ಕಾಳಸಂತೆಯಲ್ಲಿ ಕೊಡವ ಲಾಂಛನ ಹೊಂದಿರುವ ಮಾಸ್ಕ್ ಮಾರಾಟ : ಕ್ರಮಕ್ಕೆ ಅ.ಕೊ.ಸ. ಯೂತ್ ವಿಂಗ್ ಒತ್ತಾಯ

11/11/2020

ಮಡಿಕೇರಿ ನ. 11 : ದೇಶದಲ್ಲಿ ಮಾಸ್ಕ್ ಬಳಕೆ ಖಡ್ಡಾಯವಾಗಿದ್ದು, ಇದರ ಹಿಂದೆಯೇ ವಿವಿಧ ವಿನ್ಯಾಸದಲ್ಲಿ ಮಾಸ್ಕಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಇದೀಗ ಕೊಡವ ಲಾಂಛನ (ಸಿಂಬಲ್) ಹೊಂದಿರುವ ಮಾಸ್ಕ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದು, ಇದು ಜನಾಂಗಕ್ಕೆ ಬೇಸರ ತಂದಿದೆ. ಕೂಡಲೇ ಇದನ್ನು ವಾಪಾಸ್ಸು ಪಡೆಯದಿದ್ದರೆ ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಎಚ್ಚರಿಕೆ ನೀಡಿದೆ.

ಈ ಕುರಿತು ವಿರಾಜಪೇಟೆ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಮಾಜದ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ, ಕೊಡವರ ಉಡುಗೆ-ತೊಡುಗೆ, ಆಭರಣ ಸೇರಿದಂತೆ ಕೊಡವ ಹಾಡು, ಕುಣಿತ ಎಲ್ಲಾವು ಅನುಕರಣೆಯಾಗುತ್ತದೆ. ಇದೀಗ ಕೊಡವ ಜನಾಂಗದ ಸಾಂಪ್ರದಾಯಿಕ ಲಾಂಛನವನ್ನು ಮಾಸ್ಕ್‍ನಲ್ಲಿ ಬಳಕೆ ಮಾಡುವ ಮೂಲಕ ಇದನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈಗಾಗಲೇ ಹಲವಾರು ಅನ್ಯಧರ್ಮಿಯರು ಸೇರಿದಂತೆ ಕೊಡವೇತರರು ಕೊಡವ ಲಾಂಛನವನ್ನು ತಮ್ಮ ವಾಹನಗಳಲ್ಲಿ ಬಳಕೆ ಮಾಡುತ್ತಿದ್ದು ಲಾಂಛನದ ದುರ್ಬಳಕೆಯಾಗುತ್ತಿದೆ ಎಂದರು.
ಇದೀಗ `ವಾಸ್ಕ್’ನಲ್ಲಿ ಕೂಡ ಕೊಡವ ಲಾಂಛನದ ದುರ್ಬಳಕೆಯಾಗುತ್ತಿದ್ದು, ಕೂಡಲೇ ಅಂಗಡಿಗಳಿಗೆ ನೀಡಲಾದ ಮಾಸ್ಕ್’ಗಳನ್ನು ಹಿಂಪಡೆಯಬೇಕು ಹಾಗೇ ಇದನ್ನು ಹಿಂಪಡೆಯದೆ ಮಾರಾಟಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮುಂದಿನ ದಿನಗಳಲ್ಲಿ ಕೊಡವ ಲಾಂಛನಕ್ಕೆ ಸಂಬಂಧಪಡದವರು ತಮ್ಮ ವಾಹನಗಳಲ್ಲಿ ಕೊಡವ ಲಾಂಛನ ಹಾಗೂ ವಾರಿಯಲ್ ಲಾಂಛನ ಬಳಕೆ ಮಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದೆಂದರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಅಣ್ಣೀರ ಹರೀಶ್ ಮಾದಪ್ಪ, ಸಂಘಟನಾ ಕಾರ್ಯದರ್ಶಿ ಅಜ್ಜಿಕುಟೀರ ಪೃಥ್ವಿ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿ ಸಣ್ಣುವಂಡ ದರ್ಶನ್ ಕಾವೇರಪ್ಪ, ಸಹ ಕಾರ್ಯದರ್ಶಿ ಅಪ್ಪಂಡೇರಂಡ ದೇವಯ್ಯ, ಖಜಾಂಚಿ ಚೆರಿಯಪಂಡ ವಿಶು ಕಾಳಪ್ಪ, ಗೌರವ ಸಲಹೆಗಾರ ಮುಲ್ಲೇಂಗಡ ರೇವತಿ ಪೂವಯ್ಯ, ಸದಸ್ಯರಾದ ತೇಲಪಂಡ ಕವನ್ ಕಾರ್ಯಪ್ಪ, ಕಾಣತಂಡ ವಿವೇಕ್ ಅಯ್ಯಪ್ಪ ಹಾಗೂ ಕೊಂಡೀರ ದೇಷಿಕಾ ಉಪಸ್ಥಿತರಿದ್ದರು.