಯಾಕ್ಟರಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಮನೆಗಳಿರುವ ಪ್ರದೇಶದ ಮಧ್ಯೆ ಇರುವ ಸಣ್ಣ ಫ್ಯಾಕ್ಟರಿ ಇದಾಗಿದ್ದು, ಇಲ್ಲಿ ಸ್ಥಳೀಯವಾಗಿ ಸ್ಯಾನಿಟೈಸರ್ ಮತ್ತು ಪೇಂಟ್ ರಿಮೂವ್ ಮಾಡುವ ಕೆಮಿಕಲ್ ತಯಾರಿಸಲಾಗುತ್ತಿತ್ತು. ಸ್ಫೋಟಗೊಂಡ ಸ್ಥಳದಲ್ಲಿ ಇನ್ನೂ ಬೆಂಕಿಯ ಅಬ್ಬರ ಕಡಿಮೆಯಾಗಿಲ್ಲ. ಬೆಂಕಿ ಹೆಚ್ಚಾಗುತ್ತಿದ್ದಂತೆ ಫ್ಯಾಕ್ಟರಿಯ ಒಳಗಿರುವ ಕೆಮಿಕಲ್ ಕ್ಯಾನ್​ಗಳು ಸ್ಫೋಟಗೊಳ್ಳುತ್ತಲೇ ಇವೆ. ಆಕಾಶದೆತ್ತರಕ್ಕೆ ಹರಡುತ್ತಿರುವ ಬೆಂಕಿಯನ್ನು ಕಂಡು ಅಗ್ನಿಶಾಮಕದಳದವರು ಕೂಡ ಕಂಗೆಟ್ಟಿದ್ದಾರೆ.

ಸ್ಯಾನಿಟೈಸರ್ ಹಾಗೂ ತಿನ್ನರ್ ತಯಾರಿಕಾ ಕಂಪೆನಿ ಸ್ಫೋಟಗೊಂಡಿದೆ. ಲೋಕಲ್ ಆಗಿ ಸ್ಯಾನಿಟೈಸರ್ ಹಾಗೂ ಪೈಂಟ್ ರಿಮೂವಲ್ ಕೆಮಿಕಲ್ ಅನ್ನು ತಯಾರಿಸುತ್ತಿದ್ದ ಕಂಪನಿ ಇದಾಗಿದ್ದು, ಈ ಘಟನೆ ನಡೆಯುತ್ತಿದ್ದಂತೆ ಮಾಲೀಕ ನಾಪತ್ತೆಯಾಗಿದ್ದಾರೆ. ಸ್ಯಾನಿಟೈಸರ್ ಮತ್ತು ಹ್ಯಾಂಡ್ ವಾಶ್ ಗೆ ಬಳಸುವ ಕೆಮಿಕಲ್ ಬ್ಯಾರಲ್ ಸ್ಫೋಟಗೊಂಡು ಈ ದುರಂತ ಸಂಭವಿಸಿದೆ. ಈ ಘಟನೆ ನಡೆದಾಗ ರೇಖಾ ಕೆಮಿಕಲ್ಸ್​ ಫ್ಯಾಕ್ಟರಿಯಲ್ಲಿ ಪೇಂಟಿಂಗ್​ಗೆ ಬಳಸುವ 1800 ಕ್ಯಾನ್ ಇತ್ತು. ಆ ಕ್ಯಾನ್​ಗಳು ಒಂದಕ್ಕೊಂದು ಸ್ಪೋಟಗೊಂಡು ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಈ ಘಟನೆಯ ಹಿಂದಿನ ನಿಖರ ಕಾರಣ ತನಿಖೆ ನಂತರ ಸ್ಪಷ್ಟವಾಗಲಿದೆ.